ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ದೇವರ ಹೆಸರಿನಲ್ಲಿ ಬಿಟ್ಟಿದ್ದ ಎಮ್ಮೆಯೊಂದು ಹೂವನ್ನು ತಿನ್ನುವಾಗ ಜೊತೆಯಲ್ಲಿ ಸೂಜಿ ಮತ್ತು ಪಿನ್ನನ್ನು ನುಂಗಿತ್ತು. ಗ್ರಾಮದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ಈ ಎಮ್ಮೆಯನ್ನು ಹೆಬ್ಬಾಳದ ಜಿ.ಕೆ.ವಿ.ಕೆ ಕ್ಯಾಂಪಸ್ಸಿನ ಪಶು ವೈದ್ಯಕೀಯ ವಿಭಾಗಕ್ಕೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮಾಡಿಸಿ, ಅದರ ಜೀವವನ್ನು ಉಳಿಸಿದ್ದಾರೆ.
ಮೇಲೂರಿನಲ್ಲಿ ದೇವರ ಹೆಸರಿನಲ್ಲಿ ಬಿಟ್ಟಿದ್ದ ಎಮ್ಮೆಯು ಮಕ್ಕಳು ಹೂವನ್ನು ಕಟ್ಟುತ್ತಿದ್ದಾಗ ಹತ್ತಿರ ಬಂದಿದೆ, ಗಾಬರಿಗೊಂಡ ಮಕ್ಕಳು ಓಡಿದ್ದಾರೆ. ಆ ಎಮ್ಮೆಯು ಹೂವನ್ನು ತಿಂದಿದೆ, ಜೊತೆಯಲ್ಲಿ ಆರು ಇಂಚಿನ ಚೂಪಾದ ಸೂಜಿ ಮತ್ತು ತಲೆಗೆ ಹಾಕಿಕೊಳ್ಳುವ ಕ್ಲಿಪ್ ಸಹ ನುಂಗಿದೆ. ಅದನ್ನು ಮಕ್ಕಳು ಹಿರಿಯರಿಗೆ ಹೇಳಿದ್ದಾರೆ. ನಂತರ ಸೂಜಿ ದೇಹದೊಳಗೆ ಹೋಗಿ ಚುಚ್ಚಿಕೊಂಡ ಪರಿಣಾಮ ಅದು ನೋವಿನಿಂದ ಏನನ್ನೂ ಸೇವಿಸದೇ ಮಲಗಿಬಿಟ್ಟಿದೆ.
ಗ್ರಾಮದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸದಸ್ಯರು ಹಾಗೂ ಕೆಲವು ಹಿರಿಯರು ಟಾಟಾ ಏಸ್ ವಾಹನದಲ್ಲಿ ಎಮ್ಮೆಯನ್ನು ಹೆಬ್ಬಾಳದ ಜಿ.ಕೆ.ವಿ.ಕೆ ಕ್ಯಾಂಪಸ್ಸಿನ ಪಶು ವೈದ್ಯಕೀಯ ವಿಭಾಗಕ್ಕೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ, ನಂತರ ಶಸ್ತ್ರಚಿಕಿತ್ಸೆ ನಡೆಸಿ ಆರು ಇಂಚಿನ ಚೂಪಾದ ಸೂಜಿ ಮತ್ತು ಕ್ಲಿಪ್ ಹೊರತೆಗೆದಿದ್ದಾರೆ. ಒಂದು ವಾರದ ಕಾಲ ಪ್ರತಿದಿನ ಎಮ್ಮೆಗೆ ಚುಚ್ಚುಮದ್ದು ನೀಡಲು ಔಷಧಿಯನ್ನು ನೀಡಿ ವೈದ್ಯರು ಕಳುಹಿಸಿಕೊಟ್ಟಿದ್ದಾರೆ.
“ಎಮ್ಮೆಯ ದುರವಸ್ಥೆಯನ್ನು ನೋಡಿ ನಮಗೆಲ್ಲ ಬಹಳ ನೋವಾಯಿತು. ಮೂಕ ಪ್ರಾಣಿಯ ನೋವನ್ನು ನಿವಾರಿಸಬೇಕು ಮತ್ತು ಅದರ ಜೀವ ಉಳಿಸಬೇಕು ಎಂದು ಎಲ್ಲರೂ ತೀರ್ಮಾನಿಸಿ ಎಮ್ಮೆಗೆ ಶಸ್ತ್ರಚಿಕಿತ್ಸೆ ಮಾಡಿಸಿ ವಾಪಸ್ ಕರೆದುಕೊಂಡು ಬಂದಿದ್ದೇವೆ. ಏಳು ದಿನಗಳ ಕಾಲ ಅದರ ಆರೈಕೆ, ಚುಚ್ಚುಮದ್ದು ಕೊಡಿಸುವುದನ್ನು ಮಾಡುತ್ತೇವೆ. ಗ್ರಾಮದ ಹಿರಿಯರಾದ ರಾಮಕೃಷ್ಣಪ್ಪ, ಸುದರ್ಶನ್, ರಾಘವೇಂದ್ರ, ಚೇತನ್, ಕೃಷ್ಣಮೂರ್ತಿ, ಲಕ್ಷ್ಮಿನಾರಾಯಣ, ಶ್ರೀನಿವಾಸ್ ಮುಂತಾದವರು ಈ ಕಾರ್ಯದಲ್ಲಿ ನೆರವಾದರು” ಎಂದು ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಧರ್ಮೇಂದ್ರ ತಿಳಿಸಿದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi