ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯನುಭವ ಚಟುವಟಿಕೆ ಅಡಿಯಲ್ಲಿ ಸುಮಾರು 4 ತಿಂಗಳುಗಳ ಕಾಲ ನೆಲೆಸಿದ್ದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳನ್ನು ಗ್ರಾಮಸ್ಥರು ಅಭಿನಂದಿಸಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಜಿಕೆವಿಕೆ ರಾಷ್ಟೀಯ ಸ್ವಯಂ ಸೇವಾ ಘಟಕದ ವತಿಯಿಂದ ಶಾಲಾವಾರಣದಲ್ಲಿ ಗಿಡ ನೆಟ್ಟು ಪರಿಸರ ಕಾಳಜಿಯ ಬಗ್ಗೆ ಹೇಳಲಾಯಿತು. ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಕೊಡುವುದರ ಮೂಲಕ ಕಲಿಕೆಗೆ ಒತ್ತುಕೊಡಲು ಹುರಿದುಂಬಿಸಲಾಯಿತು. ವೀಣೆ ನುಡಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಿಕೆವಿಕೆ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಅಭಿನಂದನಾ ಸಮಾರಂಭದಲ್ಲಿ ಗ್ರಾಮಸ್ಥರಿಗೆ ವಿದ್ಯಾರ್ಥಿಗಳು ಗಿಡ ಕೊಟ್ಟು ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸಿದರು. ಊರಿನ ಜನರಿಗೆ ಏರ್ಪಡಿಸಲಾಗಿದ್ದ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಗ್ರಾಮದ ಕೃಷ್ಣೆಗೌಡರು ವಿದ್ಯಾರ್ಥಿಗಳ ಬಗ್ಗೆ ಮಾತನಾಡಿ, ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ರಾವೆ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಗ್ರಾಮಕ್ಕೆ ಬಂದಿದ್ದರು. ಗ್ರಾಮದ ರೈತರಿಗೆ ಕೃಷಿ ಸಂಬಂಧಿ ವಿವಿಧ ತಂತ್ರಜ್ಞಾನದ ಮಾಹಿತಿಯನ್ನು ತಿಳಿಸಲು ಅವರ ಪ್ರಾದ್ಯಾಪಕರ ಸಲಹೆಯಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಹೈನುಗಾರಿಕೆ, ರೇಷ್ಮೆ ಕೃಷಿ, ಒಣಬೇಸಾಯ ಪದ್ಧತಿ, ಬೀಜೋಪಚಾರ, ಆಹಾರ ಸಂಸ್ಕರಣೆ, ಬಿತ್ತನೆ ಬೀಜಗಳ ಆಯ್ಕೆ, ಕೊಳವೆ ಬಾವಿಗಳ ಮರುಪೂರಣ, ಮಳೆ ನೀರು ಕೊಯ್ಲುಗಳ ಬಗ್ಗೆ ಮತ್ತು ರೈತ ಮಹಿಳೆಯರಿಗೆ ವಿವಿಧ ರೀತಿಯ ಆಹಾರ ಪದ್ಧತಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು ಅಪ್ಪೆಗೌಡನಹಳ್ಳಿ ಗ್ರಾಮದ ಪ್ರತಿಯೊಂದು ಕುಟುಂಬದ ಮನೆ ಮಕ್ಕಳ ರೀತಿಯಲ್ಲಿ ಹೊಂದಿಕೊಂಡಿರುವುದು ನಮಗೆ ಸಂತಸ ತಂದಿದೆ ಎಂದು ಹೇಳಿದರು.
ವಿದ್ಯಾರ್ಥಿನಿ ಅರ್ಪಿತಾ ಮಾತನಾಡಿ, ನಮ್ಮೂರು ಅಂದ್ರೆ ಅಪ್ಪೆಗೌಡನಹಳ್ಳಿ ಅಂತ ಹೇಳೋರೀತಿ ನಾವು ಬದಲಾಗಿದ್ದೀವಿ. ನಾನೂ ಹಳ್ಳಿಯಲ್ಲೇ ಬೆಳೆದಿದ್ದು, ಆದರೆ ಈ ಊರಿಗೆ ಬಂದಾಗ ಇಲ್ಲಿ ಜನ ಕೊಟ್ಟ ಪ್ರೀತಿ ನಮ್ಮೂರಲ್ಲೂ ಸಿಕ್ಕಿಲ್ಲ. ಅದೆಷ್ಟು ಮನೆಯಲ್ಲಿ ಊಟ ಮಾಡಿದ್ದಿವೋ, ವಾಕಿಂಗ್ ಹೋಗಿದ್ದು, ಸಂಜೆ ಸಭೆ ಮಾಡಿದ್ದು, ಸುಡುಬಿಸಿಲಲ್ಲಿ ಕೆಲಸ ಮಾಡಿದ್ದು, ಜೊತೆಗೆ ಸೇರಿ ಹಬ್ಬ ಆಚರಿಸಿದ್ದು, ತೋಟಕ್ಕೆ ಹೋಗಿದ್ದು, ದ್ರಾಕ್ಷಿ ತಿಂದಿದ್ದು ಇನ್ನೂ ಹಲವಾರು ಮನರಂಜನಾ ಕಾರ್ಯಕ್ರಮ ಏರ್ಪಡಿಸಿದ್ದು, ವಿದ್ಯಾರ್ಥಿ ಜೀವನದಲ್ಲಿ ಇಂತಹ ಅಮೋಘ ಅನುಭವ ಪಡೆದ ನಾವೇ ಧನ್ಯರು ಎಂದು ಹೇಳಿದರು.
ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗ್ರಾಮಸ್ಥರು ನೆನಪಿನ ಕಾಣಿಕೆ ಕೊಟ್ಟು ಅಭಿನಂದನಾ ಪತ್ರ ವಿತರಿಸಿದರು. ಎ.ಎಂ.ತ್ಯಾಗರಾಜ್, ಮುನಿಂದ್ರ, ದ್ಯಾವಪ್ಪ, ಮಧು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.