‘ಅನ್ನ ಪರಬ್ರಹ್ಮ’ ಎನ್ನುತ್ತಾರೆ. ಕಾರಣ ಎಲ್ಲರೂ ಮಾಡುವುದು ಹೊಟ್ಟೆಗಾಗಿ. ಜೀವ ಚೈತನ್ಯರೂಪಿಯಾಗಿರಲು ಅನ್ನ ಅಥವಾ ಅಕ್ಕಿ ಬೇಕು. ವಿವಿಧ ಕಾಯಕಗಳನ್ನು ಕೈಗೊಂಡು ಜನರು ಅನ್ನದ ಮೂಲವಾದ ಅಕ್ಕಿಯನ್ನು ಸಂಪಾದಿಸಿದರೆ, ಇಲ್ಲೊಬ್ಬರು ಅಕ್ಕಿಯಿಂದಲೇ ಅಕ್ಕಿಯನ್ನು ಸಂಪಾದಿಸಲು ಹೊರಟಿದ್ದಾರೆ.
ಶಿಡ್ಲಘಟ್ಟದಲ್ಲಿ ರಾಜ್ ಎಂಬ ಯುವಕ ಅಕ್ಕಿಯ ಮೇಲೆ ಹೆಸರು ಬರೆದುಕೊಡುತ್ತಾ ತನ್ನ ಅನ್ನವನ್ನು ಅಥವಾ ಅಕ್ಕಿಯನ್ನು ಸಂಪಾದಿಸುತ್ತಿದ್ದಾನೆ. ಸಣ್ಣ ಆಕಾರದ ಅಕ್ಕಿಯ ಮೇಲೆ ಸೂಕ್ಷ್ಮವಾಗಿ ಹೆಸರನ್ನು ಎರಡೂ ಬದಿಯಲ್ಲಿ ಬರೆದುಕೊಡುವ ಈತ ಅದನ್ನು ದ್ರವವಿರುವ ಪುಟ್ಟ ಗಾಜಿನ ಕೊಳವೆಯಲ್ಲಿ ಹಾಕಿ ಅದನ್ನು ಕೀ ಬಂಚ್ ಮಾಡಿಕೊಡುತ್ತಾನೆ. ದ್ರವವಿರುವ ಕಾರಣ ಅಕ್ಕಿಕಾಳು ಕೊಂಚ ದಪ್ಪವಾಗಿ ಕಾಣುವುದರಿಂದ ನಮ್ಮ ಹೆಸರನ್ನು ಸ್ಪಷ್ಟವಾಗಿ ಓದಬಹುದು.
ಆಂಧ್ರದ ಅಲೆಮಾರಿ ಕುಟುಂಬದ ಸದಸ್ಯನಾದ ಈತ ಊರೂರು ಸುತ್ತುತ್ತಾ, ಸಂತೆ, ಜಾತ್ರೆ, ಪರಿಷೆ ಇರುವೆಡೆ, ಜನಸಂದಣಿ ಹೆಚ್ಚಿರುವಲ್ಲಿ ತನ್ನ ಕಲೆಯಿಂದ ಬದುಕನ್ನು ಕಂಡುಕೊಳ್ಳುತ್ತಿದ್ದಾನೆ. ಓದಿರುವುದು ಎರಡನೇ ತರಗತಿಯಾದರೂ ಸ್ಪಷ್ಟವಾಗಿ ಇಂಗ್ಲೀಷ್ ಅಕ್ಷರಗಳನ್ನು ಅಕ್ಕಿಕಾಳಿನ ಮೇಲೆ ಮೂಡಿಸಬಲ್ಲಷ್ಟು ಅಕ್ಷರಜ್ಞಾನವನ್ನು ಹೊಂದಿದ್ದಾನೆ. ಕನ್ನಡ ಅಕ್ಷರವನ್ನೂ ಸಹ ಬರೆಯಬಲ್ಲನಾದರೂ ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ, ಜನಜಂಗುಳಿಯ ಮಧ್ಯೆ ಬರೆಯಲು ಕಷ್ಟವೆನ್ನುತ್ತಾನೆ. ಭೂತಕನ್ನಡಿಯಲ್ಲಿ ನೋಡಬೇಕಾದ ಅಕ್ಷರಗಳನ್ನು, ಬರಿಗಣ್ಣಿನಲ್ಲೇ ನೋಡುತ್ತಾ ಅಕ್ಕಿಯ ಮೇಲೆ ಅಕ್ಷರ ರಚಿಸುವುದು ಈತನ ಹೆಚ್ಚುಗಾರಿಕೆ.
’ನಮ್ಮ ಮೂಲ ಆಂಧ್ರದ ಮಹಬೂಬ್‌ನಗರ ಜಿಲ್ಲೆ. ಅಲೆಮಾರಿಗಳಾದ ನಾವು ಅಲ್ಲಲ್ಲಿ ಟೆಂಟ್ ಹಾಕಿಕೊಂಡು ವಿವಿಧ ಕಸುಬುಗಳನ್ನು ಮಾಡುತ್ತಾ ಅಪರೂಪಕ್ಕೊಮ್ಮೆ ಊರಿನ ಕಡೆ ಹೋಗಿ ಬರುತ್ತೇವೆ. ನಾನು ಹುಟ್ಟಿದ್ದು ಕರ್ನಾಟಕದಲ್ಲಿ. ಕರ್ನಾಟಕದ ಭಾಗಶಃ ಎಲ್ಲಾ ಊರುಗಳನ್ನೂ ಸುತ್ತಿದ್ದೇನೆ. ಕಳೆದ ಒಂದು ವರ್ಷದಿಂದ ಅಕ್ಕಿಕಾಳಿನ ಮೇಲೆ ಹೆಸರು ಬರೆಯುತ್ತಾ ಜೀವನೋಪಾಯ ಮಾಡುತ್ತಿದ್ದೇನೆ. ನಮ್ಮ ಕುಟುಂಬದವರು ಸಧ್ಯ ಚಿಂತಾಮಣಿಯ ಬಳಿ ಟೆಂಟ್ ಹಾಕಿದ್ದಾರೆ’ ಎಂದು ಅಕ್ಕಿಯ ಮೇಲೆ ಅಕ್ಕರೆಯ ಹೆಸರು ಮೂಡಿಸುವ ರಾಜ್ ಹೇಳುತ್ತಾರೆ.