Sadali, Sidlaghatta : ಈ ಭಾಗದಲ್ಲೆ ಪಶು ಆಹಾರ ಉತ್ಪಾದನಾ ಘಟಕ ಕಾರ್ಯಾರಂಭ ಮಾಡಿದ್ದು ಮುಸುಕಿನ ಜೋಳ ಬೆಳೆಯುವ ಎಲ್ಲ ರೈತರೂ ಮದ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಘಟಕದ ಅಧಿಕಾರಿಗಳನ್ನು ಸಂಪರ್ಕಿಸಿ ಜೋಳವನ್ನು ಉತ್ತಮ ಬೆಲೆಗೆ ಮಾರಾಟ ಮಾಡಿ ಎಂದು ಕೆಪಿಸಿಸಿ ಕೋಆರ್ಡಿನೇಟರ್ ಬಿ.ವಿ.ರಾಜೀವ್‌ಗೌಡ ಮನವಿ ಮಾಡಿದರು.
ತಾಲ್ಲೂಕಿನ ಸಾದಲಿ ಬಳಿ ನೂತನವಾಗಿ ಕಾರ್ಯಾರಂಭ ಮಾಡಿರುವ ಪಶು ಆಹಾರ ಉತ್ಪಾಧನಾ ಘಟಕದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಸುಪಾಸಿನ ರೈತರೊಂದಿಗೆ ಸಾದಲಮ್ಮ ದೇವಾಲಯದ ಆವರಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಮಾತನಾಡಿದರು.
ಪಶು ಆಹಾರ ಘಟಕದಲ್ಲಿ ೬೦ ಮಂದಿ ಕಾರ್ಯನಿರ್ವಹಿಸುತ್ತಿದ್ದು ಸಧ್ಯ ೩೦ ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಶೇ 90 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಲು ಮಾತುಕತೆ ನಡೆಸಲಾಗಿದೆ.
ಸ್ಥಳೀಯ ರೈತರು ತಾವು ಬೆಳೆದ ಜೋಳವನ್ನು ಈ ಘಟಕಕ್ಕೆ ಮಾರಾಟ ಮಾಡಿ ಅಧಿಕ ಬೆಲೆಯನ್ನು ನಿಮ್ಮದಾಗಿಸಿಕೊಳ್ಳಿ, ಅದಕ್ಕೆ ಬೇಕಾದ ಎಲ್ಲ ರೀತಿಯ ನೆರವನ್ನು ನಾನು ನಿಮಗೆ ನೀಡಲಿದ್ದೇನೆ ಎಂದು ಭರವಸೆ ನೀಡಿದರು.
ಪಶು ಆಹಾರ ಉತ್ಪಾಧನಾ ಘಟಕದ ಎಂಡಿ ಶಶಿಕುಮಾರ್ ಮಾತನಾಡಿ, ಸಾದಲಿ ಬಳಿ ಆರಂಭವಾಗಿರುವ ಪಶು ಆಹಾರ ಉತ್ಪಾಧನಾ ಘಟಕವು ದೇಶದಲ್ಲೆ ಅತಿ ಹೆಚ್ಚು ಪಶು ಆಹಾರ ಉತ್ಪಾದಿಸುವ ಘಟಕವಾಗಿದ್ದು ಪ್ರತಿ ನಿತ್ಯ ೮೦೦ ಟನ್ ಪಶು ಆಹಾರ ಉತ್ಪಾದಿಸುವ ಸಾಮರ್ಥ್ಯ ಇದೆ.
ಆದರೆ ಮುಸುಕಿನ ಜೋಳ ಲಭ್ಯತೆಯ ಆಧಾರದಲ್ಲಿ ಸಧ್ಯ ೩೦೦ ಟನ್‌ನಷ್ಟು ಮಾತ್ರವೇ ಉತ್ಪಾಧನೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಉತ್ಪಾಧನಾ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ ಎಂದರು.
ರೈತರು ಮದ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ನಮ್ಮನ್ನು ಸಂಪರ್ಕಿಸಿ ಮಾರುಕಟ್ಟೆಗಿಂತ ೫೦ ರೂ.ಹೆಚ್ಚು ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ ನೀಡಿ ಖರೀಸುದಿತ್ತೇವೆ. ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ನಂಬರ್ ಕೊಡಿ ಮಾರನೇ ದಿನವೇ ನಿಮ್ಮ ಖಾತೆಗೆ ಹಣವನ್ನು ಜಮೆ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್‌ಗೌಡ, ಪಶು ಆಹಾರ ಉತ್ಪಾಧನಾ ಘಟಕದ ಎಂಡಿ ಶಶಿಕುಮಾರ್, ಸ್ಥಳೀಯ ಮುಖಂಡರಾದ ಸಾದಲಿ ಗೋವಿಂದರಾಜು, ಡಿ.ಪಿ.ನಾಗರಾಜ್, ಓಬಳಪ್ಪ, ಶಿವಪ್ಪ, ವೆಂಕಟರೆಡ್ಡಿ, ಯುವ ಕಾಂಗ್ರೆಸ್‌ನ ನರೇಂದ್ರ, ಆನೂರು ರವಿ, ದೇವರಮಳ್ಳೂರು ರವಿ, ಅಪ್ಪೇಗೌಡನಹಳ್ಳಿ ಮಂಜುನಾಥ್ ಹಾಜರಿದ್ದರು.