ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿಯ ತಾತಹಳ್ಳಿ ಗ್ರಾಮದಲ್ಲಿ “ನಮ್ಮ ಗ್ರಾಮ ನಮ್ಮ ಯೋಜನೆ, ಅಟಲ್ ಭೂಜಲ ಯೋಜನೆ ಹಾಗೂ ನರೇಗಾ ಯೋಜನೆಯ ಕ್ರಿಯಾಯೋಜನೆ ತಯಾರಿಕಾ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿ ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆ (ಎಫ್.ಇ.ಎಸ್)ಯ ಉಪ ಯೋಜನಾಧಿಕಾರಿ ಆಗಟಮಡಕ ರಮೇಶ್ ಮಾತನಾಡಿದರು.
ನಮ್ಮ ಸರ್ಕಾರಗಳು ಅಧಿಕಾರವನ್ನು ಎಷ್ಟೇ ವಿಕೇಂದ್ರೀಕರಣದ ಪ್ರಯತ್ನ ಮಾಡಿದರೂ ಕೂಡ ಸಮುದಾಯದ ಸಹಭಾಗಿತ್ವ ಮತ್ತು ಗ್ರಾಮ ಪಂಚಾಯಿತಿಗಳ ದೂರದೃಷ್ಟಿಯ ಕೊರತೆಯಿಂದಾಗಿ ಇನ್ನೂ ಗ್ರಾಮ ಸ್ವರಾಜ್ಯದ ಕನಸು ನನಸಾಗದೇ ಉಳಿದಿದೆ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿಗಳೆಂದರೆ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ನಿರ್ದಿಷ್ಟ ಧ್ಯೇಯ ಮತ್ತು ದೂರದೃಷ್ಟಿಯನ್ನು ಇಟ್ಟುಕೊಂಡು ಎಲ್ಲಾ ಕ್ಷೇತ್ರದಲ್ಲೂ ಗ್ರಾಮಗಳನ್ನು ಸ್ವಾವಲಂಬಿಗಳನ್ನು ಮಾಡಲು ನಿರಂತರ ಪ್ರಯತ್ನ ಮಾಡುವ ಸಂಸ್ಥೆಯಾಗಿ ರೂಪಗೊಳ್ಳಬೇಕು. ಈ ನಿಟ್ಟಿನಲ್ಲಿ ಪೌಂಡೇಷನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯು ಶಿಡ್ಲಘಟ್ಟ ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲಿ “ನಾಗರಿಕರ ಸಕ್ರಿಯವಾಗಿ ಪಾಲ್ಗೊಸುವಿಕೆಯ ಮೂಲಕ ಸ್ಥಳೀಯ ಆಡಳಿತದ ಬಲವರ್ಧನೆ” ಗಾಗಿ ಶ್ರಮಿಸುತ್ತಿದೆ. ದುರ್ಬಲ ವರ್ಗದ ಜನರನ್ನು ಮತ್ತು ಮಹಿಳೆಯರನ್ನು ಹೆಚ್ಚು ಭಾಗವಹಿಸುವಂತೆ ಮಾಡಿ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳನ್ನು ಬಲಪಡಿಸುವುದರ ಜೊತೆಗೆ ಗ್ರಾಮ ಪಂಚಾಯಿತಿ ಒಂದು ಸಂಸ್ಥೆಯಾಗಿ ರೂಪಗೊಳ್ಳಲು ಸಹಕಾರ ನೀಡುತ್ತಿದೆ ಎಂದರು.
ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಕನಕಪ್ರಸಾದ್ ಮಾತನಾಡಿ, ಅಧಿಕಾರಿಗಳು ಸಹ ಸಮುದಾಯದ ಜೊತೆ ಸೇರಿ ಸಕ್ರಿಯವಾಗಿ ಯೋಜನೆಗಳನ್ನು ಅನುಷ್ಟಾನ ಮಾಡಬೇಕು. ಗ್ರಾಮದ ಕೆರೆಗೆ ಸಂಬಂದಿಸಿದ ರಾಜ ಕಾಲುವೆ ಮತ್ತು ಪೋಷಕ ಕಾಲುವೆಗಳು ಒತ್ತುವರಿಯಾಗಿದ್ದು ಕೆರೆಗೆ ಮಳೆ ನೀರು ಬರದೇ ಬರಡಾಗಿದೆ. ದೊಡ್ಡವರು ಕಟ್ಟಿದ ಕೆರೆಗಳನ್ನು ನಾವು ಉಳಿಸಿಕೊಳ್ಳಲು ಸಾದ್ಯವಾಗಲಿಲ್ಲ. ಈ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ ರಚನೆಯಾಗಿರುವ ಮತ್ತು ಗ್ರಾಮ ಪಂಚಾಯಿತಿಯ ಉಪಸಮಿತಿಯಾಗಿರುವ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಯು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಇಡೀ ತಾಲ್ಲೂಕಿನಲ್ಲೇ ಶೇ 96 ಪರಿಶಿಟ್ಟ ಪಂಗಡದವರು ಹಾಗೂ ಬಡವರಿರುವ ಗ್ರಾಮ ನಮ್ಮ ತಾತಹಳ್ಳಿ ಗ್ರಾಮವಾಗಿದ್ದು ಎಲ್ಲಾ ಅಧಿಕಾರಿಗಳು ಹೆಚ್ಚು ಆಧ್ಯತೆಯನ್ನು ಕೊಟ್ಟು ಗ್ರಾಮ ಅಭಿವೃದ್ಧಿಯನ್ನು ಮಾಡಬೇಕೆಂದು ಹೇಳಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತಾ ಮಾತಾನಾಡಿ, 2022-23 ಸಾಲಿನ ಗ್ರಾಮ ಪಂಚಾಯಿತಿಯ ಕ್ರಿಯಾಯೋಜನೆಯು ಸಹ ಈ ಸಭೆಯಲ್ಲಿ ಮಾಡುತ್ತಿದ್ದು, ವೈಯುಕ್ತಿಕ ಕಾಮಗಾರಿಗಳಾದ ಎರೆಹುಳುಗೊಬ್ಬರದ ತೊಟ್ಟಿ, ಕ್ಷೇತ್ರಬದುಗಳು, ಸ್ಪೋಕಪಿಟ್, ಸಸಿನಾಟಿ, ಕೃಷಿಹೊಂಡ, ಧನದದೊಡ್ಡಿ, ಕುರಿಶೇಡ್, ಹಂದಿಶೇಡ್ ಹಾಗೂ ಸಮುದಾಯದ ಕಾಮಗಾರಿಗಳಾದ ಕಾಲುವೆಗಳ ಅಭಿವೃದ್ದಿ, ಕುಂಟೆಗಳ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ ಮುಂತಾದ ಕಾಮಗಾರಿಗಳನ್ನು ಸೇರಿಸಲು ಅವಕಾಶವಿದೆ ಎಂದರು.
ವೆಡ್ಸ್ ಸಂಸ್ಥೆಯ ಮುನಿರಾಜ್ ಅಟಲ್ ಭೂಜಲ ಯೋಜನೆ ಬಗ್ಗೆ ಮಾತನಾಡಿ, ಅಂತರ್ಜಲ ಮಟ್ಟ ತುಂಬಾ ಕುಸಿಯುತ್ತಿದ್ದುದನ್ನು ಮನಗಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶ್ವಬ್ಯಾಂಕ್ ನೆರವಿನೊಂದಿಗೆ ಅಟಲ್ ಭೂಜಲ ಯೋಜನೆಯನ್ನು ಜಾರಿಗೆ ತಂದಿದೆ. ಅಬ್ಲೂಡು ಗ್ರಾಮ ಪಂಚಾಯಿತಿಯಲ್ಲೂ ಈ ಯೋಜನೆಯನ್ನು ಅನುಷ್ಟಾನ ಮಾಡಲಾಗುತ್ತಿದೆ. ಇದರ ಕಾಲಾವಧಿ 5 ವರ್ಷಗಳಾಗಿದ್ದು ಈಗಾಗಲೇ ಪಂಚಾಯಿತಿ ಮಟ್ಟದಲ್ಲಿ ಅಂತರ್ಜಲ ನಿರ್ವಹಣಾ ಸಮಿತಿಯನ್ನು ರಚನೆ ಮಾಡಲಾಗಿದೆ. ಈ ಯೋಜನೆಯಲ್ಲಿ ಅಂತರ್ಜಲ ಮಟ್ಟ ವೃದ್ಧಿ ಮಾಡುವ ಕಾಮಗಾರಿಗಳನ್ನು ಕೈಗೊಳ್ಳಬಹುದು. ಕೃಷಿಹೊಂಡ , ಕ್ಷೇತ್ರಬದು, ಕೊಳವೆಬಾವಿ ಜಲ ಮರುಪೂರಣಗುಂಡಿ, ತೋಟಗಾರಿಕೆ, ಕಾಲುವೆಗಳ ಅಭಿವೃದ್ಧಿ ಮತ್ತು ಮಳೆ ನೀರು ಕೊಯ್ಲು ಮುಂತಾದ ಕಾಮಗಾರಿಗಳನ್ನು ರೈತರು ಮಾಡಿಕೊಳ್ಳಲು ಅವಕಾಶವಿದ್ದು, ಕ್ರಿಯಾಯೋಜನೆಯಲ್ಲಿ ಸೇರಿಸಿ ಎಂದರು.
ಗ್ರಾಮ ಪಂಚಾಯಿತಿ ಯೋಜನಾ ಸಹಾಯಕ ಸಮಿತಿ ಅಧ್ಯಕ್ಷೆ ನಿರ್ಮಲಾ ಬೈರೇಗೌಡ, ಉಪಾಧ್ಯಕ್ಷೆ ನಂದಿನಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಾಥ್, ವೈದೇಹಿ, ಹರೀಶ್, ಮುನಿರೆಡ್ಡಿ, ನಾಗಮಣಿ, ನಾರಾಯಣಸ್ವಾಮಿ, ಕನಕಪ್ರಸಾದ್, ಮದ್ದಿರೆಡ್ಡಿ, ಸಿಬ್ಬಂದಿ ಶಶಿಕುಮಾರ್, ದ್ಯಾವಪ್ಪ, ಗ್ರಾಯತ್ರಿ, ಮಾಲಾವತಿ, ಮುನಿರಾಜ್, ಕಾಂತರಾಜ್, ವೆಂಕಟೇಶ್, ಗಾಯತ್ರಿ, ಮಂಜುನಾಥ್, ಶಾಲೆ ಶಿಕ್ಷಕರು, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮ ಪರಿಸರ ಅಭಿವೃದ್ಧಿ ಸಮಿತಿಯ ಸದಸ್ಯರು, ಸ್ವ ಸಹಾಯ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.