Veerapura, Sidlaghatta : ಅಂಗನವಾಡಿ ಕೇಂದ್ರ, ಶಾಲೆ, ಆಸ್ಪತ್ರೆಗಳ ಅಭಿವೃದ್ದಿಗೆ ಸರ್ಕಾರದ ಕಡೆ ಬೊಟ್ಟು ಮಾಡದೆ ಸಾರ್ವಜನಿಕರಾದ ನಾವೆಲ್ಲರೂ ಕೈ ಜೋಡಿಸಬೇಕು, ಆಗಲೆ ನಮ್ಮ ಮಕ್ಕಳ ಹಾಗೂ ಗ್ರಾಮಗಳ ಸಾಮೂಹಿಕ ಅಭಿವೃದ್ದಿ ಸಾಧ್ಯ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ನವತಾಜ್ ತಿಳಿಸಿದರು.
ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಕ್ರೆಡಿಟ್ ಆಕ್ಸೀಸ್ ಲಿಮಿಟೆಡ್(ಗ್ರಾಮೀಣ ಕೂಟ)ನಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕುಳಿತುಕೊಳ್ಳುವ ಚೇರು ಇನ್ನಿತರೆ ಪೀಠೋಪಕರಣಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ ಅಂಗನವಾಡಿ ಕೇಂದ್ರದಲ್ಲಿನ ಚಟುವಟಿಕೆಗಳು, ಕಲಿಕಾ ಪ್ರಕ್ರಿಯೆಗಳು ಮಗುವಿನ ಸರ್ವತೋಮುಖ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಸರ್ಕಾರ ಮಾತ್ರವಲ್ಲ ಸಾರ್ವಜನಿಕರು ಅಂಗನವಾಡಿ ಕೇಂದ್ರದ ಚಟುವಟಿಕೆಗಳತ್ತ ಗಮನ ಹರಿಸಬೇಕು ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆಟೋಟ ಹಾಗೂ ಕಲಿಕಾ ಚಟುವಟಿಕೆಗಳಿಗೆ ಅಗತ್ಯವಾದ ಮೂಲ ಸೌಕರ್ಯಗಳ ಅಭಿವೃದ್ದಿಗೆ ನೆರವು ನೀಡುವ ಮೂಲಕ ತಮ್ಮ ಮಕ್ಕಳ ಸರ್ವತೋಮುಖ ಅಭಿವೃದ್ದಿಯಲ್ಲಿ ತಮ್ಮ ಪಾತ್ರವನ್ನು ಮೂಡಿಸಬೇಕೆಂದು ಮನವಿ ಮಾಡಿದರು.
ಕ್ರೆಡಿಟ್ ಆಕ್ಸೀಸ್ ಲಿಮಿಟೆಡ್(ಗ್ರಾಮೀಣ ಕೂಟ)ದ ಪ್ರಾದೇಶಿಕ ವ್ಯವಸ್ಥಾಪಕ ಎಚ್.ಬಿ.ಶಿವರಾಮು ಮಾತನಾಡಿ, ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅಗತ್ಯವಾದ ಮೂಲ ಸೌಕರ್ಯಗಳಲ್ಲಿ ಒಂದಾದ ಕೂರುವ ಚೇರುಗಳನ್ನು ಈ ಕೇಂದ್ರಕ್ಕೆ ವಿತರಿಸಿದ್ದು ಇಷ್ಟಕ್ಕೆ ಈ ಕೇಂದ್ರಕ್ಕೆ ಎಲ್ಲವೂ ಸಿಕ್ಕಂತಾಗುವುದಿಲ್ಲ.
ಬೇಡಿಕೆಗಳಲ್ಲಿ ಅಥವಾ ಅಗತ್ಯಗಳಲ್ಲಿ ಇದೊಂದು ಅಷ್ಟೆ, ಮಿಕ್ಕಂತೆ ಎಲ್ಲ ಅಗತ್ಯಗಳನ್ನು ಪೂರೈಸಲು ಸಂಘ ಸಂಸ್ಥೆಗಳು, ಸಾರ್ವಜನಿಕರು ಹಾಗೂ ಉಳ್ಳವರು ಮುಂದಾಗಬೇಕು, ನಿಮ್ಮ ಕಾರ್ಯ ಇತರರಿಗೆ ಸ್ಪೂರ್ತಿಯೂ ಪ್ರೇರಣೆಯೂ ಆಗಬೇಕೆಂದು ಕೋರಿದರು.
ಕ್ರೆಡಿಟ್ ಆಕ್ಸೀಸ್ ಲಿಮಿಟೆಡ್‌ನ ಕಚೇರಿ ವ್ಯವಸ್ಥಾಪಕ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯ ರತ್ನಮ್ಮದ್ಯಾವಪ್ಪ, ಅಂಗನವಾಡಿ ಶಿಕ್ಷಕಿ ಸಿ.ಶೋಭವೆಂಕಟೇಶ್, ಶಿಲ್ಪ, ಲಕ್ಷ್ಮೀದೇವಿ, ಗ್ರಾಮಸ್ಥರಾದ ಶ್ರೀನಿವಾಸ್, ಗಂಗರಾಜು, ಪ್ರದೀಪ್, ನಾರಾಯಣಸ್ವಾಮಿ, ಗಗನ್, ಪೋಷಕರು ಹಾಜರಿದ್ದರು.