ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಎಂಟು ದಿನಗಳ ಕಾಲ ನಡೆದ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಧರ್ಮಸ್ಥಳ ಸಂಸ್ಥೆಯು ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪರ್ಯಾಯ ಸರ್ಕಾರದ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಗಾಂಧೀಜಿಯವರ ರಾಮ ರಾಜ್ಯದ ಕನಸನ್ನು ನನಸು ಮಾಡುತ್ತಿದೆ. ಇಂತಹ ಕಾರ್ಯಗಳು ಶ್ಲಾಘನೀಯವಾದದ್ದು ಎಂದು ಅವರು ತಿಳಿಸಿದರು.
ಮದ್ಯವರ್ಜನೆಯ ಬಗ್ಗೆ ಗಾಂಧೀಜಿ ಅವರ ಪರಿಕಲ್ಪನೆ ಧರ್ಮಸ್ಥಳ ಸಂಘದ ಮೂಲಕ ಸಾಕಾರಗೊಳ್ಳುತ್ತಿದೆ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ವಿ.ರಾಮಸ್ವಾಮಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಧರ್ಮಸ್ಥಳ ಸಂಸ್ಥೆ ಮಾಡದ ಕಾರ್ಯಗಳಿಲ್ಲ. ಮನುಷ್ಯನ ಅರ್ಥಿಕ ಅಭಿವೃದ್ಧಿಗೆ ಧರ್ಮಸ್ಥಳ ಸಂಸ್ಥೆಯು ಹಣಕಾಸಿನ ನೆರವು ನೀಡುವುದು ಮಾತ್ರವಲ್ಲದೇ ಅವನು ದುಶ್ಚಟದ ದಾಸನಾದಾಗ ಅವನ ಮನಪರಿವರ್ತನೆ ಮಾಡಿ ಕುಟುಂಬದ ಕಣ್ಣೀರನ್ನು ಒರೆಸುವಂತಹ, ನವಜೀವನಕ್ಕೆ ತರುವಂತಹ ಶ್ರೇಷ್ಠವಾದಂತಹ ಪುಣ್ಯದ ಕಾರ್ಯವನ್ನು ಮಾಡುತ್ತಿದೆ ಎಂದರು.
ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ ಮಾತನಾಡಿ, ಈ ಸಮಾಜದಲ್ಲಿ ಮದ್ಯವನ್ನು ಕುಡಿಸುವವರು ಬಹಳಷ್ಟು ಜನರಿದ್ದಾರೆ. ಮದ್ಯವನ್ನು ಬಿಡಿಸುವವರಿದ್ದರೆ ಅದು ಧರ್ಮಸ್ಥಳ ಸಂಸ್ಥೆ ಮಾತ್ರ. ಸಂಸ್ಥೆಯ ಹಲವಾರು ಕಾರ್ಯಕ್ರಮಗಳು ಜನೋಪಯೋಗಿ ಕಾರ್ಯಕ್ರಮಗಳಾಗಿವೆ. ಪೂಜ್ಯರು ಗ್ರಾಮಾಭಿವೃದ್ಧಿಯ ಕಲ್ಪನೆಯನ್ನಿಟ್ಟುಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಬೇಕೆನ್ನುವ ದೃಷ್ಟಿಯಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳುವಂತಾಗಲಿ ಎಂದು ಹಾರೈಸಿದರು.
ಮದ್ಯ ವರ್ಜನ ಶಿಬಿರದಲ್ಲಿ ಒಟ್ಟು 47 ಮಂದಿ ಮದ್ಯವ್ಯಸನಿಗಳು ಭಾಗವಹಿಸಿದ್ದು ಇದರಲ್ಲಿ ಸರ್ಕಾರಿ ಉದ್ಯೋಗ ಮಾಡುತ್ತಿರುವ ಐದು ಜನರು, ಸ್ವ ಉದ್ಯೋಗ ಮಾಡುತ್ತಿರುವ 16 ಜನರು, ಕೃಷಿಕರು 20 ಜನ, 6 ಕೂಲಿ ಕಾರ್ಮಿಕರ ನ್ನೊಳಗೊಂಡ ಶಿಬಿರಾರ್ಥಿಗಳು ಪರಿವರ್ತನೆಗೊಂಡು ನವಜೀವನಕ್ಕೆ ಕಾಲಿಟ್ಟರು.
ಸಾಯಿನಾಥ ಜ್ಞಾನಮಂದಿರದ ಸಂಚಾಲಕ ನಾರಾಯಣಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಯಲುವಳ್ಳಿ ರಮೇಶ್, ಬೆಳ್ಳೂಟಿ ಸಂತೋಷ್, ಮೇಲೂರು ಆರ್.ಎ.ಉಮೇಶ್, ಬೈರಾ ರೆಡ್ಡಿ, ವೆಂಕಟಸ್ವಾಮಿ ರೆಡ್ಡಿ, ಹಿತ್ತಲಹಳ್ಳಿ ಸುರೇಶ್, ಎ.ಎಂ.ತ್ಯಾಗರಾಜ್, ಹೇಮಂತ್ ಕುಮಾರ್, ದೇವರಾಜ್, ನಾರಾಯಣಪ್ಪ, ಚಂದ್ರಶೇಖರ್, ಜಿಲ್ಲಾ ನಿರ್ದೇಶಕ ಪ್ರಶಾಂತ್, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಗಣೇಶ್ ಆಚಾರ್ಯ, ಮೇಲ್ವಿಚಾರಕರಾದ ಅನಿತಾ, ರಾಜೇಶ್, ಒಕ್ಕೂಟದ ಅಧ್ಯಕ್ಷರಾದ ಮಂಜುಳಾ, ವನಿತಾ ಹಾಗೂ ಸೇವಾಪ್ರತಿನಿಧಿಗಳು ಹಾಜರಿದ್ದರು.