ಇವರಿಗೆ 76 ವರ್ಷಗಳಾದರೂ ಬಿ.ಎನ್.ಸಿ ಮೇಸ್ಟ್ರು ಎಂದೇ ತಾಲ್ಲೂಕಿನಾದ್ಯಂತ ಚಿರಪರಿಚಿತರು. ಇವರು ಸಾವಿರಾರು ಗ್ರಾಮಾಂತರ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿದ್ದಾರೆ. ಮೇಲೂರು, ಪಿಯುಸಿ ಬೋರ್ಡ್, ಜ್ಯೂನಿಯರ್ ಕಾಲೇಜು, ಗಂಜಿಗುಂಟೆ ಮತ್ತು ಚೀಮಂಗಲದಲ್ಲಿ ಹೈಸ್ಕೂಲ್ ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ ಕೆಲಸವನ್ನು ನಿರ್ವಹಿಸಿದ್ದಾರೆ. ಇವರ ಶಿಷ್ಯರಲ್ಲಿ ಮೂವರು ಐಎಎಸ್, ೫ ಕೆಎಎಸ್ ಮತ್ತು ಒಬ್ಬರು ಐಪಿಎಸ್ ಆಗಿರುವರು. ಗ್ರಾಮಾಂತರ ಪ್ರದೇಶಗಳಲ್ಲಿ ರಜಾ ದಿನಗಳಲ್ಲಿ ಉಪಾದ್ಯಾಯರುಗಳ ತಂಡಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಬೇತಿಗಳನ್ನು ನೀಡಿದ್ದಾರೆ.
1968ರಲ್ಲಿ ಕರ್ನಾಟಕ ಯುವಜನ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ ಗಣೇಶೋತ್ಸವ ಹಾಗೂ ವಿವಿಧ ಕನ್ನಡ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ರಾಜ್ಯ ಮಟ್ಟದ ಹೆಸರಾಂತ ಕಲಾವಿದರನ್ನು ಕರೆಸಿ ಪಟ್ಟಣದಲ್ಲಿ ರಂಗಭೂಮಿ ಕಲೆ ಬೆಳೆಯಲು ಶ್ರಮಿಸಿರುವರು. ತಾಲ್ಲೂಕಿನಲ್ಲಿ ಹೆಚ್ಚಾಗಿ ತೆಲುಗು ಪೌರಾಣಿಕ ನಾಟಕಗಳೇ ನಡೆಯುತ್ತಿದ್ದ ಕಾಲದಲ್ಲಿ ಕನ್ನಡ ಸಾಮಾಜಿಕ ನಾಟಕಗಳನ್ನು ನಿರ್ದೇಶಿಸಿ, ನಟಿಸಿದ್ದರು. ಮಂಗಳಾ ನನ್ನ ಅತ್ತಿಗೆ, ದುಡ್ಡೇ ದೊಡ್ಡಪ್ಪ, ಮಕ್ಮಲ್ ಟೋಪಿ, ಸಂಸಾರ ನೌಕೆ, ದೇಶಭಕ್ತರು ಇವರು ನಿರ್ದೇಶಿಸಿ ನಟಿಸಿದ ನಾಟಕಗಳು. ನಾಟಕಗಳಲ್ಲಿ ಇವರು ಮಾಡುತ್ತಿದ್ದ ಹಾಸ್ಯ ಪಾತ್ರಗಳು ವಿಶಿಷ್ಟವಾಗಿರುತ್ತಿದ್ದವು.
ಪಟ್ಟಣಕ್ಕೆ ಹೆಸರಾಂತ ಗಾಯಕಿಯರಾದ ಎಸ್.ಜಾನಕಿ, ಪಿ.ಸುಶೀಲಾ ಮತ್ತು ಎಲ್.ಆರ್.ಈಶ್ವರಿ ಅವರನ್ನು ಕರೆಸಿದ್ದರು. ತಾಲ್ಲೂಕಿನಲ್ಲಿ ಕನ್ನಡ ರಂಗಭೂಮಿ ಪಸರಿಸಲು ಶ್ರಮಿಸಿದ್ದಾರೆ. ತಾಲ್ಲೂಕಿನಾದ್ಯಂತ ಥಿಯೋಸೋಫಿಕಲ್ ಸೊಸೈಟಿಯ ಮೂಲಕ ಮಾನಸಿಕ ಸದೃಢತೆಗಾಗಿ ಹಲವು ಶಿಬಿರಗಳನ್ನು ಆಯೋಜಿಸಿದ್ದಾರೆ.
- Advertisement -
- Advertisement -
- Advertisement -
- Advertisement -