‘ಈ ಪಾರಿವಾಳವನ್ನು ಇಂಗ್ಲೀಷ್ ಕ್ಯಾರಿಯರ್ ಎನ್ನುತ್ತಾರೆ. ಇಂಗ್ಲೆಂಡಿನಲ್ಲಿ ಬಹಳ ಹಿಂದೆ ಪರ್ಶಿಯ ಮತ್ತು ಪೌಟರ್ ಎಂಬ ಎರಡು ವಿಧದ ಪಾರಿವಾಳಗಳ ಸಂಕುರದಿಂದ ಹುಟ್ಟಿದ್ದು ಈ ಪ್ರಭೇಧ. ಅದರ ಕೊಕ್ಕೇ ವಿಚಿತ್ರವಾಗಿದೆ. ಪ್ರಸಿದ್ಧ ಜೀವವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ತನ್ನ ಪುಸ್ತಕ ’ದ ವೇರಿಯೇಷನ್ ಆಫ್ ಅನಿಮಲ್ಸ್ ಅಂಡ್ ಪ್ಲಾಂಟ್ಸ್ ಅಂಡರ್ ಡೊಮೆಸ್ಟಿಕೇಷನ್’ ಎಂಬ ಪುಸ್ತಕದಲ್ಲಿ ಸಾಕು ಪ್ರಾಣಿಗಳಲ್ಲಾಗುವ ಜೀವವಿಕಾಸದ ಬಗ್ಗೆ ಬರೆಯುವಾಗ ಇಂಗ್ಲೀಷ್ ಕ್ಯಾರಿಯರ್ ಹುಟ್ಟಿನ ಬಗ್ಗೆಯೂ ವಿವರಿಸಿದ್ದಾರೆ’ ಎಂದು ತಮ್ಮ ಕೈಯಲ್ಲಿ ಬೆಚ್ಚಗೆ ಕುಳಿತಿರುವ ವಿಶೇಷವಾದ ಪಾರಿವಾಳದ ಬಗ್ಗೆ ಅತ್ಯಂತ ಆಸ್ತೆಯಿಂದ ವಿವರಣೆ ಕೊಡಲು ಪ್ರಾರಂಭಿಸಿದರು.
ವೃತ್ತಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ’ಒಡಿಗೆರೆ ಮಾಸ್ತರ್’ ಎಂದೇ ಹೆಸರುವಾಸಿಯಾಗಿರುವ ಕೆ.ನರಸಿಂಹಪ್ಪ ಪ್ರವೃತ್ತಿಯಲ್ಲಿ ನಿಸರ್ಗಪ್ರಿಯರು. ಬಾಗೇಪಲ್ಲಿ ತಾಲ್ಲೂಕಿನ ಪೋಲನಾಯಕನಪಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಇವರ ಬಳಿ ಸುಮಾರು ಎಂಟು ವಿಧಧ 60 ಪಾರಿವಾಳಗಳಿವೆ. ವಿವಿಧ ಜಾತಿಯ ಕುರಿಗಳಿವೆ. ಕೋಳಿಗಳು, ಮೊಲಗಳನ್ನೂ ಸಾಕಿದ್ದಾರೆ. ಜೂಲುಪಾಳ್ಯ ಪಂಚಾಯಿತಿಯ ಒಡಿಗೆರೆ ಗ್ರಾಮದಲ್ಲಿ ಇವರ ಮನೆ ಹಾಗೂ ತೋಟ ಈ ಎಲ್ಲಾ ಜೀವಿಗಳ ಆಶ್ರಯತಾಣವಾಗಿದೆ.
’ಬಡಂಕಾ, ಬ್ಯೂಟಿ ಹೋಮರ್, ರೇಸ್ ಹೋಮರ್, ಲಕ್ವಾ ಪಾರಿವಾಳ ಮುಂತಾದ ಹಲವಾರು ವೈವಿಧ್ಯಮಯ ಪಾರಿವಾಳಗಳಿವೆ. ಒಂದೊಂದು ಪಾರಿವಾಳಕ್ಕೂ ಒಂದೊಂದು ವಿಶೇಷತೆಯಿದೆ. ಆಯಾ ಜಾತಿಯಲ್ಲೂ ವಿವಿಧ ಬಣ್ಣಗಳಿವೆ. ಬಹಳ ಹಿಂದೆ ಇಂಗ್ಲೆಂಡಿನಲ್ಲಿ ಪಾರಿವಾಳ ಸಾಕುವವರ ಪ್ರಯತ್ನದಿಂದ ಅಭಿವೃದ್ಧಿಯಾದ ತಳಿ ಇಂಗ್ಲೀಷ್ ಕ್ಯಾರಿಯರ್. ಇದು ಸಂದೇಶ ರವಾನೆಗೆ ಹೆಚ್ಚಾಗಿ ಆಗ ಬಳಸಲಾಗುತ್ತಿತ್ತು. ಆದರೆ ಈಗ ಕೇವಲ ಅಲಂಕಾರಿಕ ಸಾಕುವುದಕ್ಕೆ ಸೀಮಿತವಾಗಿದೆ. ವೈವಿಧ್ಯಮಯ ತಳಿಗಳ ಸಂತತಿಗಳನ್ನು ಮುಂದುವರೆಸಲು ಅದೇ ಜಾತಿ ಹಾಗೂ ಬಣ್ಣದ ಪಾರಿವಾಳಗಳನ್ನು ಜೋಡಿ ಮಾಡಬೇಕು. ಕೆಲ ಬಾರಿ ನನ್ನಲ್ಲಿ ಗಂಡು ಅಥವಾ ಹೆಣ್ಣಿನ ಕೊರತೆಯಿದ್ದರೆ, ಎಷ್ಟೇ ದೂರವಾದರೂ ಅದನ್ನು ಸಾಕುವವರ ಬಳಿ ಹೋಗಿ ತರುತ್ತೇನೆ. ಸಣ್ಣ ವಯಸ್ಸಿನಿಂದಲೂ ನನಗೆ ಪಕ್ಷಿ ಪ್ರಾಣಿಗಳ ಮೇಲೆ ಒಲವು. ಪ್ರೀತಿಯಿಂದ ನಾವು ಸಾಕದಿದ್ದಲ್ಲಿ ಯಾವುದೇ ಪ್ರಾಣಿ ನಮ್ಮೊಂದಿಗೆ ಬಾಳುವುದಿಲ್ಲ’ ಎಂದು ಒಡಿಗೆರೆ ಮಾಸ್ತರ್ ನರಸಿಂಹಪ್ಪ ಹೇಳುತ್ತಾರೆ.
’ಎಲ್ಲರೂ ನಿವೃತ್ತಿಯಾದ ಮೇಲೆ ಏನಪ್ಪಾ ಮಾಡುವುದು ಅಂದುಕೊಳ್ಳುತ್ತಾರೆ. ಆದರೆ ನಾನಂತೂ ಇನ್ನಷ್ಟು ಪ್ರಾಣಿಗಳನ್ನು ಸಾಕುವ ಯೋಜನೆ ಹಾಕಿಕೊಂಡಿದ್ದೇನೆ. ಈ ಜೀವಿಗಳೊಂದಿಗೆ ಹೆಚ್ಚು ಕಾಲ ಕಳೆಯಬಹುದೆಂದು ಖುಷಿಪಡುತ್ತೇನೆ’