Home News ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಸೇವಾ ಕೇಂದ್ರದ ಶಂಕುಸ್ಥಾಪನೆ

ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಸೇವಾ ಕೇಂದ್ರದ ಶಂಕುಸ್ಥಾಪನೆ

0
Abbaludu Bharat Nirman Rajiv Gandhi Seva Kendra Groundbreaking B N Ravikumar

Abbaludu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಶುಕ್ರವಾರ ಭಾರತ್ ನಿರ್ಮಾಣ್ ರಾಜೀವ್‌ಗಾಂಧಿ ಸೇವಾ ಕೇಂದ್ರದ ಶಂಕುಸ್ಥಾಪನೆ ಹಾಗೂ ಅಂಗನವಾಡಿ ಕಟ್ಟಡಗಳ ಉದ್ಘಾಟನೆಯನ್ನು ಶಾಸಕ ಬಿ.ಎನ್.ರವಿಕುಮಾರ್ ನೆರವೇರಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಭಿವೃದ್ದಿಯ ವಿಚಾರದಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ತೀರಾ ಹಿಂದುಳಿದಿದ್ದು, ಕ್ಷೇತ್ರದ ಅಭಿವೃದ್ದಿ ಸೇರಿದಂತೆ ಬಡ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಈ ಭಾಗದ ರೈತರ ಸಮಸ್ಯೆಗಳನ್ನು ಬಗೆ ಹರಿಸುವುದೇ ನನ್ನ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ಶಾಸಕನಾಗಿ ಆಯ್ಕೆಯಾದ ನಂತರ ಮೊಟ್ಟ ಮೊದಲಿಗೆ ಕನ್ನಡ ವರ್ಣಮಾಲೆಯ ಅ ಅಕ್ಷರದಿಂದ ಶುರುವಾಗುವ ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿರುವುದರ ಮುಖ್ಯ ಉದ್ದೇಶ ಏನೆಂದರೆ ಅ ಎಂದರೆ “ಅಭಿವೃದ್ದಿ”ಯ ಸಂಕೇತ. ಹಾಗಾಗಿ ನನ್ನ ಮೊದಲ ಕಾರ್ಯಕ್ರಮ ಇಲ್ಲಿಂದಲೇ ಶುರು ಮಾಡಲಾಗುತ್ತಿದೆ ಎಂದರು.

ಗ್ರಾಮದಲ್ಲಿ ಇಂದು ಶುರು ಮಾಡಿರುವ ಗ್ರಾಮ ಪಂಚಾಯಿತಿ ಕಟ್ಟಡ ಸೇರಿದಂತೆ ಪಶು ವೈದ್ಯಕೀಯ ಆಸ್ಪತ್ರೆ, ಡಿಜಿಟಲ್ ಗ್ರಂಥಾಲಯ, ಕಂದಾಯ ಭವನ ಕಟ್ಟಡಗಳ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಲು ತಮ್ಮ ಸಂಪೂರ್ಣ ಸಹಕಾರ ನೀಡಲಾಗುವುದು. ಗ್ರಾಮದ ಎಲ್ಲಾ ಮುಖಂಡರು ಜವಾಬ್ದಾರಿ ವಹಿಸಿ ಕಟ್ಟಡ ಕಾಮಗಾರಿ ಯನ್ನು ಗುಣಮಟ್ಟ ಹಾಗೂ ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಶ್ರಮಿಸಬೇಕು ಎಂದರು.

ತಾ.ಪಂ ಇಓ ಮುನಿರಾಜು ಮಾತನಾಡಿ ಅಭಿವೃದ್ದಿಯ ಮೂಲ ಕೇಂದ್ರಗಳಾದ ಗ್ರಾಮ ಪಂಚಾಯಿತಿಗಳು ಸಬಲವಾದಾಗ ಮಾತ್ರ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ವಿವಿಧ ಸೇವೆಗಳನ್ನು ತಲುಪಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಇಂದು ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಶಂಖುಸ್ಥಾಪನೆ ನೆರವೇರಿಸಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸುಮಾರು 47.06 ಲಕ್ಷ ಹಣಕಾಸು ಮೀಸಲಿಡಲಾಗಿದೆಯಾದರೂ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ನಮ್ಮಲ್ಲಿರುವ ಹಣ ಕಡಿಮೆಯಾಗಬಹುದು, ಹಾಗಾಗಿ ಶಾಸಕರು ತಮ್ಮ ಅನುದಾನ ಸೇರಿದಂತೆ ವಿವಿಧ ಅನುದಾನವನ್ನು ನೀಡುವ ಮೂಲಕ ತ್ವರಿತವಾಗಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಮಾಡಿದರು.

9 ಗುಂಟೆ ಜಾಗದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡ, 3 ಗುಂಟೆ ಜಾಗದಲ್ಲಿ ಡಿಜಿಟಲ್ ಲೈಬ್ರರಿ, 2 ಗುಂಟೆ ಜಾಗದಲ್ಲಿ ಕಂದಾಯ ಭವನ, 3 ಗುಂಟೆ ಜಾಗದಲ್ಲಿ ಪಶು ಆಸ್ಪತ್ರೆ ನಿರ್ಮಾಣವಾಗಲಿದೆ. ಒಟ್ಟು 17 ಗುಂಟೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಅಧಿಕಾರ ಶಾಶ್ವತವಲ್ಲ, ಬದಲಿಗೆ ತಮ್ಮ ಅಧಿಕಾರಾವಧಿಯಲ್ಲಿ ನಾವು ಮಾಡಿದ ಒಳ್ಳೆಯ ಕೆಲಸ ಕಾರ್ಯಗಳು ಶಾಶ್ವತವಾಗಿರುತ್ತವೆ. ಇದಕ್ಕೆ ಇಲ್ಲಿನ ಗ್ರಾ.ಪಂ ಅಧ್ಯಕ್ಷರ ಪತಿ ಬೈರೇಗೌಡ ಉತ್ತಮ ಉದಾಹರಣೆ ಯಾಗಿದ್ದಾರೆ. ಪ್ರತಿನಿತ್ಯ ಅಧಿಕಾರಿಗಳು ಕಚೇರಿಗೆ ಬರುವ ಮೊದಲೇ ಕಚೇರಿಯ ಬಳಿ ಕಾದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಕಾಡಿ, ಬೇಡಿ ಗ್ರಾ.ಪಂ ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿಸಿದ್ದು ಸೇರಿದಂತೆ ಸುಸಜ್ಜಿತ ಗ್ರಾ.ಪಂ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಶ್ರಮಿಸಿದ ಅವರ ಕಾರ್ಯ ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ನರೇಗಾ ಮತ್ತು ಜಿಲ್ಲಾ ಪಂಚಾಯಿತಿ ಅನುದಾನಗಳಿಂದ ತಲಾ ಹತ್ತು ಲಕ್ಷ ರೂಗಳ ವೆಚ್ಚದಲ್ಲಿ ಅತ್ಯುತ್ತಮವಾದ ಎರಡು ಅಂಗನವಾಡಿಗಳನ್ನು ಶಾಸಕರು ಗುಡಿಹಳ್ಳಿ ಮತ್ತು ಜಯಂತಿ ಗ್ರಾಮಗಳಲ್ಲಿ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಅಬ್ಲೂಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರ್ಮಲಾ ಬೈರೇಗೌಡ, ಉಪಾಧ್ಯಕ್ಷ ಸಿ.ಎಂ.ನಾರಾಯಣಸ್ವಾಮಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಹುಜಗೂರು ರಾಮಣ್ಣ, ಜೆ.ವಿ.ಸದಾಶಿವ, ತಾದೂರು ರಘು, ಮುಗಿಲಡಿಪಿ ನಂಜಪ್ಪ, ಗುಡಿಹಳ್ಳಿ ಮುನಿವೆಂಕಟಸ್ವಾಮಿ, ವೆಂಕಟರೆಡ್ಡಿ, ಬೈರೇಗೌಡ, ಸಿ.ಎಂ.ಗೋಪಾಲ್, ರಮೇಶ್, ಗ್ರಾ.ಪಂ ಸದಸ್ಯರಾದ ಕೆ.ನಾರಾಯಣಸ್ವಾಮಿ, ಕೆ.ಹರೀಶ್, ಪಿಡಿಓ ವೀಣಾ ಹಡಪದ, ಕಾರ್ಯದರ್ಶಿ ಕೆ.ಎನ್.ರಮೇಶ್, ಬಿಲ್ ಕಲೆಕ್ಟರ್ ಜಿ.ಎನ್.ಶಶಿಕುಮಾರ್, ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version