ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನ ಮೇಲೂರು ಬಿ.ಎನ್.ರವಿಕುಮಾರ್ 16,772 ಮತಗಳ ಅಂತರದಿಂದ ವಿಜೇತರಾಗಿ ಶಿಡ್ಲಘಟ್ಟ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೂ ನಡೆದುಕೊಂಡು ಬಂದಂತೆ ಒಂದು ಬಾರಿ ಕಾಂಗ್ರೆಸ್ ಗೆದ್ದರೆ, ಮತ್ತೊಂದು ಬಾರಿ ಜೆಡಿಎಸ್ ಗೆಲುವು ಎಂಬ ವಿದ್ಯಮಾನ ಈ ಗೆಲುವಿನಿಂದಾಗಿ ಮತೊಮ್ಮೆ ನಿಜವಾಗಿದೆ. ಕಳೆದ ವಿಧಾನಸಭೆಯ ಚುನಾವಣೆಯಲ್ಲಿ (2018) ಕೇವಲ 9,709 ಮತಗಳ ಅಂತರದಿಂದ ಪರಾಭವಗೊಂಡಿದ್ದ ಬಿ.ಎನ್.ರವಿಕುಮಾರ್ ಈ ಬಾರಿ ಗೆದ್ದಿರುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಸಂಭ್ರಮ ಉಂಟುಮಾಡಿದೆ.
ಜೆಡಿಎಸ್‌ನ ಬಿ.ಎನ್.ರವಿಕುಮಾರ್ (68,932), ಪಕ್ಷೇತರ ಅಭ್ಯರ್ಥಿ ಆಂಜಿನಪ್ಪ ಪುಟ್ಟು (52,160), ಕಾಂಗ್ರೆಸ್‌ನ ರಾಜೀವ್ ಗೌಡ (36,157), ಬಿಜೆಪಿಯ ರಾಮಚಂದ್ರಗೌಡ (15,446) ಮತಗಳನ್ನು ಪಡೆದಿದ್ದಾರೆ.
ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಮೇಲೂರಿಗೆ ತೆರಳಿ ಬಿ.ಎನ್.ರವಿಕುಮಾರ್ ಅವರನ್ನು ಅಭಿನಂದಿಸಿದರು. ಮೇಲೂರಿಗೆ ಅಭಿನಂದಿಸಲೆಂದು ಬಂದ ಕಾರ್ಯಕರ್ತರಿಗೆಲ್ಲಾ ಸಿಹಿ ಹಂಚಲಾಯಿತು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತಗಳು 1,77,260. ಅವುಗಳಲ್ಲಿ 1,125 ಅಂಚೆ ಮತಗಳು. ಅಂಚೆ ಮತಗಳಲ್ಲಿ ವಿಜೇತ ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ (543), ಪಕ್ಷೇತರ ಅಭ್ಯರ್ಥಿ ಆಂಜಿನಪ್ಪ ಪುಟ್ಟು (152), ಕಾಂಗ್ರೆಸ್‌ನ ರಾಜೀವ್ ಗೌಡ (313), ಬಿಜೆಪಿಯ ರಾಮಚಂದ್ರಗೌಡ (97) ಮತಗಳನ್ನು ಪಡೆದಿದ್ದಾರೆ.
ಬಿ.ಎನ್.ರವಿಕುಮಾರ್‌ಗೆ ಫಲ ನೀಡಿದ ಸಾಮಾಜಿಕ ಕಾರ್ಯಗಳು :
ಕ್ಷೇತ್ರದ ನಾಲ್ಕು ಹೋಬಳಿಗಳ ಪೈಕಿ ತಲಾ ಒಂದರಂತೆ ಆಂಬುಲೆನ್ಸ್ ವಿತರಣೆ, ಬಡವರಿಗೆ ಉಚಿತ ಸಾಮೂಹಿಕ ವಿವಾಹಗಳು, ದಂಪತಿಗಳ ಜೀವನೋಪಾಯಕ್ಕಾಗಿ ಸೀಮೆಹಸು ವಿತರಣೆ, ಗರ್ಭಿಣಿಯರಿಗೆ ತಲಾ 10 ಸಾವಿರ ಆರ್ಥಿಕ ಸಹಾಯ ಸೇರಿದಂತೆ ಅಲ್ಪಸಂಖ್ಯಾತರ ಖಬರಾಸ್ಥಾನ್‌ಗಾಗಿ 4 ಎಕರೆ ಜಮೀನು ನೀಡಿದ್ದು ಸೇರಿದಂತೆ ಕಳೆದ ಕೋವಿಡ್ 19 ರ ಅವಧಿಯಲ್ಲಿ ಅವರು ಕೈಗೊಂಡ ಸಾಮಾಜಿಕ ಕಾರ್ಯಗಳು ಹಾಗೂ ಎಲ್ಲರಿಗೂ ಉನ್ನತ ಶಿಕ್ಷಣ ಮತ್ತು ಉತ್ತಮ ಆರೋಗ್ಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ನೀಡಿದ ಕೊಡುಗೆಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿತ್ತು. ಇವೆಲ್ಲದಕ್ಕೂ ಹೆಚ್ಚಾಗಿ ಕಳೆದ ಇಪ್ಪತ್ತು ವರ್ಷಗಳ ಕಾಲ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಬೆನ್ನೆಲುಬಾಗಿ ನಿಂತು ಪಕ್ಷವನ್ನು ಮುನ್ನಡೆಸಿದ ರೀತಿ ಬಿ.ಎನ್.ರವಿಕುಮಾರ್ ಗೆಲುವಿಗೆ ಸಹಕಾರಿಯಾಗಿ ಪರಿಣಮಿಸಿದೆ.
ಅಚ್ಚರಿ ಮೂಡಿಸಿದ ಪುಟ್ಟು :
ಶಿಡ್ಲಘಟ್ಟ ಕ್ಷೇತ್ರದಲ್ಲಿ ಇದುವರೆಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳಾಗಿದ್ದರು. ಆದರೆ ಈ ಬಾರಿ ಅಚ್ಚರಿಯೆಂಬಂತೆ ಸ್ವತಂತ್ರ ಅಭ್ಯರ್ಥಿ ಆಂಜಿನಪ್ಪ ಪುಟ್ಟು ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ಬಾರಿಯೂ ಸ್ವತಂತ್ರ ಅಭ್ಯರ್ಥಿಯಾಗಿದ್ದ ಆಂಜಿನಪ್ಪ ಪುಟ್ಟು 10,986 ಮತಗಳನ್ನು ಪಡೆದಿದ್ದರು. ಈ ಬಾರಿ ಕಡೇ ಕ್ಷಣದಲ್ಲಿ ಕಾಂಗ್ರೆಸ್ ಟಿಕೇಟ್ ನಿಂದ ವಂಚಿತರಾದ ಆಂಜಿನಪ್ಪ ಪುಟ್ಟು, ಕಳೆದ ಚುನಾವಣೆಯಲ್ಲಿ ಪಡೆದ ಮತಕ್ಕಿಂದ ಐದು ಪಟ್ಟು ಹೆಚ್ಚು ಅಂದರೆ 52,160 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ ತಾವು ಪಡೆದ ಮತಗಳ ಮೂಲಕ ಅವರ ತಪ್ಪನ್ನು ತೋರಿಸಿಕೊಟ್ಟಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ 52,160 ಮತಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ನ ವಿ.ಮುನಿಯಪ್ಪ ಅವರು 76,240 ಮತಗಳನ್ನು ಪಡೆದಿದ್ದರೆ, ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ 36,157 ಮತಗಳನ್ನು ಪಡೆದಿದ್ದಾರೆ. ಈ ವ್ಯತ್ಯಾಸ ಮತಗಳು (40,083) ಬಂಡಾಯ ಅಭ್ಯರ್ಥಿ ಆಂಜಿನಪ್ಪ ಪುಟ್ಟು ಪಾಲಾಗಿವೆ.
ಮೂರನೇ ಸ್ಥಾನ ಪಡೆದುಕೊಂಡ ಕಾಂಗ್ರೆಸ್ ಅಭ್ಯರ್ಥಿ,
ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರ ಈ ಹಿಂದಿನಿಂದಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಭದ್ರಕೋಟೆಯಂತಿತ್ತು. ಆದರೆ ಶಾಸಕ ವಿ.ಮುನಿಯಪ್ಪ ಅನಾರೋಗ್ಯ ಕಾರಣದಿಂದ ಕ್ಷೇತ್ರದ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವಂತಹ ಮತ್ತೋರ್ವ ನಾಯಕ ಕ್ಷೇತ್ರದಲ್ಲಿರದೇ ಇದ್ದುದು ಒಂದು ಕಾರಣವಾದರೆ, ಅಂತಿಮ ಕ್ಷಣದವರೆಗೂ ಪಕ್ಷೇತರ ಅಭ್ಯರ್ಥಿ ಆಂಜಿನಪ್ಪ ಪುಟ್ಟು ಹಾಗೂ ಬಿ.ವಿ.ರಾಜೀವ್‌ಗೌಡ ಇಬ್ಬರಲ್ಲಿ ಒಬ್ಬರಿಗೆ ಕಾಂಗ್ರೆಸ್ ವರಿಷ್ಠರು ಪಕ್ಷದ ಬಿ ಫಾರಂ ನೀಡುವಲ್ಲಿ ಕೈಗೊಂಡ ತೀರ್ಮಾನದಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ರಾಜೀವ್‌ಗೌಡ 36,157 ಮತ ಪಡೆದು ಮೂರನೇ ಸ್ಥಾನ ತಲುಪಲು ಕಾರಣವಾಯಿತು.
ಸಾಧನೆ ತೋರದ ಬಿಜೆಪಿ :
ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸುರೇಶ್ 3,596 ಮತಗಳನ್ನು ಮತ್ತು ಎಂ.ರಾಜಣ್ಣ 8,593 ಮತಗಳನ್ನು ಪಡೆದಿದ್ದರು. ಈ ಬಾರಿ ಎಂ.ರಾಜಣ್ಣ ಬಿಜೆಪಿ ಅಭ್ಯರ್ಥಿಯ ಜೊತೆಗೂಡಿದ್ದರಿಂದಾಗಿ ಈ ಒಟ್ಟು ಮತಗಳ ಜೊತೆಯಲ್ಲಿ 3,257 ಮತಗಳನ್ನು ಬಿಜೆಪಿ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ ಹೆಚ್ಚಿಸಿಕೊಂಡು ಒಟ್ಟು 15,446 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸ್ಟಾರ್ ಪ್ರಚಾರಕರಾದ ಕಿಚ್ಚಾ ಸುದೀಪ್, ಧ್ರುವ ಸರ್ಜಾ, ಮಾಳವಿಕಾ ಅವಿನಾಶ್ ಕರೆಸಿ ಮಾಡಿದ ರೋಡ್ ಶೋ, ಶ್ರೀನಿವಾಸ ಕಲ್ಯಾಣೋತ್ಸವ, ಕಬ್ಜಾ ಚಲನಚಿತ್ರದ ಆಡಿಯೋ ರಿಲೀಸ್ ಮುಂತಾದ ಅದ್ದೂರಿ ಕಾರ್ಯಕ್ರಮಗಳು ಮತದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿಲ್ಲ.
ಚುನಾವಣಾ ವರ್ಷ ಗೆಲುವಿನ ಅಂತರ
2023 16,772
2018 9,709
2013 15,479
2008 6,502
2004 7,447
1999 12,465
1994 6,987
1989 25,072
1985 10,201
1983 2,513
1978 7,577
1972 14,434