H-Cross, Sidlaghatta : ಭವಿಷ್ಯದ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಅಭಿವೃದ್ದಿಯ ಪಥದಲ್ಲಿ ನಡೆಸಲು ನೂತನ ಸಚಿವರಾದ ಡಾ.ಎಂ.ಸಿ.ಸುಧಾಕರ್ ಸಮರ್ಥರಾಗಿದ್ದಾರೆ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಪರಾಜಿತ ಪಕ್ಷೇತರ ಅಭ್ಯರ್ಥಿ ಪುಟ್ಟು ಆಂಜಿನಪ್ಪ ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್ ಮುಖಾಂತರ ಚಿಂತಾಮಣಿಗೆ ಹೊರಟಿದ್ದ ನೂತನ ಸಚಿವರಾದ ಡಾ.ಎಂ.ಸಿ.ಸುಧಾಕರ್‌ರನ್ನು ಭಾನುವಾರ ಭೇಟಿ ಮಾಡಿ ಅಭಿನಂದಿಸಿ ಅವರು ಮಾತನಾಡಿದರು.
ಅಭಿವೃದ್ದಿಯ ವಿಚಾರದಲ್ಲಿ ಯಾವುದೇ ರಾಜಿಯಿಲ್ಲದೇ ಸಾಕಷ್ಟು ಶ್ರಮವಹಿಸಿ ಚಿಂತಾಮಣಿ ಯನ್ನುಆವರು ಅಭಿವೃದ್ದಿ ಪಡಿಸಿರುವುದು ನಾವೆಲ್ಲಾ ಕಂಡಿದ್ದೇವೆ. ಅದೇ ರೀತಿ ಮುಂಬರುವ ದಿನಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸಮಗ್ರ ಅಭಿವೃದ್ದಿ ಮಾಡಲು ಅವರು ಸಮರ್ಥರಿದ್ದಾರೆ. ಸರ್ಕಾರ ಅವರಿಗೆ ನೀಡಿರುವ ಸಚಿವ ಸ್ಥಾನದ ಸದ್ಭಳಕೆ ಮಾಡಿಕೊಳ್ಳುವ ಜೊತೆಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯನ್ನು ಅಭಿವೃದ್ದಿಯತ್ತ ಕೊಂಡೊಯ್ಯಲಿ ಎಂದರು.
ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, ಚಿಂತಾಮಣಿ ವಿಧಾನಸಬಾ ಕ್ಷೇತ್ರದ ಜನತೆಯ ಆಶೀರ್ವಾದದಿಂದ ಇಂದು ಶಾಸಕ, ಸಚಿವನಾಗಿ ಆಯ್ಕೆಯಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ. ಮೊದಲಿಗೆ ಕಾಂಗ್ರೆಸ್ ಪಕ್ಷ ಈಗಾಗಲೇ ಘೋಷಿಸಿರುವ ಐದು ಗ್ಯಾರಂಟಿಗಳನ್ನು ತ್ವರಿತವಾಗಿ ಜನಗಳಿಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕ್ಷೇತ್ರದ ವಸತಿ, ಉದ್ಯೋಗ, ಅಂತರ್ಜಲ ವೃದ್ದಿ ಪಡಿಸುವ ಹಾಗೂ ಕೈಗಾರಿಕೆಗಳ ಸ್ಥಾಪನೆ ಮಾಡುವ ಹಲವು ಯೋಜನೆಗಳಿವೆ ಹಂತ ಹಂತವಾಗಿ ಜನರ ನಿರೀಕ್ಷೆಯ ಕೆಲಸಗಳನ್ನು ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಸೂಚನೆಯ ಮೇರೆಗೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿರುವ ಪುಟ್ಟು ಆಂಜಿನಪ್ಪ ರಿಗೆ ಮುಂದಿನ ದಿನಗಳಲ್ಲಿ ನಿಮ್ಮಿಂದ ಏನಾದರೂ ಸಹಾಯ ಸಿಗಲಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಸಚಿವ ಎಂ.ಸಿ.ಸುಧಾಕರ್ ಉತ್ತರಿಸಿ, ಶಿಡ್ಲಘಟ್ಟ ವಿದಾನಸಭಾ ಕ್ಷೇತ್ರದಿಂದ ಪುಟ್ಟು ಆಂಜಿನಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಜನ ಅವರಿಗೆ ಅತ್ಯುತ್ತಮ ಬೆಂಬಲ ನೀಡಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಪಕ್ಷದ ಅಧ್ಯಕ್ಷರ ತೀರ್ಮಾನವೇ ಅಂತಿಮ, ಹಾಗಾಗಿ ಮುಂದಿನ ದಿನಗಳಲ್ಲಿ ಪಕ್ಷದ ಅಧ್ಯಕ್ಷರ ಜೊತೆ ಚರ್ಚಿಸಿ ಕ್ಷೇತ್ರದ ಪಕ್ಷ ಸಂಘಟನೆ ಬಗ್ಗೆ ತೀರ್ಮಾನಿಸಲಾಗುವುದು.
ನೂತನ ಸಚಿವ ಡಾ.ಎಂ.ಸಿ.ಸುಧಾಕರ್‌ರನ್ನು ಕ್ಷೇತ್ರದ ಎಚ್.ಕ್ರಾಸ್‌ನಲ್ಲಿ ಬರಮಾಡಿಕೊಂಡ ಪಕ್ಷೇತರ ಅಭ್ಯರ್ಥಿ ಪುಟ್ಟು ಆಂಜಿನಪ್ಪ ಹಾಗೂ ಅವರ ಅಭಿಮಾನಿಗಳು ಎಚ್.ಕ್ರಾಸ್‌ನ ಪ್ರಸಿದ್ದ ಶ್ರೀ ಶನಿಮಹಾತ್ಮ ದೇವಾಲಯದಲ್ಲಿ ಪೂಜೆ ನೆರವೇರಿಸಿ ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಬದಲ್ಲಿ ಮುಖಂಡರಾದ ಆನೂರು ದೇವರಾಜ್, ಅಶ್ವತ್ಥನಾರಾಯಣರೆಡ್ಡಿ, ಮಂಜುನಾಥ್, ಎಚ್.ಜಿ.ಶಶಿಕುಮಾರ್, ಮತ್ತಿತರರು ಹಾಜರಿದ್ದರು.