Timmanayakanahalli, Sidlaghatta : ಸುಮಾರು ಇಪ್ಪತ್ತು ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತಹ ಅಗ್ರಹಾರ ಕೆರೆ ದುರಸ್ತಿ ಕಾಮಗಾರಿಯ ಗುಣಮಟ್ಟ ಕಾಪಾಡಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗ್ರಹಾರ ಕೆರೆ ದುರಸ್ತಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.
ಅಗ್ರಹಾರ ಕೆರೆ ದುರಸ್ತಿಯಿಂದಾಗಿ ಸುತ್ತಮುತ್ತಲಿನ ಸುಮಾರು ಇಪ್ಪತ್ತು ಹಳ್ಳಿಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು ಸ್ಥಳೀಯವಾಗಿ ಸಂಪರ್ಕ ವ್ಯವಸ್ಥೆ ಸಹ ಸುಧಾರಿಸಲಿದೆ. ನಲ್ಲೋಜನಹಳ್ಳಿ ಕೆರೆ ಸುಮಾರು 53 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, 200 ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ಈ ಭಾಗದ ರೈತರು ಇದೇ ನೀರನ್ನು ಅವಲಂಬಿತರಾಗಿ ಕೃಷಿ ಮಾಡುತ್ತಾರೆ. ಹಾಗಾಗಿ ಅಧಿಕಾರಿಗಳು ಕೆರೆ ಕಟ್ಟೆಯ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಆಗದೆ ಈ ಭಾಗದ ರೈತರ ಹಿತ ಕಾಪಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡ ಬಂಕ್ ಮುನಿಯಪ್ಪ, ಸ್ಥಳೀಯ ಮುಖಂಡರಾದ ಶಿವಕುಮಾರ್, ವಿಜಯಬಾವರೆಡ್ಡಿ, ಬಚ್ಚರೆಡ್ಡಿ, ಆನೇಮಡುಗು ದೇವರಾಜ್, ಜೀವಿಕ ಮುನಿಯಪ್ಪ, ಚಿಕ್ಕವೆಂಕಟರಾಯಪ್ಪ, ಬೈರಾರೆಡ್ಡಿ, ಶ್ರೀರಾಮ್, ಸಂತೋಷ್, ನಾರಾಯಣಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಚೇತನ್, ಸಹಾಯಕ ಎಂಜಿನಿಯರ್ ಶ್ರೀನಿವಾಸ್, ಗುತ್ತಿಗೆದಾರ ಗೌರೀಶ್ ಹಾಜರಿದ್ದರು.