ವೇದಿಕೆನ್ನು ಏರಿದ್ದು ಹದಿನೆಂಟರ ವಯಸ್ಸಿನಲ್ಲಿ. ಈಗ ವಯಸ್ಸು ತೊಂಬತ್ತಐದು ಆದರೂ ಪಿಟೀಲು ಕೈಯಲ್ಲಿಡಿಯುತ್ತಿದ್ದಂತೆಯೇ ಚಿಮ್ಮುತ್ತದೆ ಉತ್ಸಾಹ, ಹೊರಡುತ್ತದೆ ಸುಶ್ರಾವ್ಯ ಸಂಗೀತ. ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆಯ ವಿದ್ವಾನ್ ಎಚ್.ಬಿ.ನಾರಾಯಣಾಚಾರ್ ತಮ್ಮ ಜೀವನವನ್ನೆಲ್ಲಾ ಕಲಾ ಸೇವೆ ಮತ್ತು ಪಿಟೀಲು ನುಡಿಸುವುದರಲ್ಲಿಯೇ ಕಳೆದಿದ್ದಾರೆ.
ಕರ್ನಾಟಕ ಸಂಗೀತದಲ್ಲಿ ಪಕ್ಕವಾದ್ಯವಾಗಿಯೂ ತನಿವಾದ್ಯವಾಗಿಯೂ ಬಳಸಲಾಗುವ ಪಿಟೀಲು ಭಾರತೀಯ ಸಂಗೀತಕ್ಕೆ ದೊರೆತದ್ದು ಪಾಶ್ಚಾತ್ಯ ಸಂಗೀತದ ಸಂಪರ್ಕದಿಂದ. ಆದರೆ ರಾವಣಹಸ್ತ ಎಂಬ ಭಾರತೀಯ ವಾದ್ಯದಿಂದ ಪಿಟೀಲು ರೂಪುಗೊಂಡಿರಬಹುದೆಂಬ ಅಭಿಮತವನ್ನು ಪಾಶ್ಚಾತ್ಯ ಸಂಗೀತಗಾರರೇ ಕೆಲವರು ವ್ಯಕ್ತಪಡಿಸಿದ್ದಾರೆ. ಪಿಟೀಲಿನಂಥ ಒಂದು ವಾದ್ಯ ನಮ್ಮಲ್ಲಿತ್ತೆಂದೂ ಅದನ್ನು ಧನುರ್ವೀಣೆ ಎಂದು ಕರೆಯುತ್ತಿದ್ದರೆಂದೂ ಕೆಲವರು ಹೇಳುತ್ತಾರೆ.
ಕರ್ನಾಟಕ ಮಾತ್ರವಲ್ಲದೆ, ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ನಿರಂತರವಾಗಿ ಪಿಟೀಲು ಸೋಲೋ ಕಾರ್ಯಕ್ರಮವನ್ನು ನೀಡುತ್ತಾ ಬಂದಿದ್ದಾರೆ.
ಇವರದ್ದು ಸಂಗೀತಗಾರರ ಮನೆತನ. ತಂದೆ ಪಂಚನನಾಚಾರ್ಯರು ತಬಲಾ ವಾದಕರು. ಚಿಕ್ಕಪ್ಪ ನಂಜುಂಡಾಚಾರ್ಯ ಸಂಗೀತ ವಿದ್ವಾಂಸರು. ತಂದೆ ಮತ್ತು ಚಿಕ್ಕಪ್ಪನವರಲ್ಲಿ ಸಂಗೀತದ ಪ್ರಾರಂಭಿಕ ಶಿಕ್ಷಣವನ್ನು ಪಡೆದು ಹಲಸೂರಿನ ವಿದ್ವಾನ್ ಅಣ್ಣಯ್ಯಸ್ವಾಮಿ ಅವರಲ್ಲಿ ಪಿಟೀಲುವಾದನವನ್ನು ಒಂದು ದಶಕದ ಕಾಲ ಅಭ್ಯಾಸ ಮಾಡಿದರು. ನಂತರ ವಿದ್ವಾಂಸರಾದ ಕಿತ್ತಂಡೂರು ರಾಮಕೃಷ್ಣಪ್ಪ ಮತ್ತು ದೊಡ್ಡಬಳ್ಳಾಪುರದ ಲಕ್ಷ್ಮೀನಾರಾಯಣಪ್ಪ ಅವರಲ್ಲಿ ಹೆಚ್ಚಿನ ಶಿಕ್ಷಣ ಪಡೆದರು.
ಸಂಗೀತ ಮತ್ತು ಹರಿಕಥಾ ಕ್ಷೇತ್ರಗಳಲ್ಲಿ ವಿದ್ವಾಂಸರಾದ ಚಿಮತಲಪಲ್ಲಿ ರಾಮಚಂದ್ರರಾವ್, ಚಿಂತಲಪಲ್ಲಿ ಕೃಷ್ಣಮೂರ್ತಿ, ಚಿಂತಲಪಲ್ಲಿ ವೆಂಕಟರಾವ್, ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೈ, ಪೊಲ್ಲಾಚಿ ಶಂಕರನ್, ರಮಣಕುಮಾರ್, ಸರೋಜಾ ನಟರಾಜನ್, ಸಂಬಂಧಮೂರ್ತಿ ಭಾಗವತರ್, ಹೊನ್ನಪ್ಪ ಭಾಗವತರ್, ವೀರಗಂಧಂ ವೆಂಕಟಸುಬ್ಬರಾವ್, ತೆನಾಲಿ ರಾಮಕುಮಾರಿ, ಚನ್ನೈ ಕಮಲಾಕುಮಾರಿ, ಸರಸ್ವತಿ, ತೆನಾಲಿ ತಿರುಪತಿ ನಾಗರತ್ನಂ ಭಾಗವತಾರಿಣಿ, ಎನ್.ಆರ್.ಜ್ಞಾನಮೂರ್ತಿ ಮುಂತಾದ ಕಲಾವಿದರಿಗೆ ಪಿಟೀಲಿನ ಪಕ್ಕವಾದ್ಯ ನುಡಿಸಿದ್ದಾರೆ.
ಕೈವಾರ ರಾಷ್ಟ್ರೀಯ ಸಂಗೀತ ಮಹೋತ್ಸವ, ಹಂಪಿ ಉತ್ಸವ, ಧರ್ಮಸ್ಥಳ ಸಂಗೀತೋತ್ಸವ, ಮುಳಬಾಗಿಲು ಪುರಂದರೋತ್ಸವ, ಚಿಕ್ಕಬಳ್ಳಾಪುರ ಜಿಲ್ಲಾ ಉತ್ಸವ ಮುಂತಾದ ವೇದಿಕೆಗಳಲ್ಲಿ ಸಂಗೀತ ನೀಡಿರುವ ನಾರಾಯಣಾಚಾರ್ ನೂರಾರು ಪ್ರಬುದ್ಧ ಶಿಷ್ಯರನ್ನೂ ಸಂಗೀತ ಮಾಧ್ಯಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಇವರ ಸಂಗೀತ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವ ಪುರಸ್ಕಾರಗಳೊಂದಿಗೆ ಸತ್ಕರಿಸಿವೆ. ‘ನಾದ ಚಿಂತಾಮಣಿ’, ‘ಪಿಟೀಲು ವಾದ್ಯ ಪ್ರವೀಣ’, ‘ಸಂಗೀತ ರತ್ನ’ ಮುಂತಾದ ಪುರಸ್ಕಾರಗಳು ಇವರಿಗೆ ಸಂದಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2008-09ರ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗಂಜಿಗುಂಟೆ ಗೆಳೆಯರ ಬಳಗದಿಂದ “ಗಾನ ಕಮಲ” ಎಂಬ ಬಿರುದು ಮತ್ತು ಸನ್ಮಾನಕ್ಕೆ ಭಾಜನರಾಗಿದ್ದಾರೆ.