ಪಿಯುಸಿ ಪಾಸಾಗಿದ್ದ ಹದಿನೆಂಟರ ಯುವಕ ಕೃಷಿ ಪ್ರದರ್ಶನದಲ್ಲಿ ಕುರಿಗಳನ್ನು ನೋಡಿದ. ತಾನೂ ತಂದು ಸಾಕಬೇಕೆಂದು ಆಸೆಪಟ್ಟ. ಆದರೆ ಉತ್ಸಾಹ ಮತ್ತು ಬಿಸಿರಕ್ತವಿರುವೆಡೆ ಹಣವಿರಬೇಕಲ್ಲ. ಹಣ ಹೊಂಚಿ ಎರಡು ಕುರಿ ತರುವಷ್ಟರಲ್ಲಿ ಐದು ವರ್ಷ ಕಳೆದಿತ್ತು. ಇದೆಲ್ಲಾ ನಡೆದು ಮೂವತ್ತೈದು ವರ್ಷಗಳಾಗಿವೆ. ಈಗ ಈತನ ಕಣ್ಮುಂದೆ ಸಾವಿರದ ಮುನ್ನೂರು ರಾಂಬೊಲೇಟ್, ಡಾರ್ಸೆಟ್, ಬನ್ನೂರು ಮುಂತಾದ ಕುರಿಗಳಿವೆ. ಈತನೇ ಕುರಿಸಾಕಾಣಿಕೆಯಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಆನೂರಿನ ವೀರಕೆಂಪಣ್ಣ. ಇವರ ಈ ಸಾಧನೆಗೆ ಆಧುನಿಕ ತಂತ್ರಜ್ಞಾನ, ಆಹಾರ ವಿಜ್ಞಾನ, ತಳಿಯ ಅಭಿವೃದ್ಧಿ ವಿಧಾನಗಳನ್ನು ಅಳವಡಿಸಿಕೊಂಡಿರುವುದಲ್ಲದೆ, ಪರಿಶ್ರಮ, ಸಂಶೋಧನಾ ಪ್ರವೃತ್ತಿ ಮತ್ತು ಪ್ರಯೋಗಶೀಲತೆಯೇ ಕಾರಣ.
1978ರಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಕುರಿ ಸಂವರ್ಧನ ಕೇಂದ್ರದಲ್ಲಿ ಒಂದು ಕಾರಿಡಾಲ್ ತಳಿ ಖರೀದಿಸಿ, ಆ ಟಗರಿನಿಂದ ಸ್ಥಳೀಯ ಬನ್ನೂರು ಕುರಿಗಳಿಗೆ ಸಂವರ್ಧನೆ ಮಾಡಿ ಹೊಸ ತಳಿಗಳನ್ನು ಸಾಕಲು ಪ್ರಾರಂಭಿಸಿದರು. ೧೯೮೦ರಲ್ಲಿ ಚಳ್ಳಕೆರೆ ಕುರಿ ಅಭಿವೃದ್ಧಿ ಕೇಂದ್ರದಲ್ಲಿ ಆಗ ತಾನೆ ಆಮದು ಮಾಡಿದ ಟಗರನ್ನು ವೀಕ್ಷಿಸಿ, ತಮಗೂ ಕುರಿ ಸಾಕುವ ಅನುಭವವಿರುವುದರಿಂದ ವಿದೇಶದಿಂದ ತರಿಸಿದ ಮೂಲ ತಳಿ ನೀಡಬೇಕೆಂದು ಕೇಳಿಕೊಂಡರು. ಅಲ್ಲಿಯ ತಜ್ಞರು ಈ ತಳಿಗಳನ್ನು ವೃದ್ಧಿ ಮಾಡುವ ಕಾರ್ಯ ತಳಿ ವರ್ಧಕರಿಗೆ ಮಾತ್ರ ಗೊತ್ತು ಎಂದು ಹೇಳಿ ಇವರನ್ನು ತಿರಸ್ಕರಿಸಿದರು. ಇದನ್ನು ಸವಾಲಾಗಿ ಸ್ವೀಕರಿಸಿದ ಕೆಂಪಣ್ಣ ದೆಹಲಿಯ ಕೃಷಿ ಭವನದಲ್ಲಿರುವ ಕುರಿ ಸಂಗೋಪನಾ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ತಮ್ಮ ಅನುಭವವನ್ನು ತಿಳಿಸಿ ತಮಗೂ ಒಂದು ಆಮದಾಗಿರುವ ಮೂಲ ತಳಿ ಟಗರನ್ನು ನೀಡಬೇಕೆಂದು ಕೋರಿದರು. ಇವರ ಆಸಕ್ತಿ, ಅನುಭವ, ಜ್ಞಾನವನ್ನು ಪರೀಕ್ಷಿಸಿ ವಿದೇಶದಿಂದ ಆಮದು ಮಾಡಿದ ಮೂರು ಟಗರುಗಳನ್ನು ಮತ್ತು ೨೫ ಮೂಲ ತಳಿ ಮೆರೀನೋ ಹೆಣ್ಣು ಕುರಿ ಮತ್ತು ಹತ್ತು ಟಗರುಗಳನ್ನು ಚಳ್ಳಕೆರೆ ಮತ್ತು ತಮಿಳುನಾಡಿನ ಕೊಯಿಮತ್ತೂರಿನ ಫಾರಂನಿಂದ ನೀಡಲು ಆದೇಶಿಸಿದರು. ಇವರಿಗೆ ತರಬೇತಿ ನೀಡಲೂ ಆದೇಶಿಸಿದರು. ಇಕ್ರಿಸೆಟ್‌ನಿಂದ ಕುದುರೆ ಮಸಾಲೆಯನ್ನು ಬಿತ್ತನೆಗೆ ತರಿಸಿ ನಾಲ್ಕು ಎಕರೆ ಪ್ರದೇಶದ ನೀರಾವರಿ ಮೇವು ಬೆಳೆದರು. ೧೯೮೫ರಲ್ಲಿ ಆಸ್ಟ್ರೇಲಿಯಾದ ಕುರಿ ತಳಿ ಸಂವರ್ಧಕರಿಂದ ರಾಜ್ಯದ ರಾಣೇಬೆನ್ನೂರಿನಲ್ಲಿ ತರಬೇತಿ ಪಡೆದರು.
ಕುರಿಗಳಿಗೆ ಬರುವ ರೋಗ ಪರೀಕ್ಷಿಸುವುದು, ಕಾಲಕಾಲಕ್ಕೆ ಲಸಿಕೆ ಹಾಕುವುದು, ಮೇವನ್ನು ಸಣ್ಣ ಸಣ್ಣಗೆ ಕತ್ತರಿಸಿ, ಕುರಿಗಳನ್ನು ಕೊಟ್ಟಿಗೆಗಳಲ್ಲಿ ಸಾಕುವ ಪದ್ಧತಿ ಪ್ರಾರಂಭಿಸಿದರು. ವೈದ್ಯರು, ವಿಜ್ಞಾನಿಗಳು ಬೇಕೆಂದಾಗ ಸಿಗುವುದಿಲ್ಲ. ಹಾಗಾಗಿ ಅನಿವಾರ್ಯತೆಯಿಂದ ತಾನೇ ಕುರಿ ವಿಜ್ಞಾನಿ ಮತ್ತು ವೈದ್ಯನಾಗಬೇಕಾಯಿತು ಎನ್ನುತ್ತಾರೆ ಕುರಿಗಳ ರೋಗಗಳನ್ನು ನೋಡಿದ ತಕ್ಷಣ ಕಂಡುಹಿಡಿಯಬಲ್ಲ ಈ ತಜ್ಞ ಕೆಂಪಣ್ಣ. ಆಹಾರ ಪದ್ಧತಿ, ರೋಗಗಳಿಗೆ ಬಳಸುವ ಔಷಧಿ, ತಳಿಸಂವರ್ಧನೆಗಳಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡು ಇವರು ಸಫಲತೆ ಸಾಧಿಸಿದ್ದಾರೆ. ಕೊಟ್ಟಗೆಯಲ್ಲೇ ಆಹಾರ ನೀಡುವುದು ಮತ್ತು ಪ್ರತಿ ಜಾತಿಯ ಕುರಿಗಳನ್ನು ಸ್ವಚ್ಛವಾದ ಗಾಳಿ ಬೆಳಕು ಬರುವ ಕೊಟ್ಟಿಗೆಗಳನ್ನು ನಿರ್ಮಿಸಿರುವುದನ್ನು ನೋಡಿದರೆ ಇವರು ಯಾವ ತಜ್ಞರಿಗೂ ಕಡಿಮೆಯಿಲ್ಲ ಎನ್ನಬಹುದು.
ಇವರ ಪಿತ್ರಾರ್ಜಿತ ೨ ಎಕರೆ ಜಮೀನನ್ನು ೧೧ ಎಕರೆವರೆಗೂ ವಿಸ್ತರಿಸಿ ಹೆಚ್ಚಿನ ಪಾಲು ಕುರಿ ಮೇವಿಗಾಗಿ ಉತ್ತಮ ಮೇವಿನ ತಳಿಗಳನ್ನು ಬೆಳೆಸಿದ್ದಾರೆ. ಪ್ರತಿ ಮುಂಗಾರಿನಲ್ಲಿ ದೊಡ್ಡ ದೊಡ್ಡ ಟ್ಯಾಂಕ್‌ಗಳಲ್ಲಿ ಸೈಲೇಜ್ ಮಾಡಿ ಶೇಖರಿಸಿಡುವುದು ಇವರ ವೈಶಿಷ್ಟ್ಯ.
ರೈತರಿಗೆ, ಸ್ವಸಹಾಯ ಸಂಘದ ಸದಸ್ಯರುಗಳಿಗೆ, ಹೊರ ರಾಜ್ಯದ ರೈತರಿಗೆ, ಪಶುಸಂಗೋಪನಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕುರಿ ಸಾಕುವ ತರಬೇತಿ ನೀಡುತ್ತಾರೆ. ಕುರಿಗಳ ಆರೋಗ್ಯ, ಮೂಲ ತಳಿಗಳ ಬಗ್ಗೆ ವಹಿಸಬೇಕಾದ ಎಚ್ಚರಿಕೆ, ಯಾವ ತಿಂಗಳಲ್ಲಿ ಸಂತಾನ ಕ್ರಿಯೆ ಮಾಡಿಸಬೇಕು, ಆಹಾರ, ಲಸಿಕೆ, ರೋಗಗಳನ್ನು ಕಂಡುಹಿಡಿಯುವುದು, ರಕ್ತ ಪರೀಕ್ಷೆ ಇತ್ಯಾದಿಗಳ ಬಗ್ಗೆ ತರಬೇತಿ ನೀಡುತ್ತಾರೆ. ಇವರ ಫಾರಂಗೆ ದೇಶ ವಿದೇಶಗಳಿಂದ ರೈತರು, ಅಧಿಕಾರಿಗಳು ಹೇಗೆ ಇವರು ಕುರಿ ಸಾಕಾಣಿಕೆ ಮಾಡಿ ತಳಿ ಅಭಿವೃದ್ಧಿ ಮಾಡುತ್ತಿದ್ದಾರೆಂದು ಅರಿಯಲು ಭೇಟಿ ನೀಡುತ್ತಾರೆ.
1995 ರಲ್ಲಿ ಭಾರತ ಸರ್ಕಾರದ ಬೆಸ್ಟ್ ಶೀಪ್ ಬ್ರೀಡರ್ ಪ್ರಮಾಣಪತ್ರ ಗಳಿಸಿರುವ ಇವರು ಭಾರತದ ಪಶುಗಳ ಪ್ರದರ್ಶನದಲ್ಲಿ ತಮ್ಮ ತಳಿಗಳನ್ನು ಪ್ರದರ್ಶಿಸಿ ಬಹುಮಾನಗಳನ್ನು ಪಡೆದ್ದಿದಾರೆ. ಆಂದ್ರ ಸರ್ಕಾರದ ತಳಿ ವರ್ಧಕ ರೈತ ಪ್ರಮಾಣ ಪತ್ರ, ರಾಜ್ಯ ಸರ್ಕಾರದ 2007ರ ಕೃಷಿ ಪಂಡಿತ್ ಪ್ರಶಸ್ತಿ, 2008ರಲ್ಲಿ ಜಗಜೀವನರಾಂ ಕಿಸಾನ್ ಪುರಸ್ಕಾರಗಳು ಇವರ ಸಾಧನೆಗೆ ಸಂದಿವೆ. ಭಾರತ ಸರ್ಕಾರದ ಕುರಿ, ಮೇಕೆ ಮತ್ತು ಮೊಲ ಅಭಿವೃದ್ಧಿಯ ಕೇಂದ್ರ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯ ಸರ್ಕಾರದ ಪಶು ವೈದ್ಯ ವಿಶ್ವವಿದ್ಯಾನಿಲಯದ ಎಜುಕೇಷನ್ ಕೌನ್ಸಿಲ್ ಸದಸ್ಯರೂ ಆಗಿದ್ದಾರೆ. ಕೇಂದ್ರ ಕೃಷಿ ಮಂತ್ರಿ ಶರತ್ ಪವಾರ್ “ಹಾರ್ವೆಸ್ಟ್ ಆಫ್ ಹೋಪ್” ಕಾಫಿ ಟೇಬಲ್ ಪುಸ್ತಕ ಮತ್ತು ಪ್ರಮಾಣ ಪತ್ರವನ್ನು ಪ್ರಧಾನ ಮಾಡಿದ್ದಾರೆ.
ಮನೆಯಲ್ಲಿ ಕುರಿ, ಮೇಕೆಗಳಿದ್ದರೆ ಬ್ಯಾಂಕಿನಲ್ಲಿ ಹಣವಿದ್ದಂತೆ. ವಿದ್ಯಾವಂತ ಯುವಕರು ಕೈಗೊಳ್ಳಬಹುದಾದ ಲಾಭದಾಯಕ ಉದ್ದಿಮೆಯಿದು. ರೈತರು ತಮ್ಮ ಶಕ್ತ್ಯಾನುಸಾರ ಕುರಿ ಸಾಕುವುದರಿಂದ ಅವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎನ್ನುತ್ತಾರೆ ವೀರಕೆಂಪಣ್ಣನವರು.
- Advertisement -
- Advertisement -
- Advertisement -
- Advertisement -