‘ನನ್ನ ಹೆಸರು ತಿಳಿದುಕೊಂಡು ಏನು ಮಾಡುತ್ತೀರಿ ಸಾಬ್? ನನ್ನ ಹೆಸರು ಸಂಪತಿ, ಆದರೆ ಹೆಸರಲ್ಲಿರುವ ಸಂಪತ್ತು ಬದುಕಲ್ಲಿ ಇಲ್ಲವಾಗಿದೆ’ ಎಂದು ಒಂದೇ ಮಾತಿನಲ್ಲಿ ತನ್ನ ಜೀವನದ ವ್ಯಂಗ್ಯವನ್ನು ಮಾರ್ಮಿಕವಾಗಿ ತಿಳಿಸಿಬಿಟ್ಟರು.
ರಾಜಾಸ್ಥಾನದಿಂದ ವಲಸೆ ಹಕ್ಕಿಗಳಂತೆ ಬಂದಿರುವ ಕೆಲ ಜನರು ತಾಲ್ಲೂಕಿನಲ್ಲಿ ಜಾತ್ರೆ, ಸಂತೆ, ಧಾರ್ಮಿಕ ಆಚರಣೆ ಮುಂತಾದವು ನಡೆವಾಗ ರಸ್ತೆ ಬದಿಯಲ್ಲಿ ಬಟ್ಟೆ ಹಾಸಿ ಮಣಿಗಳನ್ನು ಸುರಿದುಕೊಂಡು ಕುಳಿತುಬಿಡುತ್ತಾರೆ. ಇಂಗ್ಲೀಷ್ ಅಕ್ಷರಗಳು, ಚಿಟ್ಟೆ, ಆನೆ, ಹಕ್ಕಿ ಮುಂತಾದ ಆಕಾರಗಳು ಚಾಕಾಕಾರದ ಪ್ಲಾಸ್ಟಿಕ್ ಮಣಿಗಳಂತೆ ಇರುವ ಇವುಗಳನ್ನು ಪ್ಲಾಸ್ಟಿಕ್ ದಾರದಲ್ಲಿ ಚಂದವಾಗಿ ಜೋಡಿಸಿ ಬೇಕಾದ ಹೆಸರನ್ನು ಮಾಡಿಕೊಡುತ್ತಾರೆ. ಹೆಚ್ಚಾಗಿ ಮಕ್ಕಳು ಮುಂಗೈಗೆ ತಮ್ಮ ಹೆಸರಿರುವ ಮಣಿಗಳನ್ನು ಹಾಕಿಸಿಕೊಂಡರೆ, ಕೀ ಚೈನ್‌ಗೂ ಕೆಲವರು ಹಾಕಿಸಿಕೊಳ್ಳುತ್ತಾರೆ.
ಸರಿಯಾಗಿ ಬಟ್ಟೆಗಳೂ ಹಾಕಿಕೊಳ್ಳದ ತಮ್ಮ ಪುಟಾಣಿ ಮಕ್ಕಳನ್ನು ಸಂಭಾಳಿಸುತ್ತಾ, ಇತ್ತ ತಮ್ಮ ಗ್ರಾಹಕರಾಗಿ ಬಂದ ಮಕ್ಕಳಿಗೂ ಅವರಿಗಿಷ್ಟವಾದ ಹೆಸರನ್ನು ಹಾಕಿಕೊಡುತ್ತಾ ಹಣ ಸಂಪಾದಿಸುತ್ತಾರೆ. ಓದಲು ಬರೆಯಲು ಬರದಿದ್ದರೂ ಬರೆದು ಕೊಟ್ಟ ಅಕ್ಷರಗಳನ್ನು ಚಿಹ್ನೆಗಳೆಂದು ಭಾವಿಸಿ ತಮ್ಮ ಮುಂದಿನ ರಾಶಿಯಲ್ಲಿ ಚಕಚಕನೆ ಹೆಕ್ಕಿ ಪುಟ್ಟ ಮರದ ಮಣೆಗೆ ಹೆಣಿಗೆ ಹಾಕಿ ಮುಂಗೈ ಮಣಿಕಟ್ಟಿಗೆ ಸರಿಹೊಂದುವಂತೆ ಬ್ಯಾಂಡನ್ನು ರೂಪಿಸುವ ಅವರ ಕಲೆ ಮೆಚ್ಚುವಂಥದ್ದು. ಭಾಷೆ ಬರದಿದ್ದರೂ ತಾಲ್ಲೂಕಿನಲ್ಲಿ ಎಲ್ಲೆಲ್ಲಿ ಜಾತ್ರೆ, ಸಂತೆ, ಧಾರ್ಮಿಕ ಕಾರ್ಯಗಳು ನಡೆಯುತ್ತವೆಂಬ ಮಾಹಿತಿ ತಿಳಿದುಕೊಳ್ಳುವ ಅವರ ಜಾಣ್ಮೆ ತಲೆದೂಗುವಂಥದ್ದು. ಹೋದೆಡೆ ಪುಟ್ಟ ಡೇರಾ ಹಾಕಿಕೊಂಡು ತಮ್ಮ ಆಹಾರ ತಯಾರಿಸಿಕೊಂಡು ಸಾಂಘಿಕವಾಗಿ ಕಷ್ಟ ಸುಖ ಹಂಚಿಕೊಂಡು ಬದುಕುವ ಅವರ ಗುಣ ಅನುಕರಣೀಯ.
‘ನಾವು ರಾಜಾಸ್ಥಾನದಿಂದ ಹಲವಾರು ಮಂದಿ ಬಂದಿದ್ದೇವೆ. ಬದುಕಲು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಬೇರೆ ಬೇರೆ ಕಡೆ ಹರಡಿಕೊಂಡಿದ್ದೇವೆ. ದೆಹಲಿಯಿಂದ ಪ್ಲಾಸ್ಟಿಕ್ ಮಣಿಗಳನ್ನು ತರಿಸಿಕೊಂಡು ಕೀಚೈನ್, ಮಣಿಕಟ್ಟಿಗೆ ಕಟ್ಟುವ ಬ್ಯಾಂಡ್ ತಯಾರಿಸುತ್ತೇವೆ. ನಮ್ಮ ಅಲೆಮಾರಿತನದ ಬದುಕಿನಿಂದ ಜೀವನ ಮಾಡಲು ಸಾಧ್ಯವಾಗಿದೆ ಅಷ್ಟೆ. ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲು ಕಷ್ಟ. ನಮ್ಮ ಊರಿಗೆ ಹೋದಾಗ ಅಲ್ಲಿ ಶಾಲೆಗೆ ಸೇರಿಸಬೇಕಷ್ಟೆ. ಇಲ್ಲಿನ ಆಹಾರ ನಮ್ಮ ದೇಹಕ್ಕೆ ಸರಿಹೋಗದು. ಹಾಗಾಗಿ ನಮ್ಮ ಆಹಾರವನ್ನು ನಾವೇ ತಯಾರಿಸಿಕೊಳ್ಳುತ್ತೇವೆ’ ಎಂದು ತಮ್ಮ ಅಲೆಮಾರಿ ಬದುಕಿನ ಕಷ್ಟವನ್ನು ಸಂಪತಿ ವಿವರಿಸಿದರು.