Home Culture ನವರಾತ್ರಿ ಹಬ್ಬದ ವಿಶೇಷ ಆಕರ್ಷಣೆ – ಗೊಂಬೆಹಬ್ಬ

ನವರಾತ್ರಿ ಹಬ್ಬದ ವಿಶೇಷ ಆಕರ್ಷಣೆ – ಗೊಂಬೆಹಬ್ಬ

0

ಬೊಂಬೆ ಕೂರಿಸಿ ಆರತಿ ಎತ್ತುವುದು ನವರಾತ್ರಿ ಹಬ್ಬದ ವೈಶಿಷ್ಟ್ಯ. ಮನೆಗಳಲ್ಲಿ ಗೊಂಬೆಗಳ ಮೇಳವೇ ನಡೆಯುತ್ತದೆ. ಅದಕ್ಕೆಂದೇ ವಿವಿಧ ರಿತಿಯ ಗೊಂಬೆಗಳನ್ನು ಕೂರಿಸಿ ಸಂಭ್ರಮಿಸುತ್ತಾರೆ.

 ನಗರದ ದೇಶದಪೇಟೆಯ ಶೆಟ್ಟಪ್ಪನವರ ಸುರೇಶ್ ಅವರ ಮನೆಯಲ್ಲಿ ದಸರಾ ಸಂಭ್ರಮಾಚರಣೆಯ ಅಂಗವಾಗಿ ವೈವಿಧ್ಯಮಯ ಗೊಂಬೆಗಳನ್ನು ಜೋಡಿಸಲಾಗಿದೆ.

 ಪರಂಪರಾಗತವಾಗಿ ಬಂದಿರುವ ನೂರು ವರ್ಷಗಳ ಹಿಂದಿನ ಪಟ್ಟದ ಗೊಂಬೆಗಳು ಹಾಗೂ ಹಲವು ದಶಕಗಳ ಹಿಂದಿನ ದೇವರ ಮೂರ್ತಿಗಳನ್ನು ಇವರು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಈ ಹಳೆಯ ಗೊಂಬೆಗಳನ್ನು ಹೊಸ ಗೊಂಬೆಗಳ ಜೊತೆಯಲ್ಲಿ ಹೊಸದೆನ್ನುವ ರೀತಿಯಲ್ಲಿ ಜೋಡಿಸಿಟ್ಟಿರುವುದು ವಿಶೇಷ.

 “ಶೆಟ್ಟಪ್ಪನವರ ಮನೆಯೆಂದರೆ ಗೊಂಬೆಗಳಿಗೆ ಹಿಂದಿನಿಂದಲೂ ಹೆಸರುವಾಸಿ. ಹಿರಿಯ ಕುಟುಂಬ ಕವಲಾಗಿ ಒಡೆದಿದೆಯಾದರೂ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಗೊಂಬೆಗಳನ್ನು ಜೋಡಿಸಿಡುವುದು ಬಿಟ್ಟಿಲ್ಲ. ಮೂರು ನಾಲ್ಕು ತಲೆಮಾರುಗಳಿಂದಲೂ ಈ ಗೊಂಬೆಗಳನ್ನಿಡುವ ಸಂಪ್ರದಾಯ ರೂಢಿಸಿಕೊಂಡಿದ್ದೇವೆ. ಕುಟುಂಬದ ಎಲ್ಲರಿಗೂ ಗೊಂಬೆಗಳ ಬಗ್ಗೆ ವಿಶೇಷ ಮಮತೆ” ಎನ್ನುತ್ತಾರೆ ಸುರೇಶ್ ಅವರ ತಾಯಿ ಸಾವಿತ್ರಮ್ಮ.

 ಶ್ರೀಕೃಷ್ಣನ ಜನನ, ಬುಟ್ಟಿಯಲ್ಲಿ ಹೊತ್ತು ತಂದೆ ವಾಸುದೇವ ಗೋಕುಲಕ್ಕೆ ಬರುವುದು, ಪೂತನಿಯ ವಧೆ, ಗೋಪಿಕೆಯರೊಂದಿಗಿನ ಶ್ರೀಕೃಷ್ಣ, ಕಾಳಿಂಗಮರ್ಧನ, ಗೋವರ್ಧನ ಗಿರಿಯ ರಕ್ಷಣೆ, ಬೆಣ್ಣೆ ಕದಿಯಲು ಬಂದ ಕೃಷ್ಣ, ರಾಧೆ ಕೃಷ್ಣರ ಗೊಂಬೆಗಳನ್ನು ಪ್ರದರ್ಶಿಸಿ ಭಾಗವತದ ದರ್ಶನ ಮಾಡಿಸಿದ್ದಾರೆ.

 ಅಷ್ಟ ಲಕ್ಷ್ಮಿಯರು, ನವದುರ್ಗೆಯರು, ದಶಾವತಾರ, ರಾಮ ಸೀತೆ, ಚಾಮುಂಡೇಶ್ವರಿ, ಶೆಟ್ಟಿ ಅಂಗಡಿಯ ವ್ಯಾಪಾರ, ಕೈಲಾಸದಲ್ಲಿ ತನ್ನೆಲ್ಲಾ ಗಣಗಳೊಂದಿಗೆ ಇರುವ ಶಿವ ಮತ್ತು ಪಾರ್ವತಿ ಮುಂತಾದ ಗೊಂಬೆಗಳನ್ನು ಜೋಡಿಸಿಡಲಾಗಿದೆ.

 “ನಮ್ಮ ತಾತ ಶೆಟ್ಟಪ್ಪನವರ ವೆಂಕಟಶಾಮಪ್ಪ ಎಲ್ಲೇ ಹೋದರೂ ಗೊಂಬೆಗಳನ್ನು ತರುತ್ತಿದ್ದರಂತೆ. ಆ ಕಾಲದಿಂದಲೂ ನಮ್ಮ ಮನೆಯಲ್ಲಿ ಗೊಂಬೆಗಳನ್ನು ಸಂಗ್ರಹಿಸಿಡುವುದು ಸಂಪ್ರದಾಯ. ನಾವೂ ಹಳೆಯ ಗೊಂಬೆಗಳ ಜೊತೆಯಲ್ಲಿ ತಂಜಾವೂರು, ಪಾಂಡಿಚೆರಿ ಮುಂತಾದ ಕಡೆಗಳಿಂದ ಹೊಸ ಗೊಂಬೆಗಳನ್ನು ತಂದು ಸೇರಿಸುತ್ತಾ ಬರುತ್ತಿದ್ದೇವೆ. ಪ್ರತಿ ವರ್ಷ ಹೊಸದಾಗಿ ಕಲಾತ್ಮಕವಾಗಿ ಕಥಾನಕವನ್ನು ಸೂಚಿಸುವಂತೆ ಗೊಂಬೆಗಳನ್ನು ಪ್ರದರ್ಶಿಸಲು ಪ್ರಯತ್ನಿಸುತ್ತೇವೆ” ಎಂದು ಶೆಟ್ಟಪ್ಪನವರ ಸುರೇಶ್ ತಿಳಿಸಿದರು.

 ಗೊಂಬೆಗಳಲ್ಲಿ ಹಳ್ಳಿಯ ಚಿತ್ರಣ :

Navaratri Festival Celebration Gombe Habba sidlaghatta ಪುಟಾಣಿ ಗೊಂಬೆಗಳ ಮೂಲಕವೇ ಎಸ್.ಜಾನಕಿ ಸುರೇಶ್ ಅವರು ಹಳ್ಳಿಯ ಚಿತ್ರಣವನ್ನು ಅನಾವರಣಗೊಳಿಸಿದ್ದಾರೆ. ಹಳ್ಳಿಯಲ್ಲಿ ಶಾಲೆಯಲ್ಲಿ ಶಿಕ್ಷಕಿ ಪಾಠ ಮಾಡುತ್ತಿರುವುದು, ಅಗಸರ ಮನೆ, ಬಳೆ ಮಲ್ಲಾರ, ಹಳ್ಳಿಯ ಸಂತೆ, ಸೌದೆ ಸೀಳುತ್ತಿರುವುದು, ಕುಂಬಾರನ ಮನೆ, ದೇವಸ್ಥಾನ, ಗುಡಿಸಲುಗಳು, ರೈಲ್ವೆ ನಿಲ್ದಾಣ, ಕೋಳಿ ಸಾಕಣೆ, ಬೆಟ್ಟ, ಗುಡ್ಡ, ಹಸಿರು ಪರಿಸರವನ್ನು ಜಾನಕಿ ಸುರೇಶ್ ಅವರೇ ಕ್ರಿಯಾಶೀಲವಾಗಿ ರೂಪಿಸಿದ್ದಾರೆ. ಕೇವಲ ತಲೆ ಮಾತ್ರ ಸಿಗುವ ಗೊಂಬೆಗೆ ಇಡೀ ದೇಹದ ಸ್ವರೂಪವನ್ನು ತಾವೇ ಸ್ವತಃ ತಯಾರಿಸಿದ್ದಾರೆ. ಗೊಂಬೆಗಳಿಗೆ ಬಟ್ಟೆಗಳನ್ನು ಹೊಲಿದು, ಕೂದಲು, ಪೇಟ, ಧಿರಿಸುಗಳನ್ನು ಮಾಡಿಟ್ಟಿದ್ದಾರೆ.

 

ಮದುವೆಯ ಈ ಬಂಧ :

  ಗೊಂಬೆಗಳ ಮೂಲಕ ವಿವಾಹ ಸಂಭ್ರಮದ ಸಂಪೂರ್ಣ ಆಚರಣೆಗಳ ಪ್ರದರ್ಶನವನ್ನು ಎಸ್.ಜಾನಕಿ ಸುರೇಶ್ ಅವರು ತಾವೇ ಸ್ವತಃ ರೂಪಿಸಿದ್ದಾರೆ. ಎಲ್ಲಾ ಗೊಂಬೆಗಳನ್ನೂ ಅವರೇ ಸಿದ್ಧಪಡಿಸಿದ್ದಾರೆ. ಹೆಣ್ಣು ನೋಡುವ ಕಾರ್ಯ, ನಿಶ್ಚಿತಾರ್ಥ, ಶಾಸ್ತ್ರಗಳು, ಬಳೆ ತೊಡಿಸುವಿಕೆ, ಹೆಣ್ಣಿನ ಅಲಂಕಾರ, ಆರತಕ್ಷತೆ, ಊಟ, ಮಂಗಳ ವಾದ್ಯ ನುಡಿಸುವವರು, ಅರಿಶಿನ ಶಾಸ್ತ್ರ, ಅಂತರ್ಪಟ, ತಾಳಿ ಕಟ್ಟುವ ಶುಭವೇಳೆ, ಅಕ್ಷತೆ ಹಾಕುವುದು, ಸಪ್ತಪದಿ, ನಂತರದ ಶಾಸ್ತ್ರಗಳು, ಮನೆ ತುಂಬಿಸಿಕೊಳ್ಳುವುದು, ಸೀಮಂತ, ಮಗುವಿನ ನಾಮಕರಣ ಸೇರಿದಂತೆ ಸುಂದರ ಕುಟುಂಬದ ಎಲ್ಲಾ ಆಗುಹೋಗುಗಳನ್ನು ಅವರು ಗೊಂಬೆಗಳ ಮೂಲಕ ಚಿತ್ರಿಸಿದ್ದಾರೆ.

– ಡಿ.ಜಿ.ಮಲ್ಲಿಕಾರ್ಜುನ

 

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version