ಜೇನುತುಪ್ಪ ಸಂಗ್ರಹಿಸುವ ಜೇನ್ನೊಣಗಳಲ್ಲಿ ಹೆಜ್ಜೇನು, ಕೋಲು ಜೇನು, ಮಿಸ್ರಿ, ತುಡುವೆಜೇನು ಎಂಬ ಜಾತಿಯವು ನಮ್ಮ ಭಾಗದಲ್ಲಿವೆ. ಇವುಗಳಲ್ಲಿ ತುಡುವಿ ಬಿಟ್ಟರೆ ಉಳಿದವು ಒಂದೇ ಕಡೆ ಸ್ಥಿರವಾಗಿರುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಗರೀಕರಣದ ಹೊಡೆತಕ್ಕೆ ಹೆಜ್ಜೇನು ಹಾಗೂ ಇತರೆ ಸ್ವಾಭಾವಿಕ ಜೇನು ನೊಣಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ತಾಲ್ಲೂಕಿನಲ್ಲಿ ಹಿಂದೆ ಹೇರಳವಾಗಿ ಕಾಣಸಿಗುತ್ತಿದ್ದ ಜೇನುಗೂಡುಗಳು ಈಗೀಗ ವಿರಳವಾಗಿವೆ. ಈಚೆಗೆ ಲಾಕ್ ಡೌನ್ ಪರಿಣಾಮದಿಂದ ಔಷಧಿಗಳನ್ನು ಸಿಂಪಡಿಸುವುದು ನಿಧಾನವಾದ ಕಾರಣ ಕೆಲವು ದ್ರಾಕ್ಷಿ ತೋಟಗಳಲ್ಲಿ ಕಡ್ಡಿ ಜೇನು ಕಂಡುಬಂದಿದೆ.
ಕೋಲು ಜೇನು ಅಥವಾ ಕಡ್ಡಿ ಜೇನು ಎಂಬ ಹೆಸರು ಬಂದಿರುವುದೇ ಅದು ಕೋಲಿನ ಆಸರೆಯಲ್ಲಿ ಗೂಡು ಕಟ್ಟುವುದಕ್ಕೆ. ಕೋಲು ಜೇನುಗಳು ಗೂಡು ಕಟ್ಟಲು ಹೆಚ್ಚಾಗಿ, ಪೊದೆಗಳು ಹಾಗೂ ಮರಗಳ ತೆಳುವಾದ ಕೊಂಬೆಗಳನ್ನು ಆರಿಸಿ ಕೊಳ್ಳುತ್ತವೆ ಹಾಗೂ ಆ ಕೊಂಬೆಯನ್ನು ಒಳಗೊಂಡು ಎರಿಯನ್ನು ರಚಿಸುತ್ತವೆ. ಕೊಂಬೆಯನ್ನು ಒಳಗೊಂಡ ಎರಿಯ ಮೇಲ್ಬಾಗ ಹೆಚ್ಚು ದಪ್ಪವಾಗಿರುತ್ತದೆ. ಕೆಳಭಾಗಕ್ಕೆ ಬಂದಂತೆಲ್ಲಾ ಎರಿಯು ತೆಳುವಾಗಿರುತ್ತದೆ. ಮೇಲ್ಬಾಗದ ಕಣಗಳಲ್ಲಿಯೇ ಜೇನು ತುಪ್ಪದ ಸಂಗ್ರಹಣೆ ಮಾಡುತ್ತವೆ.
“ಎರಿಯಲ್ಲಿ ಜೇನಿನ ಭಾಗವನ್ನು ಮಾತ್ರ ಕತ್ತರಿಸಿ ತೆಗೆದು ಮೊಟ್ಟೆ ಮರಿಗಳಿರುವ ಭಾಗವನ್ನು ಅವುಗಳ ಸಹಜ ವಾಸಸ್ಥಾನಗಳಲ್ಲಿ ಇರಿಸುವ ವಿಧಾನವನ್ನು ಅನುಸರಿಸಬೇಕು. ಕೆಳಗೆ ಬಟ್ಟಲು ಇಟ್ಟುಕೊಂಡು, ಚಾಕುವಿನಿಂದ ಕೋಲಿನ ಮೇಲು ಭಾಗದ ಬಳಿಯಿಂದ ಕೋಲಿಗೆ ತಾಗದಂತೆ ಏರಿಯನ್ನು ಕತ್ತರಿಸಿ, ಉಳಿಕೆಯನ್ನು ಅವುಗಳ ಹಕ್ಕಿನ ಜೇನು ಎಂಬಂತೆ ಅಲ್ಲಿಯೇ ಉಳಿಸಬೇಕು” ಎಂದು ಈ ಜೇನನ್ನು ಕೀಳುವ ಬಗೆಯನ್ನು ತೋಟಗಾರಿಕಾ ಸಹಾಯಕ ನಿರ್ದೇಶಕ ರಮೇಶ್ ವಿವರಿಸಿದರು.
“ಪ್ರತೀ ಕುಟುಂಬದಿಂದ ಒಂದು ಕಿಲೋಗ್ರಾಂಗಳಷ್ಟು ಮಾತ್ರ ಜೇನು ತುಪ್ಪವನ್ನು ಕೊಡಬಲ್ಲ ಈ ಜೇನುನೊಣಗಳು ಮುಖ್ಯವಾಗಿ ನಮ್ಮ ಬೆಳೆಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಸಹಕಾರಿಯಾಗುತ್ತವೆ. ತಮ್ಮ ಗೂಡಿನಿಂದ 0.5 ಕಿ.ಮೀ ದೂರದವರೆಗಿನ ಪ್ರದೇಶದಲ್ಲಿ ಆಹಾರ ಸಂಗ್ರಹಿಸುವ ಇವು ಉಷ್ಣವಲಯ ಮತ್ತು ಒಣ ತಗ್ಗುಪ್ರದೇಶ ಇತ್ಯಾದಿ ಹವಾಮಾನಗಳಲ್ಲಿ ಒಗ್ಗಿ ಕೊಳ್ಳುವುದರಿಂದ ಹಾಗೂ ವಲಸೆ ಹೋದರೂ ಅತೀ ಸಮೀಪದ ಸ್ಥಳದಲ್ಲಿಯೇ ನೆಲೆಸುವುದರಿಂದ ಆಯಾ ಪ್ರದೇಶದ ಬೆಳೆಗಳ ಪರಾಗಸ್ಪರ್ಶವನ್ನು ಅತ್ಯಂತ ಯಶಸ್ವಿಯಾಗಿ ಇವು ನಿರ್ವಹಿಸುತ್ತವೆ” ಎಂದು ಅವರು ಹೇಳಿದರು.