ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನಾದರೂ ಸರ್ಕಾರ ಈಗಾಗಲೇ ಈಡೇರಿಸಿ ಅವರೊಂದಿಗೆ ಮಾತಾಡಿ ಅವರ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕಿತ್ತು ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಬಳಿ ಶುಕ್ರವಾರ ಸಾರಿಗೆ ನೌಕರರು ಮತ್ತು ರಾಜ್ಯ ರೈತ ಸಂಘದ ಸದಸ್ಯರು ಶಾಸಕರನ್ನು ಭೇಟಿ ಮಾಡಿ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲಿಸಿ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಕೋರಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಳೆದ ವರ್ಷದ ನವೆಂಬರ್ನಲ್ಲಿ ಸಾರಿಗೆ ನೌಕರರು 10 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು. ಅವುಗಳಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಹಾಗೂ 6ನೇ ವೇತನ ಆಯೋಗದಂತೆ ಸಂಬಳ ಜಾರಿ ಬೇಡಿಕೆಗಳು ಪ್ರಮುಖವಾಗಿದ್ದು. ಆಗ ಮುಷ್ಕರನಿರತ ನೌಕರರೊಂದಿಗೆ ಮಾತುಕತೆ ನಡೆಸಿದ್ದ ಸರ್ಕಾರ 10 ಬೇಡಿಕೆಗಳಲ್ಲಿ ಸರ್ಕಾರಿ ನೌಕರರೆಂದು ಪರಿಗಣನೆ ಒಂದನ್ನು ಬಿಟ್ಟು ಉಳಿದ 9 ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ಭರವಸೆ ನೀಡಿತ್ತು. ಆದರೆ, ನಾಲ್ಕು ತಿಂಗಳು ಕಳೆದರೂ ಸರ್ಕಾರ ನೀಡಿದ್ದ ಭರವಸೆಯಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿ ಸಾರಿಗೆ ನೌಕರರು ಇದೀಗ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಸರ್ಕಾರದ ನೌಕರರು ಸರ್ಕಾರದ ಒಂದು ಅಂಗದಂತೆ. ಅವರ ಕಷ್ಟದ ಬಗ್ಗೆ ಅವಕಾಶ ಸಿಕ್ಕಾಗ ಖಂಡಿತ ದನಿ ಎತ್ತುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ಕೆಂಪಣ್ಣ, ಮಂಜುನಾಥ್ ಕೆಂಪರೆಡ್ಡಿ. ಬೆಳ್ಳೂಟಿ ತಮ್ಮಣ್ಣ, ರಾಜಶೇಖರ್, ಅಶ್ವತಪ್ಪ, ಸಾರಿಗೆ ನೌಕರರಾದ ನಾಗರಾಜ್, ವೆಂಕಟೇಶ್, ಗೋವಿಂದರಾಜು, ರಾಘವೇಂದ್ರ, ದೇವಪ್ಪ ಹಾಜರಿದ್ದರು.