ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜೈ ಭೀಮ್ ಯುವಕರ ಸಂಘ ಹಾಗೂ ಪಂಚಾಯಿತಿ ಸಹಕಾರದಿಂದ ಹಮ್ಮಿಕೊಂಡಿದ್ದ ಡಾ. ಬಿ.ಆರ್ ಅಂಬೇಡ್ಕರ್ 130 ನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಗಂಜಿಗುಂಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಜಯಂತಿ ಕೇವಲ ಏಪ್ರೀಲ್ 14 ಕ್ಕೆ ಮಾತ್ರ ಸೀಮಿತವಾಗದೆ ಪ್ರತಿಯೊಂದು ದಿನವು ಸಹ ಇಡೀ ವಿಶ್ವವೇ ಸ್ಮರಿಸುವಂತ ವಿಶ್ವ ಖ್ಯಾತಿಯ ವ್ಯಕ್ತಿಯಾಗಿದ್ದಾರೆ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್. ಅವರು ಬರೆದ ದಿ ಪ್ರಾಬಲಂ ಆಫ್ ರುಪಿ ಲೇಖನದ ಆದರದ ಮೇಲೆ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಿದೆ. ಆದರೆ ಭಾರತ ದೇಶದಲ್ಲಿ ಮುದ್ರಣವಾಗುವ ನೋಟಿನ ಮೇಲೆ ಇದುವರೆಗೂ ಬಾಬಾ ಸಾಹೇಬ್ ಅಂಬೇಡ್ಕರ್ ಭಾವ ಚಿತ್ರ ಹಾಕದೇ ಇರುವ ಈ ದೇಶದ ದುರಂತ. ಪ್ರತಿಯೊಬ್ಬರು ಡಾ. ಬಿ.ಆರ್ ಅಂಬೇಡ್ಕರವರ ಜೀವನ ಚರಿತ್ರೆಯ ಪುಸ್ತಕಗಳನ್ನು ಓದಿ ಅವರ ತತ್ವ ಸಿದ್ದಾಂತಗಳಿಗೆ ನ್ಯಾಯ ಮತ್ತು ಗೌರವ ಸಿಗುವಂತ ಮಾಡಬೇಕು ಎಂದರು.
ಟಿಪಿಎಸ್ ಮಾಜಿ ಸದಸ್ಯ ಡಿ.ಬಿ ವೆಂಕಟೇಶಪ್ಪ ಮಾತನಾಡಿ, ಈ ದೇಶದ ದೀನ ದಲಿತ, ಶೋಷಿತ ಸಮುದಾಯಕ್ಕಲ್ಲದೆ ಪ್ರತಿಯೊಂದು ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ಸಂವಿಧಾನದ ಮೂಲಕ ಹಕ್ಕುಗಳನ್ನು ನೀಡಿ ಸ್ವಾವಲಂಬಿಗಳಾಗಿ ಸ್ವಾಭಿಮಾನದಿಂದ ಬದುಕಲೆಂದು ಸಂವಿಧಾನ ಚೌಕಟ್ಟಿನಲ್ಲಿ ಸಮಾನತೆಯನ್ನು ನೀಡಿದ ಮಹಾ ಪುರುಷ ಡಾ.ಬಿ.ಆರ್ ಅಂಬೇಡ್ಕರ್ ಎಂದರು.
ಮಹಿಳೆಯರಿಗೆ ರಂಗೋಲಿ ಸ್ಪರ್ದೆಯನ್ನು ಏರ್ಪಡಿಸಿಸಲಾಗಿತ್ತು. ಗ್ರಾಮದಲ್ಲಿ ವೃತ್ತಕ್ಕೆ ಡಾ. ಬಿ.ಆರ್ ಅಂಬೇಡ್ಕರ್ ವೃತ್ತ ಎಂದು ನಾಮಕರಣ ಮಾಡಿ, ಡಾ. ಬಿ.ಆರ್ ಅಂಬೇಡ್ಕರ್ ನಗರ ಎಂದು ರಸ್ತೆಗೆ ಹೆಸರನ್ನು ನಾಮಕರಣ ಮಾಡಲಾಯಿತು. ರಂಗೋಲಿ ಸ್ಪರ್ದೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.
ಬಿಎಸ್ ಪಿ ರಾಜ್ಯ ಕಾರ್ಯದರ್ಶಿ ಪಿ. ನಾಗಪ್ಪ, ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ, ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಧರ್ಮೇಂದ್ರ, ಉಪನ್ಯಾಸಕ ಮೂರ್ತಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವೆಂಕಟೇಶ್, ಸಮತಾ ಸೈನಿಕ ತಾಲ್ಲೂಕು ಅಧ್ಯಕ್ಷ ಈ ಧರೆ ಪ್ರಕಾಶ್, ಪಿಡಿಒ ಯಮುನಾ ರಾಣಿ, ಗ್ರಾಮ ಪಂಚಾಯಿತಿ ಸದಸ್ಯೆ ಕಾಂತಮ್ಮ, ಸದಸ್ಯ ಮಂಜುನಾಥ್, ಸುಷ್ಮಿತ, ಸಿದ್ದಾರ್ಥ ನಗರ ಪ್ರಕಾಶ್, ಬಿ.ಕೆ ದ್ಯಾವಪ್ಪ, ಡ್ಯಾನ್ಸ್ ದೇವು, ಗಾಯಕ ದೇವರಮಳ್ಳೂರು ಮಹೇಶ್ ಹಾಗೂ ಜೈಭೀಮ್ ಡಾ. ಬಿ.ಆರ್ ಅಂಬೇಡ್ಕರ್ ಸಂಘದ ಸದಸ್ಯರು ಹಾಜರಿದ್ದರು.