Sidlaghatta : ಅಸ್ಪೃಶ್ಯತೆಯ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಘನ ಸಂವಿಧಾನವನ್ನು ರಚಿಸಿದ, ಶೋಷಿತರ ಶಾಶ್ವತ ಧ್ವನಿ, ಮಹಾನ್ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್ ಅವರ “ಮಹಾ ಪರಿನಿರ್ವಾಣ ದಿನ” ದಂದು ಅವರನ್ನು ಗೌರವ, ಕೃತಜ್ಞತಾ ಪೂರ್ವಕವಾಗಿ ನೆನೆಯೋಣ ಎಂದು ಈಧರೆ ಸಮತಾ ಸೇನೆ ಸಂಸ್ಥಾಪಕ ಈ ಧರೆ ಪ್ರಕಾಶ್ ತಿಳಿಸಿದರು.
ನಗರದಲ್ಲಿ ಕಲಾವಿದ ಶಿವಪ್ಪ ಅವರನ್ನು ಈ ಧರೆ ಸಮತಾ ಸೇನೆ ವತಿಯಿಂದ ಡಾ. ಬಿ. ಆರ್ ಅಂಬೇಡ್ಕರ್ ರವರ 67 ನೇ ಪರಿನಿರ್ವಾಣದ ಅಂಗವಾಗಿ ಸನ್ಮಾನಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಪ್ರತಿಭಟನೆಗಳಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ರವರ ಸಂದೇಶಗಳನ್ನು ಅಭಿಮಾನದಿಂದ ಜನತೆಗೆ ಮನ ಮುಟ್ಟುವಂತೆ ಕ್ರಾಂತಿ ಗೀತೆಗಳನ್ನು ಹಾಡುವ ಸಿದ್ದಾರ್ಥ ನಗರದ ಗಾಯಕ ಶಿವಪ್ಪ ಅವರು ಅಭಿನಂದನಾರ್ಹರು ಎಂದು ಹೇಳಿದರು.
ನಮ್ಮ ಕರುಳಿನ ಕಥೆಗಾರ ನೀ ಎಲ್ಲಿ ಹೋದೆ ದೂರ, ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ, ಕಟ್ಟುತ್ತೇವೆ ನಾವು ಕಟ್ಟುತ್ತೇವ ನಾವು ಕಟ್ಟೇ ಕಟ್ಟುತ್ತೇವೆ, ಕರುಳ ಕುಡಿಗಳಿಂದಲೆ ಕೊಲೆಯಾಗುತ್ತಿರುವೆವು ಓ ಇಂಡಿಯ ಎನ್ನುವಂತ ಕ್ರಾಂತಿಗೀತೆಗಳನ್ನು ಕಲಾವಿದ ಶಿವಪ್ಪ ಹಾಡಿದರು.
ಈಧರೆ ಸಮತಾ ಸೇನೆ ತಾಲ್ಲೂಕು ಅಧ್ಯಕ್ಷ ಮಳ್ಳೂರು ವೆಂಕಟರಾಮಪ್ಪ, ಉಪಾಧ್ಯಕ್ಷ ಜಂಗಮಕೋಟೆ ಮುನಿರಾಜು, ಸೈಪುಲ್ಲ, ಮಳ್ಳೂರು ಮುನಿಕೃಷ್ಣಪ್ಪ, ನರಸಿಂಹಮೂರ್ತಿ, ಗೊರಮಡುಗು ಮಂಜುನಾಥ್, ಜೆ. ವೆಂಕಟಾಪುರ ನಾಗರತ್ನಮ್ಮ, ಪ್ರಸನ್ನ ಕುಮಾರ್ ಹಾಜರಿದ್ದರು.