Home People ಸ್ವಾತಂತ್ರ್ಯ ಹೋರಾಟಗಾರ ನಾರಾಯಣಪ್ಪ

ಸ್ವಾತಂತ್ರ್ಯ ಹೋರಾಟಗಾರ ನಾರಾಯಣಪ್ಪ

0

ತಾಲ್ಲೂಕಿನ ಚೌಡಸಂದ್ರದ ಸ್ವಾತಂತ್ರ್ಯ ಹೋರಾಟಗಾರ ನಾರಾಯಣಪ್ಪರವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸೇವೆ ಸಲ್ಲಿಸಿದ ಮಹನೀಯರು. ಚೌಡಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿಯೂ ನಾರಾಯಣಪ್ಪ ಅವರು ಸೇವೆ ಸಲ್ಲಿಸಿದ್ದರು. ಅವರು ಹಂಚಿಕೊಂಡ ಸ್ವಾತಂತ್ರ್ಯ ಹೋರಾಟದ ನೆನಪುಗಳು:
‘ಎಲ್ಲರೂ ನೋಡುತ್ತಿರುವಾಗಲೇ ಇದ್ದಕ್ಕಿದ್ದಂತೆ ಕಂಬದಹಳ್ಳಿಯ ಮುನಿಶಾಮಪ್ಪ ಅವರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರ ಹ್ಯಾಟ್ ತೆಗೆದು ಗಾಂಧಿ ಟೋಪಿಯನ್ನು ಇಟ್ಟುಬಿಟ್ಟರು. ತಕ್ಷಣವೇ ‘ಲಾಠೀ ಚಾರ್ಜ್’ ಎಂಬ ಕೂಗು ಕೇಳಿತು. ಬೆತ್ತಗಳು ಮಾತಾಡಿದವು. ಸತ್ಯಾಗ್ರಹ ಮಾಡುತ್ತಿದ್ದವರನ್ನು ಪೊಲೀಸರು ಚೆನ್ನಾಗಿ ಬಡಿದರು’ ಎಂದು ತಮ್ಮ ಸ್ವಾತಂತ್ರ್ಯದ ಹೋರಾಟದ ನೆನಪುಗಳನ್ನು ತೆರೆದಿಟ್ಟಿದ್ದರು ಚೌಡಸಂದ್ರದ ನಾರಾಯಣಪ್ಪ.
‘ರೈಲ್ವೆ ಹಳಿಗಳ ಬಳಿ ಇದ್ದ ಕಲ್ಲುಗಳನ್ನು ಕೆಲವರು ಪೊಲೀಸರೆಡೆಗೆ ತೂರತೊಡಗಿದರು. ‘ಫೈರ್’ ಅಂದರು ಪೊಲೀಸರು. ಒಮ್ಮೆಗೇ ಢಮಾರ್ ಢಮಾರ್ ಎಂಬ ದೊಡ್ಡದಾದ ಸದ್ದು. ಸಬ್‌ಇನ್ಸ್‌ಪೆಕ್ಟರ್ ಸಿಡಿಸಿದ ಗುಂಡಿಗೆ ಇಬ್ಬರು ಸತ್ತರು. ನಮ್ಮನ್ನೆಲ್ಲಾ ಹಿಡಿದು ಜೈಲಿಗೆ ಹಾಕಿದರು. ಆನಂತರ ತಿಳಿಯಿತು ಪೊಲೀಸ್ ಪೇದೆಗಳು ಆಕಾಶಕ್ಕೆ ಗುಂಡು ಹಾರಿಸಿದ್ದರಂತೆ. ಅವರಿಗೂ ಸ್ವಾತಂತ್ರ್ಯದ ಹಂಬಲವಂತೆ. ಇಲ್ಲದಿದ್ದರೆ ಈ ಕಥೆ ಹೇಳಲು ನಾನು ಇರುತ್ತಿರಲಿಲ್ಲ ಮತ್ತು ಆ ದಿನ ನೂರಾರು ಹೆಣಗಳು ಉರುಳುತ್ತಿದ್ದವು.
ಹದಿನೈದು ದಿನಗಳ ಕಾಲ ಶಿಡ್ಲಘಟ್ಟ ಜೈಲಿನಲ್ಲಿ ಮತ್ತು ಒಂದು ತಿಂಗಳು ಮೂರು ದಿನ ಚಿಕ್ಕಬಳ್ಳಾಪುರದ ಜೈಲಿನಲ್ಲಿ ನಮ್ಮನ್ನು ಇಟ್ಟಿದ್ದರು. ಆಗ ಬಂತು ಸ್ವಾತಂತ್ರ್ಯ. ಮಧ್ಯರಾತ್ರಿಯ ಸ್ವಾತಂತ್ರ್ಯ. ೨೮೦ ಜನ ಇದ್ದೆವು. ನಮ್ಮ ಊರುಗಳಿಗೆ ವಾಪಸ್ ಕಳಿಸಿದರು. ನಮ್ಮ ಹೋರಾಟ ಸಾರ್ಥಕವಾದ ಭಾವದಿಂದ ಊರಿಗೆ ಮರಳಿದೆವು. ಹೋರಾಟ ಪ್ರಾರಂಭಿಸಿದಾಗ ನಮಗೆ ಇಷ್ಟು ಬೇಗ ಸ್ವಾತಂತ್ರ್ಯ ಸಿಗುವುದೆಂಬ ಕಲ್ಪನೆಯಿರಲಿಲ್ಲ. ಆದರೆ ನಮ್ಮ ಹೋರಾಟಕ್ಕೆ ಸಿಕ್ಕ ಫಲ ತೃಪ್ತಿ ತಂದಿತು.
ರಾಜೀವ್ ಗಾಂಧಿ ಪ್ರಧಾನಿಯಾದಾಗ ನಮ್ಮ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ದೆಹಲಿಗೆ ಕರೆಸಿ ಗೌರವಿಸಿದ್ದರು. ಮೇಲೂರು ಸುಬ್ಬಣ್ಣ, ಮಳ್ಳೂರು ಮುನಿನಾಗಪ್ಪ, ಭಕ್ತರಹಳ್ಳಿ ಬಚ್ಚೇಗೌಡ, ಬಚ್ಚಹಳ್ಳಿ ಚಂಗಲರಾವ್, ಚೌಡಸಂದ್ರ ರಾಮಪ್ಪ, ಮೇಲೂರು ಸಂಜೀವಪ್ಪ, ಹುಜಗೂರು ಹನುಮಂತರಾಯಪ್ಪ, ಮಳ್ಳೂರು ಮುನಿಯಪ್ಪ, ಅಪ್ಪೇಗೌಡನಹಳ್ಳಿ ಪಿಳ್ಳಪ್ಪ ಮುಂತಾದವರು ದೆಹಲಿಗೆ ಹೋಗಿದ್ದೆವು. ಅವರಲ್ಲಿ ಬಹುತೇಕ ಮಂದಿ ಈಗಿಲ್ಲ’ ಎಂದು ತಮ್ಮ ಗತಕಾಲದ ನೆನಪುಗಳನ್ನು ಹಂಚಿಕೊಂಡಿದ್ದರು.