ಹತ್ತಿಯಿಂದ ಟೆಡ್ಡಿಬೇರ್, ಬಾದಾಮಿ ಚಿಪ್ಪಿನಿಂದ ಸೀತಾಫಲ, ಬೆಂಕಿಪೊಟ್ಟಣದಿಂದ ಬೃಂದಾವನ… ‘ಯಾವುದೂ ಅಮುಖ್ಯವಲ್ಲ’ ಎಂಬ ಕವಿ ಮಾತಿನಂತೆ, ಯಾವುದೂ ಕಸವಲ್ಲ, ಕಸದಿಂದ ಕಲಾಕೃತಿಗಳನ್ನು ತಯಾರಿಸಬಹುದೆಂದು ತೋರಿಸುತ್ತಾರೆ ಗೌಡರಬೀದಿಯ ಗೃಹಿಣಿ ಲತಾ.
ವೈವಿಧ್ಯಮಯ ಕಲಾಕೃತಿಗಳನ್ನು ತಾವು ತಯಾರಿಸುವುದರೊಂದಿಗೆ ಆಸಕ್ತ ಮಕ್ಕಳಿಗೆ ರಜಾ ದಿನಗಳಲ್ಲಿ ಉಚಿತವಾಗಿ ಹೇಳಿಕೊಡುತ್ತಾರೆ.
ಬಾಗಿಲಿಗೆ ಹಾಕುವ ತೋರಣವನ್ನು ಪೇಪರ್ ಬಳಸಿ ತಯಾರಿಸಿದರೆ, ಬಣ್ಣದ ಕಾಗದ ಬಳಸಿ ಚೈನೀಸ್ ಗಂಟೆ ತಯಾರಾಗುತ್ತದೆ. ಟಿಶ್ಯೂ ಪೇಪರ್ ಹಕ್ಕಿಯಾಗಿ ರೂಪುಗೊಳ್ಳುತ್ತದೆ. ಐಸ್ಕ್ರೀಮ್ ಕಡ್ಡಿಗಳು ಮನೆಯಾಗುತ್ತವೆ.
ಗೊಂಬೆಹಬ್ಬದಲ್ಲಂತೂ ಇವರ ಮನೆ ಅಕ್ಷರಶಃ ಗೊಂಬೆಮನೆಯಾಗುತ್ತದೆ. ಮನೆಯ ತುಂಬೆಲ್ಲಾ ಗೊಂಬೆಗಳನ್ನು ಪೌರಾಣಿಕ, ಜಾನಪದ, ಸಾಮಾಜಿಕ ಕಥನ ರೂಪದಲ್ಲಿ ಜೋಡಿಸಿಡುತ್ತಾರೆ. ಪ್ರತಿವರ್ಷ ಶ್ರೀಕೃಷ್ಣಜನ್ಮಾಷ್ಠಮಿಯಂದು ಕೃಷ್ಣನ ಒಂದೊಂದು ಲೀಲೆಯ ಕಥನ ರೂಪದಲ್ಲಿ ಭಾಗವತದ ದರ್ಶನ ನೀಡುತ್ತಾರೆ. ಬಗೆಬಗೆಯ ತಿಂಡಿ ತಯಾರಿಸಿಡುತ್ತಾರೆ. ಗೊಂಬೆಗಳ ಆಕರ್ಷಣೆಗೆ ಬರುವ ಮಕ್ಕಳಲ್ಲಿ ಆಸಕ್ತರು ಇವರ ಶಿಷ್ಯರಾಗುತ್ತಾರೆ.
‘ಮಂಜುನಾಥ್ ಅವರೊಂದಿಗೆ ನನ್ನ ವಿವಾಹವಾಗಿ 17 ವರ್ಷಗಳಾದವು. ಕಲೆಯಲ್ಲಿ ನನಗೆ ಮೊದಲಿಂದಲೂ ಆಸಕ್ತಿಯಿತ್ತು. ಶಿಡ್ಲಘಟ್ಟಕ್ಕೆ ಬಂದ ಮೇಲೆ ಮನೆಯಲ್ಲಿನ ಪೂರಕ ವಾತಾವರಣದಿಂದಾಗಿ ಬೊಂಬೆಹಬ್ಬ ಮತ್ತು ಶ್ರೀಕೃಷ್ಣಜನ್ಮಾಷ್ಠಮಿಗಾಗಿ ಮೊದಲು ಗೊಂಬೆಗಳನ್ನು ಮಾಡತೊಡಗಿದೆ. ಆನಂತರ ವಿವಿಧ ಕಲಾಕೃತಿಗಳನ್ನೂ ಸಹ ಮಾಡುತ್ತಿದ್ದೆ. ಕೆಲವು ವರ್ಷಗಳಿಂದ ಮಕ್ಕಳು ಆಸಕ್ತಿ ತೋರಿದ್ದರಿಂದ ಮೊದಲು ಚಿತ್ರಕಲೆಯನ್ನು ಕಲಿಸುತ್ತಿದ್ದೆ. ಈಗೀಗ ಚಿತ್ರಕಲೆಯೊಂದಿಗೆ ತ್ಯಾಜ್ಯದ ವಸ್ತುಗಳನ್ನು ಬಳಸಿ ಕಲಾಕೃತಿಗಳನ್ನು ತಯಾರಿಸುವುದನ್ನು ಕಲಿಸುತ್ತಿರುವೆ. ಮಕ್ಕಳು ಕ್ರಿಯಾಶೀಲ ಕೆಲಸಗಳಲ್ಲಿ ತೊಡಗಿಕೊಂಡಷ್ಟು ಅವರ ಬುದ್ಧಿಮತ್ತೆ ಹೆಚ್ಚುತ್ತದೆ’ ಎನ್ನುತ್ತಾರೆ ಗೃಹಿಣಿ ಲತಾ.
- Advertisement -
- Advertisement -
- Advertisement -
- Advertisement -