23.1 C
Sidlaghatta
Sunday, December 22, 2024

ಹಾರುವ ಹಕ್ಕಿಯ ಸಾಕುವ ಹವ್ಯಾಸ

- Advertisement -
- Advertisement -

ಅಮೇರಿಕನ್ ಫ್ರಿಲ್‌ಬ್ಯಾಕ್, ಅಮೇರಿಕನ್ ಜಾಕೋಬಿನ್, ಪೌಟರ್‌, ರೇಸಿಂಗ್ ಹೋಮರ್… ಈ ಹೆಸರುಗಳನ್ನು ಕೇಳುತ್ತಿದ್ದರೆ ಯಾವುದೋ ವಿದೇಶೀ ಜನರ ನಾಮಧೇಯವಿರಬಹುದು ಎನಿಸಬಹುದು. ಹಾಗೇನಾದರೂ ನೀವು ಊಹಿಸಿದ್ದರೆ ಅದು ತಪ್ಪು. ಇವು ಅಪ್ಪಟ ವಿದೇಶೀ ಪಾರಿವಾಳಗಳ ಹೆಸರು. ಇವುಗಳನ್ನು ನೋಡಲು ವಿದೇಶಕ್ಕೆ ಹೋಗಬೇಕಿಲ್ಲ. ಶಿಡ್ಲಘಟ್ಟದ ರಿಜ್ವಾನ್‌ ಪಾಷಾ ಅವರನ್ನು ಭೇಟಿಯಾದರೆ ಸಾಕು, ಎಲ್ಲವನ್ನೂ ಪರಿಚಯಿಸುತ್ತಾರೆ.
ಪಟ್ಟಣದ ತಿಮ್ಮಯ್ಯ ಲೇಔಟ್‌ನಲ್ಲಿ ವಾಸಿಸುವ ರಿಜ್ವಾನ್ ಪಾಷ ಸುಮಾರು ಹತ್ತು ವರ್ಷಗಳಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ದೇಶ ವಿದೇಶಗಳ ವೈವಿಧ್ಯಮಯ ಪಾರಿವಾಳ ಸಾಕುತ್ತಿದ್ದಾರೆ. ಶಿಡ್ಲಘಟ್ಟದ ಹವಾಮಾನಕ್ಕೆ ಹೊಂದಿಕೊಂಡಿರುವ ಪಾರಿವಾಳಗಳು ತಮ್ಮ ತವರು ಮರೆತು ಇಲ್ಲಿಯೇ ನೆಲೆ ಕಂಡುಕೊಂಡಿವೆ.
ಮೈತುಂಬಾ ಸುರುಳಿ ಸುರುಳಿಯಾಕಾರದ ಮಲ್ಲಿಗೆ ಹೂಗಳಂತಹ ಪುಕ್ಕಗಳಿರುವ ಅಮೇರಿಕನ್ ಫ್ರಿಲ್‌ಬ್ಯಾಕ್, ಸಿಂಹದ ಕೇಸರದಂತೆ ತಲೆಯ ಸುತ್ತ ಪುಕ್ಕಗಳಿರುವ ಕಾಲಿನ ಪಕ್ಕದಲ್ಲಿ ಬೀಸಣಿಗೆಯಂತಹ ಪುಕ್ಕಗಳನ್ನು ಹೊಂದಿರುವ ಅಮೇರಿಕನ್ ಜಾಕೋಬಿನ್, ಎದೆಯುಬ್ಬಿಸಿ ಕಾಲಿನ ಬಳಿ ಪುಕ್ಕಗಳಿರುವ ಗಂಭೀರವದನದ ಹದ್ದಿನಗಾತ್ರದಲ್ಲಿರುವ ಪೌಟರ್‌, ಸಾವಿರ ಕಿಮೀ ದೂರದವರೆಗೂ ಹೋಗಿ ಬಿಟ್ಟರೂ ಪುನಃ ವಾಪಸ್ ಮನೆಗೆ ಕಡಿಮೆ ಸಮಯದಲ್ಲಿ ಬಂದು ಮುಟ್ಟುವ ರೇಸಿಂಗ್ ಹೋಮರ್, ಕಪ್ಪು ಬಿಳಿ ಹಾಗೂ ಪೂರಾ ಬಿಳಿ ಬಣ್ಣದ ಲಕ್ವಾ ಪಾರಿವಾಳಗಳು ಹಾಗೂ ಸಾಕಷ್ಟು ವಿಧದ ಪಾರಿವಾಳಗಳು ಇವರ ಪಾಲನೆಯಲ್ಲಿವೆ.
ಈ ಪಾರಿವಾಳಗಳು ಸಾಮಾನ್ಯವೇನಲ್ಲ. ಇವು ರೇಸಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಬಾಚಿಕೊಂಡಿವೆ. ದೂರ ಹಾರಾಟದ ಸ್ಪರ್ಧೆಗಳಿಗೆ ರಿಜ್ವಾನ್ ಬೆಂಗಳೂರು, ತುಮಕೂರು, ಕಡಪಾ, ಮದನಪಲ್ಲಿ, ರಾಯಚೂಟಿ, ತಿರುಪತಿ, ಕೇರಳ, ಬಾಂಬೆ ಮುಂತಾದೆಡೆ ಒಯ್ದು ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ. ಎಲೆಕ್ಟ್ರಿಕ್, ಪಿ.ಓ.ಪಿ ಮತ್ತು ಪ್ಲಂಬಿಂಗ್ ಕೆಲಸ ಮಾಡುವ ಅವರು ತಮ್ಮ ಗಳಿಕೆ ಮತ್ತು ಶ್ರಮವನ್ನು ಪಾರಿವಾಳ ಸಾಕುವ ಹವ್ಯಾಸಕ್ಕೆ ಮೀಸಲಿಟ್ಟಿದ್ದಾರೆ. ಕೆ.ಜಿ.ಎಫ್‌ನ ಪಾರಿವಾಳದ ಕ್ಲಬ್ ಸದಸ್ಯರಾಗಿರುವ ಅವರು ಎಲ್ಲೇ ಪಾರಿವಾಳದ ಸ್ಪರ್ಧೆಯಿದ್ದರೂ ತಮ್ಮ ಎಲ್ಲ ಕೆಲಸ ಬದಿಗೊತ್ತಿ ಅಲ್ಲಿ ಹಾಜರಾಗುತ್ತಾರೆ.
‘ನನ್ನ ಈ ಹವ್ಯಾಸಕ್ಕೆ ತಂದೆ ಕೆ.ಎಚ್.ಬಶೀರ್ ಅಹ್ಮದ್ ಅವರ ಸ್ಫೂರ್ತಿಯೇ ಕಾರಣ. ಅವರಿಗೆ ಪಾರಿವಾಳ ಸಾಕುವ ಷೋಕಿಯಿತ್ತು. ಅದನ್ನೇ ನಾನು ಮುಂದುವರೆಸಿಕೊಂಡು ಸ್ಪರ್ಧೆಗೆ ಹೋಗುತ್ತಿದ್ದೇನೆ. ಪಾರಿವಾಳಗಳಿಗೆ ಕಡಲೆ, ಹುರಳಿ, ರಾಗಿ, ಹೆಸರುಬೇಳೆ, ಬಟಾಣಿ, ಬಾದಾಮಿ ಆಹಾರವಾಗಿ ನೀಡುತ್ತೇನೆ. ರೇಸಿಂಗ್ ಹೋಮರ್ ಪಾರಿವಾಳಗಳನ್ನು ೫೦ ಕಿಮೀ, ೧೦೦ ಕಿಮೀ, ೨೦೦ ಕಿಮೀ ಹೀಗೆ ೧,೦೦೦ ಕಿಮೀ ನಷ್ಟು ದೂರ ಕ್ರಮಿಸಲು ತಯಾರಿ ನೀಡಿ ತರಬೇತುಗೊಳಿಸುತ್ತೇನೆ. ದೂರ ಕ್ರಮಿಸುವುದರ ಜೊತೆಗೆ ಸಮಯವೂ ಅತೀ ಮುಖ್ಯವಾದದ್ದು. ಸ್ಪರ್ಧೆಗಳಲ್ಲಿ ಪಾರಿವಾಳದ ಕಾಲಿಗೆ ರಿಂಗ್ ತೊಡಿಸಿ ಬಣ್ಣದ ಸೀಲ್ ಹಾಕಿ ಹಾರಾಡಲು ಬಿಡಲಾಗುತ್ತದೆ. ನನ್ನ ರೇಸಿಂಗ್ ಹೋಮರ್ ಪಾರಿವಾಳ ಮಹಾರಾಷ್ಟ್ರದ ಸೋಲಾಪುರದಿಂದ ಕೆ.ಜಿ.ಎಫ್ ವರೆಗೂ ೧,೦೦೦ ಕಿಮೀ ದೂರವನ್ನು ಒಂದೂವರೆ ದಿನದಲ್ಲಿ ಕ್ರಮಿಸಿ ಪ್ರಶಸ್ತಿ ತಂದುಕೊಟ್ಟಿತು. ಪಾರಿವಾಳಗಳನ್ನು ೯ ರಿಂದ ೧೦ ಗಂಟೆ ನಿಲ್ಲದಂತೆ ಹಾರಾಡಿಸಿದ್ದೇನೆ. ಮನೆಮಂದಿ ಎಲ್ಲರಿಗೂ ಪಾರಿವಾಳದ ಮೇಲೆ ಆಸಕ್ತಿಯಿದೆ. ಎಲ್ಲರ ಸಹಕಾರವಿದೆ’ ಎಂದು ರಿಜ್ವಾನ್ ಪಾಷ ತಿಳಿಸಿದರು.
– ಡಿ.ಜಿ.ಮಲ್ಲಿಕಾರ್ಜುನ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!