Home Off Beat ಸುಮಧುರವಿಲ್ಲದ ಗಾಯಕರ ಬದುಕು

ಸುಮಧುರವಿಲ್ಲದ ಗಾಯಕರ ಬದುಕು

0

ವಿಶಿಷ್ಟ ಧ್ವನಿಯ ಹಿನ್ನೆಲೆಗಾಯಕರಾಗಿ ಚಲನಚಿತ್ರಲೋಕದಲ್ಲಿ ಅಜರಾಮರರಾದ ಘಂಟಸಾಲ ಅವರನ್ನು ಅನುಕರಿಸುವವರು ವಿರಳ. ಆದರೆ ಪಟ್ಟಣದಲ್ಲಿ ಮಂಗಳವಾರ ಹಾರ್ಮೋನಿಯಂ ನುಡಿಸುತ್ತಾ ಘಂಟಸಾಲ ಅವರ ಮಧುರ ಗೀತೆಗಳನ್ನು ಹಾಡುತ್ತಾ ಸಾಗಿದ್ದ ವ್ಯಕ್ತಿಯೊಬ್ಬರು ಜನರ ಆಕರ್ಷಣೆಯ ಕೇಂದ್ರವಾಗಿದ್ದರು.
ಮಧುರ ಗೀತೆಗಳ ಸೊಲ್ಲನ್ನು ತಿಳಿದಿದ್ದ ಹಿರಿಯರು ಆ ದನಿಗೆ ಕಿವಿಯಾಗಿ ಇದ್ದ ಕೆಲಸವನ್ನು ಬಿಟ್ಟು ಅವರ ಹತ್ತಿರ ನಿಂತರೆ, ಯುವಕರು ಕೂಡ ಸುಸ್ವರಕ್ಕೆ ಮಾರುಹೋಗಿ ಇವರ ಬಳಿ ಜಮಾಯಿಸಿದ್ದರು.
ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ಮಂಡಲ್‌ನ ಕಮ್ಮದೂರಿನ ವೆಂಕಟೇಶ್ವರ ತನ್ನ ಪತ್ನಿ ಲಕ್ಷ್ಮೀದೇವಿಯೊಂದಿಗೆ ತನ್ನ ಹಾಡುವ ಕಲೆಯಿಂದ ಭಿಕ್ಷಾಟನೆ ನಡೆಸುತ್ತಾ ಊರೂರು ಸುತ್ತುತ್ತಾ ಶಿಡ್ಲಘಟ್ಟಕ್ಕೆ ಬಂದಿದ್ದಾರೆ. ಗಂಡನೊಂದಿಗೆ ಹೆಂಡತಿಯೂ ಸುಸ್ವರದಿಂದ ಗತಕಾಲದ ಸುಂದರ ಗೀತೆಗಳನ್ನು ಹಾಡುತ್ತಾ ಘಂಟಸಾಲರನ್ನು ನೆನಪಿಸುತ್ತಿದ್ದಾರೆ. ಪಟ್ಟಣದ ಜನರು ಘಂಟಸಾಲ ಅವರ ಕಂಚು ಕಂಠದ ಎತ್ತರದ ಧ್ವನಿಯ ಮಾಧುರ್ಯದ ಹಾಡುಗಳನ್ನು ಈಗ ಪುನಃ ಸವಿಯುವಂತಾಗಿದೆ.
ಸತ್ಯ ಹರಿಶ್ಚಂದ್ರ ಚಿತ್ರದ ಕ್ಲಿಷ್ಟವಾದ ಹಾಡೆಂದೇ ಪರಿಗಣಿತವಾದ ‘ಹೇ ಚಂದ್ರಚೂಡ ಮದನಾಂತಕ ಶೂಲಪಾಣಿ, ಕಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ, ಹೇ ಪಾರ್ವತೀ ಹೃದಯ ವಲ್ಲಭ ಚಂದ್ರಮೌಳೆ..’, ಗೃಹಲಕ್ಷ್ಮಿಯಾದ ಮನೆಯೊಡತಿಯ ಕುರಿತು ಹಾಡಿರುವ ದೇವತಾ ಚಿತ್ರದ ‘ಇಲ್ಲಾಲೇ ಈ ಜಗತಿಕಿ ಜೀವನ ಜ್ಯೋತಿ’, ಜೀವನದುದ್ದಕ್ಕೂ ಬಂಧಗಳನ್ನು ಹೊತ್ತರೂ ಸತ್ತ ನಂತರ ಹೊರುವವರಿರರು ಎಂಬ ವಾಸ್ತವ ಸತ್ಯ ಹೇಳುವ ‘ಈ ಜೀವನ ತರಂಗಾಲಲೊ, ಆ ದೇವುನಿ ಚದುರಂಗಂಲೊ, ಎವರಿಕಿ ಎವರು ಸ್ವಂತಮು, ಎಂಥವರಿಕೀ ಬಂಧಮು’ ಎಂಬ ಸಾರ್ವಕಾಲಿಕ ಗೀತೆಗಳನ್ನು ಹಾಡಿ ಜನರನ್ನು ರಂಜಿಸಿದರು.
ಕಲೆಯ ದೇವತೆ ಬಡವಳು ಎಂಬ ಆಡು ಮಾತಿನಂತೆ ಉತ್ತಮ ಕಂಠ ಹೊಂದಿದ ವೆಂಕಟೇಶ್ವರ ದಂಪತಿಗಳದ್ದು ಕಷ್ಟದ ಬದುಕು. ಇರುವ ಮೂರು ಮಕ್ಕಳಲ್ಲಿ ಒಬ್ಬಳು ಮಾನಸಿಕ ಅಸ್ವಸ್ಥೆಯಾದರೆ ಮತ್ತೊಬ್ಬ ಕಿವುಡ. ‘ನಮ್ಮ ತಾತನ ಕಾಲದಿಂದಲೂ ಕಲೆಯನ್ನೇ ನಂಬಿದ್ದೇವೆ. ಹಿಂದೆ ಹರಿಕಥೆ ನಡೆಸುತ್ತಿದ್ದೆವು, ನಾಟಕಗಳಲ್ಲಿ ಪಾತ್ರಗಳನ್ನು ಮಾಡುತ್ತಿದ್ದೆವು. ಆದರೆ ಈಗ ಅವುಗಳನ್ನು ಆಸ್ವಾದಿಸುವವರು ಪೋಷಿಸುವವರು ಕಡಿಮೆಯಾಗಿದ್ದಾರೆ. ಜಮೀನು ಇಲ್ಲದ ಕಾರಣ ನಾವು ತಿಳಿದ ವಿದ್ಯೆಯನ್ನೇ ಅವಲಂಬಿಸಿ ಭಿಕ್ಷೆಯ ಮೂಲಕ ಬದುಕುವಂತಾಗಿದೆ. ಹಾರ್ಮೋನಿಯೇ ನಮ್ಮ ಆಸ್ತಿ’ ಎನ್ನುತ್ತಾರೆ ವೆಂಕಟೇಶ್ವರ ದಂಪತಿಗಳು.