Sidlaghatta : ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೆಲೆ ತಾಲ್ಲೂಕಿನ ಶ್ರೀರಾಮ, ಆಂಜನೇಯ ಹಾಗೂ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಹೋಮ, ಪ್ರಸಾದವಿನಿಯೊಗ ನಡೆಯಿತು. ನಗರ ಸೇರಿದಂತೆ ತಾಲ್ಲೂಕಿನ ವಿವಿದೆಡೆ ಶ್ರೀರಾಮನ ಚಿತ್ರವಿರುವ ಧ್ವಜವನ್ನು ಹಾರಿಸಲಾಗಿತ್ತು.
ನಗರದ ಕೋಟೆ ಶ್ರೀರಾಮ ದೇವಾಲಯದಲ್ಲಿ ವಿಶೇಷ ಹೋಮ ಹಾಗೂ ಪೂಜೆಯನ್ನು ನೆರೆವೇರಿಸಿ, ದೇವಾಲಯವನ್ನು ಮತ್ತು ದೇವರನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ನಗರದ ವಿವಿಧ ವಾರ್ಡುಗಳಲ್ಲಿ ಲಾಡುಗಳನ್ನು ವಿತರಿಸಲಾಯಿತು.
ತಾಲ್ಲೂಕಿನ ಕದಿರಿನಾಯಕನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ 9ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅಯೋಧ್ಯೆಯ ಶ್ರೀ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ವಿಶೇಷ ಪೂಜೆ ನಡೆಸಲಾಯಿತು. ಶ್ರೀರಾಮ ಕಲ್ಯಾಣೋತ್ಸವವನ್ನು ಆಯೋಜಿಸಲಾಗಿತ್ತು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, “ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯು ಅಖಂಡ ಭಾರತದ ಐಕ್ಯತೆಯ ಸಂಕೇತವಾಗಿದೆ. ಶ್ರೀರಾಮಚಂದ್ರ ಕೇವಲ ದೇವರಲ್ಲ, ಭಾರತೀಯರ ಅಸ್ಮಿತೆ, ನಮ್ಮ ರಾಷ್ಟ್ರದ ಐಕ್ಯತೆ ಮತ್ತು ಭಾವೈಕೆತೆಯ ಪ್ರತೀಕವೂ ಹೌದು. ಈ ರಾಮ ಮಂದಿರ ಕೇವಲ ಧಾರ್ಮಿಕ ಕೇಂದ್ರವಾಗಿ ಮಾತ್ರ ಗುರುತಿಸಿಕೊಳ್ಳದೇ, ಸಾಮಾಜಿಕ ಮತ್ತು ಆರ್ಥಿಕವಾಗಿ ಆ ಪ್ರದೇಶದ ಮೇಲೆ ಪರಿಣಾಮ ಬೀರಬಲ್ಲದು” ಎಂದು ಹೇಳಿದರು.
ಮಾಜಿ ಶಾಸಕರಾದ ವಿ.ಮುನಿಯಪ್ಪ, ಎಂ.ರಾಜಣ್ಣ, ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಆನಂದಗೌಡ, ಮುನಿರತ್ನಂ, ವೇಣು, ಸಚಿನ್ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಕದಿರಿನಾಯಕನಹಳ್ಳಿ :
ಕದಿರಿನಾಯಕನಹಳ್ಳಿಯಲ್ಲಿ ಮನೆಗಳ ಮೇಲೆ ಕೇಸರಿ ಧ್ವಜ ಹಾರುತ್ತಿದ್ದವು ಹಾಗೂ ಗ್ರಾಮವು ಕೇಸರಿಮಯವಾಗಿ ಕಾಣುತ್ತಿತ್ತು ಹಾಗೂ ರಾಮನ ದಶಾವತಾರದ ಭಾವಚಿತ್ರಗಳನ್ನು ದಾರಿ ಉದ್ದಕ್ಕೂ ಹಾಕಲಾಗಿತ್ತು.
ಸುಮಾರು 25 ಅಡಿ ಉದ್ದದ ಶ್ರೀರಾಮನ ಭಾವಚಿತ್ರದ ಬ್ಯಾನರ್ ನಿಲ್ಲಿಸಿ ಅದಕ್ಕೆ ಪೂಜೆ ಸಲ್ಲಿಸಿ ನಂತರ ಸೀತಾರಾಮ ಲಕ್ಷ್ಮಣ ಸಮೇತ ಆಂಜನೇಯ ಸ್ವಾಮಿಯ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮದ ಹಿರಿಯರು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ವೀರಣ್ಣ ಕೆಂಪಣ್ಣ ದೇವಾಲಯ :
ನಗರ ಹೊರವಲಯದ ಹಂಡಿಗನಾಳದ ಬಳಿಯ ಕೆಂಪಣ್ಣ ಸ್ವಾಮಿ ವೀರಣ್ಣ ಸ್ವಾಮಿ ದೇವಾಲಯದಲ್ಲಿ ಶ್ರೀರಾಮ ಮೂರ್ತಿಗೆ ವಿಶೇಷ ಅಲಂಕಾರ ಮತ್ತು ಪೂಜೆ ಮಾಡಲಾಯಿತು.
ಬೆಳಗ್ಗೆಯಿಂದಲೇ ವಿಶೇಷ ಹೋಮ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಶ್ರೀ ಕೆಂಪಣ್ಣ ಮತ್ತು ವೀರಣ್ಣ ಸ್ವಾಮಿ ಟ್ರಸ್ಟ್ ವತಿಯಿಂದ ಶ್ರೀ ರಾಮನ ಆರಾಧನೆ ಮಾಡುವ ಜೊತೆಗೆ ದೇವಾಲಯದಲ್ಲಿ ಶ್ರೀ ಗಣೇಶನ ವಿಗ್ರಹ ಪ್ರತಿಷ್ಠಾಪನೆ ಹಾಗೂ ಆಗಮಿಸಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆ ಕಾರ್ಯವನ್ನು ನೆರವೇರಿಸಲಾಯಿತು.
ಟ್ರಸ್ಟಿನ ಅಧ್ಯಕ್ಷ ಎನ್ ನಾಗರಾಜ್, ಉಪಾಧ್ಯಕ್ಷ ಬಿಳಿ ಶಿವಾಲೆ ರವಿ, ಖಜಾಂಚಿ ಮುನಿಸ್ವಾಮಿಗೌಡ, ಸ್ಕೂಲ್ ದೇವರಾಜ್, ಗೊರಮಡುಗು ರಾಜಣ್ಣ, ನಾರಾಯಣಸ್ವಾಮಿ, ಯಡಿಯೂರ್ ಶಾಂತಮೂರ್ತಿ, ಜಂಗಮಕೋಟೆ ನಾಗರಾಜ್ ಹಾಜರಿದ್ದರು.
ಕೊತ್ತನೂರು :
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿದ್ದು, ಪುರಾತನ ಹಳೆಯ ರಾಮನ ವಿಗ್ರಹಕ್ಕೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು.
ದೇವರಿಗೆ ಮಹಾಭಿಷೇಕ ಹಾಗೂ ಶ್ರೀ ರಾಮ ತಾರಕ ಹೋಮ ಹಾಗೂ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಕೊತ್ತನೂರಿನ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರಾಮಾಯಣದ ಬಗ್ಗೆ ರಸಪ್ರಶ್ನೆಯನ್ನು ಹಮ್ಮಿಕೊಂಡಿದ್ದು, ವಿಜೇತರಾದ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.
ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಲಾಡುಗಳನ್ನು ವಿತರಿಸಲಾಯಿತು ಮತ್ತು ಕೊತ್ತನೂರಿನ ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಗ್ರಾಮದ ರವಿಕುಮಾರ್, ಲಕ್ಷ್ಮಿಪತಿ, ನವೀನ್, ಶಂಕರ್ ,ಮನೋಜ್, ಸುಮಂತ್, ವಿನೋದ್, ಸುಮನ್, ಗೌರಿಶಂಕರ್, ಶಶಿ ಕುಮಾರ್, ಶ್ರೀನಿವಾಸ್ ಶಾಸ್ತ್ರಿ, ಭಜನಾಮಂಡಳಿ ಮುಖ್ಯಸ್ಥರಾದ ಚೀಮನಹಳ್ಳಿ ಮುನಿಶಾಮಪ್ಪ ಹಾಜರಿದ್ದರು.