ಅಂಗನವಾಡಿ ನೌಕರರ ಸಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಸಿಐಟಿಯು ನೇತೃತ್ವದಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರು ನಗರದ ಸಿಡಿಪಿಒ ಕಚೇರಿಯ ಬಳಿ ಪ್ರತಿಭಟಿಸಿದರು.
ಎನ್.ಪಿ.ಎಸ್ ಲೈಟ್ ನ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು. ನಿವೃತ್ತಿಯಾಗಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನಿವೃತ್ತಿ ವೇತನ ಕೊಡಬೇಕು. ಹಲವು ಅಂಗನವಾಡಿ ಕೇಂದ್ರಗಳಲ್ಲಿನ ಸಮಸ್ಯೆಗಳನ್ನು ಕೂಡಲೇ ಅಧಿಕಾರಿಗಳು ಬಗೆಹರಿಸಿಕೊಡಬೇಕು. ಮೂರು ತಿಂಗಳಿಗೊಮ್ಮೆ ಕುಂದುಕೊರತೆಗಳ ಸಭೆ ಕರೆಯಬೇಕು. ಇನ್ನೂ ಹಲವು ಬೇಡಿಕೆಗಳ ಪಟ್ಟಿಯನ್ನು ಮುಂದಿಟ್ಟುಕೊಂಡು ಪ್ರತಿಭಟಿಸಿದರು. ಸಿಡಿಪಿಒ ಅಧಿಕಾರಿ ಅನುಪಸ್ಥಿತಿಯಲ್ಲಿ ಕಚೇರಿಯ ಸಿಬ್ಬಂದಿಗೆ ಮನವಿಯನ್ನು ಸಲ್ಲಿಸಿದರು.
ದೂರವಾಣಿ ಮೂಲಕ ಮಾತನಾಡಿದ ಸಿಡಿಪಿಒ ಅಧಿಕಾರಿ ಜನವರಿ 12 ರಂದು ಕುಂದುಕೊರತೆಗಳ ಸಭೆ ನಡೆಸುವುದಾಗಿ ಭರವಸೆ ನೀಡಿದರು.
ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮೀದೇವಮ್ಮ, ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಅಶ್ವತ್ಥಮ್ಮ, ಕಾರ್ಯದರ್ಶಿ ಗುಲ್ಜಾರ್, ಮುನಿರತ್ನಮ್ಮ, ನಂದಿನಿ, ಮಂಜುಳ, ಸೌಭಾಗ್ಯ ಹಾಜರಿದ್ದರು.