Home News “ಬದುಕು ಧನ್ಯೋಸ್ಮಿ” ಕೃತಿ ಬಿಡುಗಡೆ

“ಬದುಕು ಧನ್ಯೋಸ್ಮಿ” ಕೃತಿ ಬಿಡುಗಡೆ

0
baduku dhanyosmi Book Release

ಕತೆ ಹೇಳಬೇಕಾದ ಅಜ್ಜಿಯರು ಇಂದು ಟಿವಿ ಮುಂದಿದ್ದರೆ, ಕತೆ ಕೇಳಬೇಕಾದ ಮೊಮ್ಮಕ್ಕಳ ಕೈಲಿ ಮೊಬೈಲ್ ಬಂದಿದೆ. ಇದು ಬದಲಾಗಬೇಕು. ಮಕ್ಕಳ ಮನಸ್ಸು ಸೃಜನಶೀಲವಾಗಿ ಅರಳಬೇಕಾದರೆ ಕತೆ ಹೇಳುವ, ಕೇಳುವ ಮತ್ತು ಓದುವ ಸಂಸ್ಕೃತಿ ಹೆಚ್ಚಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ ತಿಳಿಸಿದರು.

 ತಾಲ್ಲೂಕಿನ ಸುಂಡ್ರಹಳ್ಳಿ ಗ್ರಾಮದಲ್ಲಿ ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಲೇಖಕ ಶ್ರೀನಿವಾಸಮೂರ್ತಿ.ಎನ್.ಸುಂಡ್ರಹಳ್ಳಿ ಅವರ “ಬದುಕು ಧನ್ಯೋಸ್ಮಿ” ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

 ಎಲ್ಲೆಡೆ ಓದುವ ಸಂಸ್ಕೃತಿ ಬೆಳೆಯಬೇಕು. ಶಿಕ್ಷಕರು ಸೇರಿದಂತೆ ವಿವಿಧ ಕ್ಷೇತ್ರಗಳ ಯುವ ಜನರು ಬರವಣಿಗೆಯತ್ತ ಆಕರ್ಷಿತರಾಗಬೇಕು. ಶ್ರೀನಿವಾಸಮೂರ್ತಿ ಅವರು ತಮ್ಮ ಗೃಹಪ್ರವೇಶದ ನೆನಪನ್ನು ಹಸಿರಾಗಿರಿಸುವ ಮಾರ್ಗವಾಗಿ ಪುಸ್ತಕ ಬಿಡುಗಡೆಯಂತಹ ಉತ್ತಮ ಕಾರ್ಯದಿಂದ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಪತ್ರಕರ್ತ ವಿಶ್ವೇಶ್ವರಭಟ್ ಮಾತನಾಡಿ, ಜಗತ್ತಿನಲ್ಲಿ ಅಕ್ಷರಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅಕ್ಷರವೆಂದರೆ ನಾಶಪಡಿಸಲಾಗದ್ದು ಎಂಬ ಅರ್ಥವಿದೆ. ಬರೆದ ಅಕ್ಷರ ಮಾತ್ರ ಎಂದಿಗೂ ನಾಶವಾಗದೆ ಓದುಗರ ಎದೆಯಲ್ಲಿ ಶಾಶ್ವತವಾಗಿ ಜೀವಿಸುತ್ತಿರುತ್ತದೆ. ಲೇಖಕ ಶ್ರೀನಿವಾಸಮೂರ್ತಿ ಸುಂಡ್ರಹಳ್ಳಿ ಮೂಲಕ ಅಕ್ಷರ ಸಂಸ್ಕೃತಿಯನ್ನು ಜಗತ್ತಿಗೆ ಪಸರಿಸುವ ಕೆಲಸ ಮಾಡಲು ಮುಂದಾಗಿದ್ದಾರೆ. ಸುಂಡ್ರಹಳ್ಳಿ ಮತ್ತೊಂದು ಹೆಗ್ಗೋಡಿನಂತಾಗಲಿ, ಸಾಂಸ್ಕೃತಿಕ ನೆಲೆಯಾಗಲಿ ಎಂದು ಹಾರೈಸಿದರು.

 ಕರ್ನಾಟಕದ ಶಿಕ್ಷಕರು, ಪ್ರಾಂಶುಪಾಲರು, ಅಧ್ಯಾಪಕರು ಬರೆಯಲು ಪ್ರಯತ್ನಿಸಿದರೆ ಸಾಕಷ್ಟು ಜ್ಞಾನ ಪ್ರಸಾರ ಮಾಡಲು ಸಾಧ್ಯ. ದುರಂತವೆಂದರೆ ಇವರಾರೂ ಕೂಡ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಮಾಡಿಲ್ಲ. ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಜನರೊಟ್ಟಿಗೆ ಬೆರೆತು ಅದರ ಅನುಭವಗಳನ್ನು ದಾಖಲಿಸುವುದು ಬಹಳ ಮುಖ್ಯ. ಗ್ರಾಮೀಣ ಪ್ರದೇಶವನ್ನು ವಿಕಾಸಪಥದತ್ತ ತೆಗೆದುಕೊಂಡು ಹೋಗಲು ಹಣ ಹಂಚಬೇಡಿ, ದೊಡ್ಡ ದೊಡ್ಡ ಕಾಮಗಾರಿಗಳನ್ನು ತರಬೇಡಿ ಬದಲಿಗೆ ಪುಸ್ತಕ ಮತ್ತು ಪತ್ರಿಕೆಗಳ ಪ್ರಸರಣ ಮಾಡಿದರೆ ಸಾಕು. ಕೆಲವೇ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದ ಪರಿಸರ ಅಮೂಲಾಗ್ರ ಬದಲಾವಣೆಗೆ ತೆರೆದುಕೊಳ್ಳುತ್ತವೆ ಎಂದರು.

 ಕಾರ್ಯಕ್ರಮದಲ್ಲಿ ಪ್ರಕಾಶಕ ಜಮೀಲ್ ಸಾವಣ್ಣ, ಲೇಖಕ ಶ್ರೀನಿವಾಸಮೂರ್ತಿ.ಎನ್.ಸುಂಡ್ರಹಳ್ಳಿ, ಮಂಜುಶ್ರೀ, ಕೃಷ್ಣಮ್ಮ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version