ಹವಾಮಾನ ಮತ್ತು ಪರಿಸರಕ್ಕೆ ಅನುಗುಣವಾಗಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ವಿಜ್ಞಾನಿಗಳ ಹಾಗೆ ಚಿಂತನೆ ನಡೆಸಿ, ಉತ್ತಮ ಬೆಳೆ ಬೆಳೆಯಬೇಕು ಎಂದು ಮೇಲಿಂದ ಮೇಲೆ ರೈತರಿಗೆ ಸಲಹೆ ನೀಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಸರ್ಕಾರದಿಂದ ಪ್ರೋತ್ಸಾಹ ಕೂಡ ನೀಡಲಾಗುತ್ತದೆ. ಆದರೆ ಇದ್ಯಾವುದರ ಮೇಲೆಯೂ ಅವಲಂಬಿತರಾಗದೇ ತಾಲ್ಲೂಕಿನ ರೈತರೊಬ್ಬರು ವಿಶಿಷ್ಟ ರೀತಿಯ ಪ್ರಯೋಗ ಕೈಗೊಂಡಿದ್ದಾರೆ.
ನಮ್ಮ ತಾಲ್ಲೂಕಿನ ಹಿತ್ತಲಹಳ್ಳಿಯ ಕೃಷಿಕ ಎಚ್.ಜಿ.ಗೋಪಾಲಗೌಡ ಅವರು ಕೇವಲ ಮಳೆಯನ್ನೇ ನಂಬಿ ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಮಾವು, ರಾಗಿ, ಕಡಲೆಕಾಯಿ, ಹಿಪ್ಪುನೇರಳೆ, ಅವರೆ, ಬೆಂಡೆ, ಹಲಸಂದೆ, ಸಾಸಿವೆ, ತೊಗರಿ, ಚೆಂಡುಹೂ ಮತ್ತು ಬದುಗಳಲ್ಲಿ ಸಿಲ್ವರ್ ಗಿಡಗಳನ್ನು ಬೆಳೆದಿದ್ದಾರೆ. ಗುಂಡಿಗಳಲ್ಲಿ ಕೃಷಿ ತ್ಯಾಜ್ಯವನ್ನು ತುಂಬಿ, ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯುತ್ತಿದ್ದಾರೆ.
“ಐದು ವರ್ಷಗಳ ಹಿಂದೆ ಈ ಜಮೀನಿನಲ್ಲಿ ನೀಲಗಿರಿ ಮರಗಳಿದ್ದವು. ಅದರಿಂದ ಕಡಿಮೆಆದಾಯ ಬರುತ್ತಿತ್ತು. ಹೀಗಾಗಿ ಎರಡು ವರ್ಷಗಳ ಹಿಂದೆ ಮಿಶ್ರ ಬೆಳೆಯ ಪ್ರಯೋಗ ಕೈಗೊಂಡೆ. ಮೊದಲ ವರ್ಷ ಉತ್ತಮ ಫಲ ಸಿಗಲಿಲ್ಲ. ಆದರೆ ಕಳೆದ ವರ್ಷ 40 ಕ್ವಿಂಟಾಲ್ ರಾಗಿ, ನಾಲ್ಕು ರೇಷ್ಮೆ ಬೆಳೆಗಾಗುವಷ್ಟು ಹಿಪ್ಪುನೇರಳೆಸೊಪ್ಪು, 2 ಚೀಲ ಕಡಲೆಕಾಯಿ, ಒಂದು ಚೀಲ ಅವರೆಕಾಯಿ, 2 ತಿಂಗಳ ಕಾಲ ಮನೆ ಬಳಕೆಗಾಗುವಷ್ಟು ತರಕಾರಿ ಬೆಳೆದೆ. ಜಮೀನಿನ ಫಲವತ್ತತೆಗೆ ರೇಷ್ಮೆ ತ್ಯಾಜ್ಯ, ಕುರಿ ತ್ಯಾಜ್ಯ, ಸಗಣಿ, ಗಂಜಲ, ಬಯೋಗ್ಯಾಸ್ ಸ್ಲರಿ ಬಳಕೆ ಮಾಡಿರುವೆ. ಆದಷ್ಟೂ ಸಾಗುವಳಿ ವೆಚ್ಚ ಕಡಿಮೆ ಮಾಡುವುದರಿಂದ ಆದಾಯ ಹೆಚ್ಚುತ್ತದೆ” ಎಂದು ಗೋಪಾಲಗೌಡ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
“ಜಮೀನಿನ ಸುತ್ತ 3 ಅಡಿ ಆಳ ಮತ್ತು ಅಗಲದ ಗುಣಿ ಮಾಡಿರುವುದರಿಂದ ದನಗಳ ಕಾಟವಿಲ್ಲ ಮತ್ತು ಮಳೆ ನೀರು ಇಂಗುತ್ತದೆ. ನಮ್ಮ ಜಮೀನಿನಲ್ಲಿ ಬಿದ್ದ ಮಳೆನೀರು ಒಂದು ತೊಟ್ಟೂ ಪೋಲಾಗದಂತೆ ಜಮೀನಿನ ಏರು ತಗ್ಗನ್ನು ಅನುಸರಿಸಿ ಮಧ್ಯೆ ಮಧ್ಯೆ ಗುಣಿ ಮಾಡಿದ್ದೇವೆ. ಇದರಿಂದಾಗಿ ಜಮೀನಿನ ಪಕ್ಕದಲ್ಲೇ ನೀಲಗಿರಿ ತೋಪಿದ್ದರೂ ಜಮೀನಿಗೆ ತೊಂದರೆಯಾಗಿಲ್ಲ. ಇದಲ್ಲದೆ ಜಮೀನಿನ ಒಂದು ಭಾಗದಲ್ಲಿ 25 ಮೀಟರ್ ಉದ್ದ ಅಗಲ ಮತ್ತು 4 ಮೀಟರ್ ಆಳದ ಕೃಷಿಹೊಂಡ ನಿರ್ಮಿಸಿದ್ದೇವೆ. ಪಕ್ಕದಲ್ಲಿ ಕಾಲುವೆಯಿದ್ದು ಮಳೆ ನೀರು ಹರಿದು ಹೋಗುವಾಗ ಹೊಂಡದಲ್ಲಿ ಬಂದು ಇಂಗುತ್ತದೆ” ಎಂದು ಅವರು ನೀರಿನ ಸದ್ಭಕೆಯ ತಂತ್ರವನ್ನು ವಿವರಿಸುತ್ತಾರೆ.
“ಗೋಪಾಲಗೌಡರು ಕಡಿಮೆ ನೀರು ಬಳಸಿ ಸಾವಯವ ಪದ್ಧತಿಯಲ್ಲಿ ಉತ್ತಮ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಾರೆ. ಗುಣಮಟ್ಟದ ರೇಷ್ಮೆ ಗೂಡನ್ನೂ ಬೆಳೆಯುತ್ತಾರೆ. ಮಿಶ್ರ ಬೆಳೆ, ರಾಂಬುಲೆಟ್ ಕುರಿ ಸಾಕಣೆ, ಕಡಿಮೆ ವೆಚ್ಚ ಮಾಡಿ ಹೆಚ್ಚು ಇಳುವರಿ ಪಡೆಯುವ ಇವರ ಮಾದರಿ ವಿಧಾನ ಹಾಗೂ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಕಳೆದ ವರ್ಷ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ. ಚೀನಾ ಮತ್ತು ಹಾಂಕಾಂಗ್ ದೇಶಗಳು ಮತ್ತು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿದ್ದಾರೆ. ಸಿರಿ ರೈತಕೂಟದ ಅಧ್ಯಕ್ಶರಾಗಿ ಇತರ ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇಂಥಹ ರೈತರಿರುವುದು ಜಿಲ್ಲೆಗೇ ಹೆಮ್ಮೆ” ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಿವರಾಂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
- Advertisement -
- Advertisement -
- Advertisement -
- Advertisement -