Malamachanahalli, Sidlaghatta : ಯೋಗ ಭಾರತದ ಪ್ರಾಚೀನ ಕಾಲದ ಸಂಪ್ರದಾಯವಾಗಿದ್ದು, ಯೋಗಾಸನದಿಂದ ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುವ ಜೊತೆಗೆ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ ಎಂದರು ತಾಲ್ಲೂಕು ಪಂಚಾಯಿತಿ ಇಒ ಮುನಿರಾಜ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕದಾಸರಹಳ್ಳಿ ಗ್ರಾಮದ ಅಮೃತ ಸರೋವರ ಕೆರೆ ಅಂಗಳದಲ್ಲಿ ಬುಧವಾರ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯೋಗಾಸನಗಳನ್ನು ಮಾಡುವ ಮೂಲಕ ಆಚರಿಸಿ ಅವರು ಮಾತನಾಡಿದರು.
ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ. ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿಯ ಜೊತೆಗೆ ಸಂಪರ್ಕವನ್ನು ಕಲ್ಪಿಸುವ ಮೂಲಕ ನಮ್ಮ ನೈಜಕತೆಯ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಎಂದರು.
ಯೋಗ ಗುರುಗಳು ಹಾಗೂ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಅವರು ವಿವಿಧ ಬಗೆಯ ಸೂರ್ಯ ನಮಸ್ಕಾರ, ಪ್ರಾಣಾಯಾಮ, ವ್ಯಾಯಾಮ, ವೃಕ್ಷಾಸನ, ತ್ರಿಕೋನಾಸನ, ಅರ್ಧಮತ್ಸ್ಯೇಂದ್ರಿಯಾಸನ ಸೇರಿದಂತೆ ವಿವಿಧ ರೀತಿಯ ಯೋಗಾಸನಗಳನ್ನು ನರೇಗಾ ಸಿಬ್ಬಂದಿ ವರ್ಗದವರಿಗೆ ಹೇಳಿಕೊಟ್ಟರು.
ತಾಲ್ಲೂಕು ಪಂಚಾಯಿತಿ ಇಒ ಮುನಿರಾಜ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ಸಿಬ್ಬಂದಿ ಹಾಜರಿದ್ದರು.