ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಮಾನ್ಯ ಯೋಜನೆಯಲ್ಲಿ ಗುರುಶಿಷ್ಯ ಪರಂಪರೆ ತರಬೇತಿ ಶಿಬಿರವನ್ನು ಡೊಳ್ಳು ಬಾರಿಸುವ ಮೂಲಕ ಉದ್ಟಾಟಿಸಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವರದನಾಯಕನಹಳ್ಳಿ ವಿ.ಜಿ ಕೃಷ್ಣಮೂರ್ತಿ ಮಾತನಾಡಿದರು.
ಜಾನಪದ ಕಲೆಗಳು ಹಳ್ಳಿ ಜನರ ಬದುಕುಗಳನ್ನು ಸಾರಿ ಹೇಳುವ ಸಾಂಸ್ಕೃತಿಕ ಪರಂಪರೆಗಳು. ಇತ್ತೀಚೆಗೆ ಪೌರಾಣಿಕ ನಾಟಕಗಳ ಜೊತೆಗೆ ಹಲವಾರು ಜಾನಪದ ಕಲೆಗಳು ನಶಿಸಿಹೋಗುತ್ತಿವೆ. ಮರೆಯಾಗುತ್ತಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುಗಳಿಗೆ ಮತ್ತು ತರಬೇತಿ ಪಡೆಯುವಂತ ಕಲಾವಿದರಿಗೆ ಅವಕಾಶ ಕಲ್ಪಿಸಿರುವುದನ್ನು ಈಗಿನ ಯುವ ಪೀಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜಾನಪದ, ಲಾವಣಿ, ಸೋಬಾನೆ ಬೀಸೊಕಲ್ಲಿನ ಪದ, ಗೀಗಿ ಪದ ಕೋಲಾಟ ಹಾಡುಗಳ ಮೂಲಕವಲ್ಲದೆ ವಿವಿಧ ಪ್ರಕಾರಗಳಾದ ಕಂಸಾಳೆ, ನಗಾರಿ, ಪಟ್ಟದ ಕುಣಿತ, ಡೊಳ್ಳುಕುಣಿತ, ವೀರಗಾಸೆ, ತಮಟೆ, ಸೋಮನಕುಣಿತ ಇನ್ನು ಅನೇಕ ಕಲಾ ಪ್ರಕಾರಗಳಿಂದ ಕಲಾವಿದರಿಗೆ ನೆಲೆಕೊಟ್ಟ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಬೇಕೀಂದರು.
ಈಧರೆ ತಿರುಮಲ ಪ್ರಕಾಶ್ ಮಾತನಾಡಿ, ಸುಮಾರು ಹದಿನೈದು ವರ್ಷಗಳಿಂದ ಕಲಾವಿದನಾಗಿ ಈಧರೆ ಡೊಳ್ಳು ಕುಣಿತ ತಂಡದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿರುವೆ. ಈ ಸೇವೆಯನ್ನು ಗುರುತಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಮೂಲ ಕಲೆಗಳನ್ನು ಉಳಿಸಿ ಬೆಳೆಸುವಂತ ಗುರುಶಿಷ್ಯ ಪರಂಪರೆ ಮೂಲಕ ಜಾನಪದ ಕಲೆಯನ್ನು ತರಬೇತಿ ನೀಡಲು ನನಗೆ ತರಬೇತಿದಾರನಾಗಿ ಅವಕಾಶ ಕಲ್ಪಿಸಿದ್ದಾರೆ. ಈ ಮೂಲಕ ಆಸಕ್ತ ಕಲಾವಿದರಿಗೆ ತರಬೇತಿ ನೀಡುತ್ತೇನೆ ಎಂದರು.
ಗ್ರಾಮದ ಹಿರಿಯ ವಿ.ಪಿ ಪಿಳ್ಳಮುನಿಶಾಮಪ್ಪ, ವಿ.ಎನ್ ಕೃಷ್ಣಮೂರ್ತಿ, ಮುನಿರೆಡ್ಡಿ, ದಲಿತ ಸಂಘರ್ಷ ಸಮಿತಿ ತಾಲ್ಲೂಕು ಶಿಸ್ತು ಮತ್ತು ಆಂತರಿಕ ಸಂಚಾಲಕ ತಾತಹಳ್ಳಿ ಚಲಪತಿ, ಹನುಮಂತಪುರ ರಾಮಸ್ವಾಮಿ, ಸಮತಾ ಸೈನಿಕ ದಳ ತಾಲ್ಲೂಕು ಉಪಾಧ್ಯಕ್ಷ ಅಬ್ಲೂಡು ಮಂಜುನಾಥ್, ಸಂಘಟನಾ ಕಾರ್ಯದರ್ಶಿ ತಾತಹಳ್ಳಿ ಗಂಗಧರ್, ಮೂರ್ತಿ, ಅಶೋಕ್, ಡೊಳ್ಳುಕುಣಿತ ಕಲಾವಿದ ವರದನಾಯಕನಹಳ್ಳಿ ಮಧು, ಶಶಿಕುಮಾರ್, ನರಸಿಂಹಮೂರ್ತಿ ಹಾಜರಿದ್ದರು.