Home Off Beat ಪ್ರಸಿದ್ಧವಾದ ಮೇಲೂರಿನ ಮಿಕ್ಸ್‌ಚರ್

ಪ್ರಸಿದ್ಧವಾದ ಮೇಲೂರಿನ ಮಿಕ್ಸ್‌ಚರ್

0

ಅರವತ್ನಾಲ್ಕು ವಿದ್ಯೆಗಳಲ್ಲಿ ಅಡುಗೆಗೂ ಮಹತ್ವವಿದೆ. ಕೆಲವರ ಕೈರುಚಿ ದೇಶ, ಭಾಷೆಯ ಗಡಿ ಮೀರಿ ಪ್ರಸಿದ್ಧಿಯನ್ನು ಪಡೆದಿರುತ್ತದೆ. ಸಣ್ಣ ಗ್ರಾಮದಲ್ಲಿದ್ದರೂ ಕಲಿತ ವಿದ್ಯೆಯಿಂದಲೇ, ತಮ್ಮ ತಯಾರಿಕಾ ಸಾಧನಗಳಿಂದಲೇ ಕೆಲವರು ದೇಶದ ರಾಯಭಾರಿಗಳಾಗಿರುತ್ತಾರೆ. ತಾಲ್ಲೂಕಿನ ಮೇಲೂರು ಗ್ರಾಮದ ಕಾಮಧೇನು ಸ್ವೀಟ್ಸ್ ಮಾಲೀಕ ಶ್ರೀಧರ್ ಇಂಥಹವರಲ್ಲೊಬ್ಬರು.
ಮೇಲೂರಿನ ಮಿಕ್ಸ್‌ಚರ್ ಎಂದೇ ಪ್ರಸಿದ್ಧವಾದುದು ಇವರು ತಯಾರಿಸುವ ಚೌಚೌ. ಮೇಲೂರಿನ ಗ್ರಾಮದಿಂದ ಇವರ ತಯಾರಿಕೆಯ ಖಾರದ ತಿನಿಸು ತಾಲ್ಲೂಕು ಜಿಲ್ಲೆಯನ್ನೂ ಮೀರಿ ಅಮೆರಿಕೆಯನ್ನೂ ತಲುಪಿದೆ. ಜಿಲ್ಲೆಯ ಇವರ ಗ್ರಾಹಕರು ಅಮೆರಿಕೆಯಲ್ಲಿನ ತಮ್ಮ ಸಂಬಂಧಿಕರು ಬಂದು ವಾಪಸ್ ಹೋಗುವಾಗ ಮೇಲೂರಿನ ಮಿಕ್ಸ್‌ಚರ್ ಕೊಂಡು ಹೋಗುತ್ತಾರೆ.
ಸುಮಾರು ೧೮ ವರ್ಷಗಳಿಂದ ಖಾರ ಸಿಹಿ ತಿಂಡಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಇವರು ಜಿಲೇಬಿ, ಜಾಂಗೀರು, ಲಾಡು, ಸೋನ್‌ಪಪ್ಪಡಿ ಮುಂತಾದ ತಿಂಡಿಗಳನ್ನೂ ತಯಾರಿಸುತ್ತಾರೆ. ಮೇಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಹಬ್ಬ ಮುಂತಾದ ಯಾವುದೇ ಸಂಭ್ರಮಾಚರಣೆಗಳಿಗೆ ಇವರ ಸಿಹಿ ಇರಲೇಬೇಕು.
’ಈ ವಿದ್ಯೆಯನ್ನು ಬಂಗಾರಪೇಟೆಯಲ್ಲಿನ ನನ್ನ ಚಿಕ್ಕಪ್ಪನವರ ಬಳಿ ಕಲಿತೆ. ಗುಣಮಟ್ಟವನ್ನು ಕಮ್ಮಿಯಾಗದಂತೆ ಸದಾ ನೋಡಿಕೊಳ್ಳುತ್ತೇನೆ. ಉತ್ತಮವಾದ ಎಣ್ಣೆ ಬಳಸುವೆ. ಒಳ್ಳೆಯ ನಾಟಿ ಕಡಲೆ ಬೇಳೆಯನ್ನು ನೋಡಿ ಕೊಂಡುತಂದು ಆರಿಸಿ ಒಣಗಿಸಿ ಪುಡಿ ಮಾಡಿಸಿ ಬಳಸುತ್ತೇನೆ. ಈ ಕೆಲಸಕ್ಕೆ ನಾನು ಕೆಲಸದವರನ್ನು ಇಟ್ಟುಕೊಂಡಿಲ್ಲ. ತಿಂಡಿ ತಯಾರಿಕೆ ಹಾಗೂ ಮಾರಾಟಕ್ಕೆ ನನ್ನ ಪತ್ನಿ ಹಾಗೂ ತಮ್ಮ ಸಹಕರಿಸುತ್ತಾರೆ. ಕೆಲಸದವರನ್ನು ನೇಮಿಸಿಕೊಂಡರೆ ಗುಣಮಟ್ಟ ಕೆಡಬಹುದೆಂಬ ಭಯವಿದೆ. ಕೆಲ ಗ್ರಾಹಕರು ಅಮೆರಿಕೆಗೆ ನಮ್ಮ ಮಿಕ್ಸ್‌ಚರ್ ತೆಗೆದುಕೊಂಡು ಹೋಗುತ್ತಾರೆ. ಅವರಿಗಾಗಿ ಅವರಿಗೆ ಬೇಕಾದ ರೀತಿಯಲ್ಲಿ ಖಾರ ಮಾಡಿಕೊಡುತ್ತೇನೆ. ವಿಮಾನದಲ್ಲಿ ಹೆಚ್ಚು ತೆಗೆದುಕೊಂಡು ಹೋಗಲಾಗದೆಂದು ಒಮ್ಮೆಗೆ ನಾಲ್ಕರಿಂದ ಐದು ಕೆಜಿ ತೆಗೆದುಕೊಂಡು ಹೋಗುತ್ತಾರೆ. ತಾಲ್ಲೂಕಿನ ಹಲವಾರು ಮಂದಿ ಗ್ರಾಹಕರು ತಮ್ಮ ಸಂಬಂಧಿಕರ ಮನೆಗಳಿಗೆ ಮತ್ತು ಸ್ನೇಹಿತರಿಗೆ ನೀಡಲು ನನ್ನ ಬಳಿ ಸಿಹಿ ಹಾಗೂ ಖಾರ ಖರೀದಿಸುತ್ತಾರೆ. ಜನರು ಮೆಚ್ಚುವುದು ಗುಣಮಟ್ಟವನ್ನು ಎಂಬ ಎಚ್ಚರಿಕೆ ಸದಾ ನನ್ನದು’ ಎನ್ನುತ್ತಾರೆ ಕಾಮಧೇನು ಸ್ವೀಟ್ಸ್‌ನ ಎನ್.ಶ್ರೀಧರ.