Anur, Sidlaghatta : ಸ್ವಚ್ಛ, ಹಸಿರು ಹಾಗೂ ಆರೋಗ್ಯ ಸಮೃದ್ಧಿ ಗ್ರಾಮವನ್ನಾಗಿಸಿ ಸುಸ್ಥಿರ ಅಭಿವೃದ್ಧಿ ಸಾಧಿಸುವುದು ನಮ್ಮ ಗುರಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬೆಳ್ಳೂಟಿ ಸಂತೋಷ್ ತಿಳಿಸಿದರು.
ಆನೂರು ಗ್ರಾಮ ಪಂಚಾಯಿತಿ ದೂರದೃಷ್ಠಿ ಯೋಜನಾ ಪ್ರಕ್ರಿಯೆಯಲ್ಲಿ ಶುಕ್ರವಾರ ಭಾಗವಹಿಸಿ ಅವರು ಮಾತನಾಡಿದರು.
ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಂಘ-ಸಂಸ್ಥೆಗಳು, ಸರ್ಕಾರದ ವಿವಿಧ ಇಲಾಖೆಗಳು ಹಲವಾರು ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸಿವೆ. ಆದ್ದರಿಂದ ಗ್ರಾಮ ಪಂಚಾಯಿತಿಗಳು ಬಡತನ ಮುಕ್ತ, ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿ ಗ್ರಾಮವನ್ನಾಗಿಸುವ ಮೂಲಕ ಈ ಗುರಿಯನ್ನು ಸಾಧಿಸಬೇಕಿದೆ. ಪ್ರಮುಖವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ತಳಮಟ್ಟದಿಂದ ಅಭಿವೃದ್ಧಿಯನ್ನು ಸಾಧಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 29 ಕಾರ್ಯಕ್ರಮಗಳಿಗೆ ಸಂಬಂಧಿಸಿದ ಇಲಾಖೆಗಳ ಕಾರ್ಯಕ್ರಮಗಳನ್ನು ಒಟ್ಟುಗೂಡಿಸಿ ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗಾಗಿ 5 ವರ್ಷಗಳ ದೂರದೃಷ್ಟಿ ಯೋಜನೆಯನ್ನು ಸಮುದಾಯದ ಸಹಭಾಗಿತ್ವದಲ್ಲಿ ತಯಾರಿಸಿ, ಬಡತನ ಮುಕ್ತ, ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿ ಗ್ರಾಮ ಮತ್ತು ಗ್ರಾಮ ಪಂಚಾಯಿತಿಗಳನ್ನಾಗಿ ರೂಪಿಸುವುದು ನಮ್ಮ ಗುರಿಯಾಗಬೇಕು ಎಂದರು.
ಈ 5 ವರ್ಷಗಳಲ್ಲಿ ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡುವುದಲ್ಲದೇ ಯಾವುದೇ ಮಗುವೂ ಪ್ರಾರ್ಥಮಿಕ ಶಿಕ್ಷಣದಿಂದ ವಂಚಿತರಾಗದಂತೆ, ಪ್ರತಿಯೊಂದು ಮಗುವು ಉತ್ತಮವಾಗಿ ಕಲಿಯುವ ವಾತವರಣವನ್ನು ನಿರ್ಮಾಣ ಮಾಡಿ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿಗಳನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆನೂರು ಗ್ರಾಮ ಪಂಚಾಯಿತಿ ಒಂದು ದಾಪುಗಾಲು ಇಟ್ಟಿದ್ದು ಎಲ್ಲರಿಗೂ ಮಾದರಿಯಾಗುವಂತಹ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಗ್ರಾಮ ಯೋಜನಾ ಸಮಿತಿ ಮರು ರಚನೆ:
ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗಾಗಿ 5 ವರ್ಷಗಳ ಗ್ರಾಮ ಪಂಚಾಯಿತಿ ದೂರದೃಷ್ಟಿ ಯೋಜನೆಯನ್ನು ತಯಾರಿಸಿ ಅನುಷ್ಟಾನ ಮಾಡಲು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯ ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಯೋಜನಾ ಸಮಿತಿಯನ್ನು ರಚನೆ ಮಾಡಲಾಯಿತು. ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಜಲಗಾರರು ಈ ಗ್ರಾಮ ಯೋಜನಾ ಸಮಿತಿಯಲ್ಲಿ ಸದಸ್ಯರಾದರು.
ಮಹಿಳಾ ಸ್ನೇಹಿ ಗ್ರಾಮ ಪಂಚಾಯಿತಿ:
ಅಭಿವೃದ್ಧಿಯ ಕನಸನ್ನು ಕಾಣುವ ಪ್ರತಿಯೊಂದು ಹಳ್ಳಿಯು ತನ್ನ ಪ್ರತಿಯೊಬ್ಬ ಸದಸ್ಯರನ್ನು ಅಭಿವೃದ್ಧಿಯ ಪಾಲುದಾರರನ್ನಾಗಿ ನೋಡಬೇಕಿದೆ. ಪ್ರತಿ ಹಳ್ಳಿಯಲ್ಲಿ ಸರಿಸುಮಾರು ಅರ್ಧದಷ್ಟು ಜನಸಂಖ್ಯೆ ಮಹಿಳೆಯರಿದ್ದಾರೆ. ಮಹಿಳೆಯರ ಪಾಲುದಾರಿಕೆಯಿಲ್ಲದ ಅಭಿವೃದ್ಧಿ ಒಂದೇ ಚಕ್ರದಲ್ಲಿ ಚಲಿಸುವ ಗಾಡಿಯಂತಾಗುತ್ತದೆ. ಸರ್ಕಾರದ ನಿರಂತರ ಪ್ರಯತ್ನಗಳ ನಡುವೆಯೂ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಇಂದಿಗೂ ಮಹಿಳೆಯರು ಹಿಂದುಳಿದಿದ್ದು ಅವರಿಗೆ ಅವಕಾಶವನ್ನು ಕಲ್ಪಿಸಿಕೊಡಲು ಎಲ್ಲರೂ ಸಹಕಾರವನ್ನು ನೀಡಬೇಕು. ಆನೂರು ಗ್ರಾಮ ಪಂಚಾಯಿತಿ ಈ ನಿಟ್ಟಿನಲ್ಲಿ ಹಲವಾರು ಕೆಲಸಗಳನ್ನು ಕೈಗೆತ್ತಿಕೊಂಡಿದ್ದು ಮಹಿಳೆಯರಿಗೆ ಮೊದಲ ಆಧ್ಯತೆಯನ್ನು ನೀಡುತ್ತಿದೆ ಎಂದು ಪಿಡಿಒ ಕಾತ್ಯಾಯನಿ ತಿಳಿಸಿದರು.
ಪೌಂಡೇಷನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಎನ್ ರಮೇಶ್, ಗ್ರಾಮ ಪಂಚಾಯಿತಿ ದೂರದೃಷ್ಠಿ ಯೋಜನಾ ತಯಾರಿಕಾ ಪ್ರಕ್ರಿಯೆಗಳ ಬಗ್ಗೆ ತಿಳಿಸಿಕೊಟ್ಟರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ, ಸದಸ್ಯೆ ಪ್ರೇಮ, ಎ.ಪಿ.ಎಂ.ಸಿ ಉಪಾಧ್ಯಕ್ಷ ಎಸ್ ವೆಂಕಟೇಶ್, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕಿ ಪದ್ಮ, ಮಂಗಳಮ್ಮ, ಆಶಾ ಕಾರ್ಯಕರ್ತೆ ರುಕ್ಮ್ಮಣಿಯಮ್ಮ, ಅಂಗನವಾಡಿ ಕಾರ್ಯಕರ್ತೆ ವೆಂಕಟಲಕ್ಷಮ್ಮ, ಚಂದ್ರಣ್ಣ, ಎಚ್.ನಾರಾಯಣಸ್ವಾಮಿ, ಎಸ್.ಎಫ್.ಸಿ.ಎಸ್ ಅಧ್ಯಕ್ಷ ಕೃಷ್ಣಪ್ಪ, ಸಂಪನ್ಮೂಲ ವ್ಯಕ್ತಿಗಳದ ಮುನಿರಾಜು, ಶ್ವೇತಾ, ವಾಣಿರೆಡ್ಡಿ, ಗಾಯತ್ರಿ, ಮಲಾವತಿ ಹಾಜರಿದ್ದರು.