Home People ಕವರ್ ಪೇಜ್ ಕಲಾವಿದ ಅಜಿತ್ ಕೌಂಡಿನ್ಯ

ಕವರ್ ಪೇಜ್ ಕಲಾವಿದ ಅಜಿತ್ ಕೌಂಡಿನ್ಯ

0

ಕಲೆಯು ನಾನಾ ವಿಧದಲ್ಲಿ ಅಭಿವ್ಯಕ್ತವಾಗುತ್ತದೆ. ಕಾಲಾಂತರಗಳಲ್ಲಿ ‘ಕಲೆ’ಯನ್ನು ಕುರಿತ ತಿಳುವಳಿಕೆ, ವ್ಯಾಖ್ಯಾನಗಳು ಬದಲಾಗುತ್ತಲೇ ಬಂದಂತೆ. ಅವುಗಳನ್ನು ರಚಿಸುವ ವಿಧಾನ-,ತಂತ್ರ- ಹಾಗೂ ಉದ್ದೇಶಗಳೂ ಬದಲಾಗುತ್ತಲೇ ಇವೆ. ಮುದ್ರಣ ಕ್ಷೇತ್ರದಲ್ಲಿ ತಾಂತ್ರಿಕತೆ ಮಿಳಿತಗೊಂಡಂತೆ, ಪುಸ್ತಕಗಳ ಮುಖಪುಟ ವಿನ್ಯಾಸವೂ ಒಂದು ಕಲಾ ಪ್ರಕಾರವಾಗಿ ರೂಪುಗೊಂಡಿದೆ.
ಮುಖಪುಟ ವಿನ್ಯಾಸವೆಂಬುದನ್ನು ಒಂದು ಪರಿಪೂರ್ಣ ಕಲೆಯೆಂದು ಹಲವು ವಿಮರ್ಶಕರು ಒಪ್ಪದಿದ್ದರೂ ಅದನ್ನೊಂದು ಕಲೆಯೆಂಬಂತೆ, ಚಿತ್ರಕಲೆಯಂತೆಯೇ ಇದೂ ಕೂಡ ಕಲಾಕೃತಿಯೆಂಬಂತೆ ಒಪ್ಪುವ ಹೆಚ್ಚಿನವರು ನಮ್ಮ ನಡುವಿದ್ದಾರೆ. ಮುಖಪುಟ ಕಲೆಯಲ್ಲಿ ಹೇರಳವಾದ ಪ್ರಯೋಗಗಳು ನಡೆಯುತ್ತಿವೆ. ಇರುವ ತಂತ್ರಜ್ಞಾನವನ್ನು ಸೂಕ್ತವಾಗಿ, ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಪರಿಪಾಟ ಹೆಚ್ಚಿದೆ.
ಮುಖಪುಟ ವಿನ್ಯಾಸಗಳ ಮೂಲಕ ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಿಸುವ ಹವ್ಯಾಸವನ್ನು ರೂಪಿಸಿಕೊಂಡಿದ್ದಾರೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಹೌಸಿಂಗ್ ಬೋರ್ಡ್ನ ನಿವಾಸಿ ಅಜಿತ್ ಕೌಂಡಿನ್ಯ. ವನಸುಮ ಪ್ರಕಾಶನ, ಪ್ರಗತಿ ಗ್ರಾಫಿಕ್ಸ್, ಟೋಟಲ್ ಕನ್ನಡ, ಕನ್ನಡ ಸಾಹಿತ್ಯ ಸೇವಾ ಸದನ, ಗೋಮಿನಿ, ತುಂತುರು ಮುಂತಾದ ಪ್ರಕಾಶಕರ ಸುಮಾರು ಅರವತ್ತಕ್ಕೂ ಹೆಚ್ಚು ಪುಸ್ತಕಗಳಿಗೆ ಅವರು ಮುಖಪುಟ ವಿನ್ಯಾಸ ಮಾಡಿದ್ದಾರೆ. ಕೆಲವಾರು ಮಾಹಿತಿ ಕೈಪಿಡಿ, ಆಹ್ವಾನ ಪತ್ರಿಕೆ, ಲಾಂಚನ ಮುಂತಾದವುಗಳನ್ನು ಕೂಡ ರೂಪಿಸಿದ್ದಾರೆ.
ಎಂಜಿನಿರಿಂಗ್ ಪದವೀಧರರಾದ ಅಜಿತ್ಗೆ ಅಧ್ಯಾಪಕ ವೃತ್ತಿ ಅಚ್ಚುಮೆಚ್ಚು. ನಾಲ್ಕು ವರ್ಷ ಅಧ್ಯಾಪಕ ವೃತ್ತಿಯನ್ನು ಕೈಗೊಂಡಿದ್ದ ಅವರು ಈಗ ಎಂ.ಟೆಕ್ ಓದುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಕಂಪ್ಯೂಟರ್ನಲ್ಲಿ ಚಿತ್ರಕಲೆ ಹಾಗೂ ಮುಖಪುಟ ವಿನ್ಯಾಸಗಳನ್ನು ರಚಿಸುತ್ತಾರೆ.
’ನಾವೊಂದು ಸಮಾನ ಮನಸ್ಕರ ತಂಡ ಕಟ್ಟಿದ್ದು, ಲ್ಯಾಂಪ್ಸ್ ಎಂದು ಹೆಸರಿಸಿದ್ದೇವೆ. ಪ್ರವಾಸ ನಮ್ಮ ಪ್ರಮುಖ ಉದ್ದೇಶ. ನಮ್ಮ ತಂಡಕ್ಕೆ ಲೋಗೋ(ಲಾಂಚನ) ರಚಿಸಿಕೊಡಲು ಅಜಿತ್ರನ್ನು ಕೇಳಿದೆವು. ಅತ್ಯಂತ ಕಡಿಮೆ ಅವಧಿಯಲ್ಲಿ ಅದ್ಭುತವಾಗಿ ಹಾಗೂ ವಿನೂತನವಾಗಿ ಲೋಗೋ ರಚಿಸಿಕೊಟ್ಟಿದ್ದಾರೆ. ನಮ್ಮ ಉದ್ದೇಶವನ್ನು ಸಮರ್ಥವಾಗಿ ಅದರಲ್ಲಿ ಧ್ವನಿಸಿದ್ದಾರೆ’ ಎನ್ನುತ್ತಾರೆ ದೇಶನಾರಾಯಣ ರಮೇಶ್ಬಾಬು.
’ಮೊದಲಿಂದಲೂ ನನಗೆ ಚಿತ್ರಕಲೆಯಲ್ಲಿ ಒಲವಿತ್ತು. ಕಂಪ್ಯೂಟರ್ ಮತ್ತು ಅಂತರ್ಜಾಲ ಬಂದನಂತರ ಕಲಾವಿದರಿಗೆ ಹೊಸ ಸಾಧ್ಯತೆಗಳು ಸಿಕ್ಕಿವೆ. ಮುಖಪುಟ ವಿನ್ಯಾಸ ಮಾಡುವುದು –ಕೂಡ ಅತ್ಯಂತ ಸೃಜನಶೀಲತೆಯಿಂದ ಕೂಡಿರುತ್ತದೆ ಎಂಬುದನ್ನು ಮುಖಪುಟ ಕಲಾವಿದ ಅಪಾರ ಅವರಿಂದ ಕಂಡುಕೊಂಡೆ. ಅವರ ಪ್ರೇರಣೆಯಿಂದ ನಾನೂ ಪ್ರಯತ್ನಿಸಿದೆ. ಮುಖಪುಟ ರಚಿಸುವಾಗ ಹಲವಾರು ಸವಾಲುಗಳಿರುತ್ತವೆ. ಆಕರ್ಷಣೆ ಮತ್ತು ಅಭಿವ್ಯಕ್ತಿ ನಡುವೆ ಜಗ್ಗಾಟವಂತೂ ಇದ್ದೇ ಇದೆ. ಓದುಗ ಖರೀದಿಸಲು ಆಕರ್ಷಕವಾಗಿರುವಂತೆಯೇ ಪುಸ್ತಕದ ಆಶಯವನ್ನೂ ಅದು ಬಿಂಬಿಸಬೇಕು. ಆರ್ಥಿಕವಾಗಿ ಈ ಕಲೆಯ ಮೇಲೆ ಅವಲಂಭಿಸಿಲ್ಲ. ಇದು ಕೇವಲ ಹವ್ಯಾಸವಾಗಷ್ಟೇ ಇರುವುದರಿಂದ ನನಗೆ ಸಾಕಷ್ಟು ನೆಮ್ಮದಿ ಹಾಗೂ ಸಂತಸ ಸಿಗುತ್ತಿದೆ’ ಎನ್ನುತ್ತಾರೆ ಅಜಿತ್ ಕೌಂಡಿನ್ಯ.
’ಪ್ರಸಿದ್ಧ ತೆಲುಗು ಸಿನಿಮಾ ನಿರ್ದೇಶಕ ಹಾಗೂ ಚಿತ್ರಕಾರ ಬಾಪು ಅವರ ಚಿತ್ರವನ್ನು ಬಳಸಿ ಸಂತೇಕಲ್ಲಹಳ್ಳಿಯ ಲಕ್ಷ್ಮೀನರಸಿಂಹ ಶಾಸ್ತ್ರಿಗಳ ಪುಸ್ತಕದ ಮುಖಪುಟ ರೂಪಿಸಿದ್ದೆ. ಬಾಪು ಅದನ್ನು ಮೆಚ್ಚಿ ಒಳ್ಳೆಯ ಮಾತುಗಳನ್ನಾಡಿದರು. ನನ್ನ ವಿದ್ಯಾರ್ಥಿನಿಯೊಬ್ಬರು ರಚಿಸಿದ್ದ ಚಿತ್ರಕಲೆ ಬಳಸಿ ’ಅಜ್ಜಿ ಹೇಳಿದ ಕಥೆಗಳು’ ಪುಸ್ತಕಕ್ಕೆ ಮುಖಪುಟ ರಚಿಸಿದ್ದೆ. ಆ ಪುಸ್ತಕಗಳನ್ನು ಪಡೆದು ಅದರಲ್ಲಿ ತನ್ನ ಹೆಸರನ್ನು ಕಂಡು ನನ್ನ ವಿದ್ಯಾರ್ಥಿನಿ ಸಂತಸಪಟ್ಟಿದ್ದರು. ಅನಂತ್ನಾಗ್ ಬರೆದ ’ನನ್ನ ತಮ್ಮ ಶಂಕರ’, ಡಾ.ಕೃಷ್ಣಾನಂದ ಕಾಮತರ ಪುಸ್ತಕಗಳು ಮುಂತಾದವುಗಳ ಬಗ್ಗೆ ಬಂದ ಪ್ರಶಂಸೆಗಳು ನನ್ನ ಕ್ರಿಯಾಶೀಲತೆಯನ್ನು ಹೆಚ್ಚಿಸಿವೆ. ಓದು, ಕ್ಯಾಮೆರಾ ಮತ್ತು ತಿರುಗಾಟ ಇದಕ್ಕೆ ಪೂರಕವಾಗಿದೆ’ ಎಂದು ಅವರು ಹೇಳಿದರು.