ರೇಷ್ಮೆ ಮತ್ತು ಹೈನುಗಾರಿಕೆಯನ್ನು ನಂಬಿ ತಾಲ್ಲೂಕಿನ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಆದರೆ ನೀರಿನ ಅಭಾವದಿಂದ ಹಲವಾರು ಗ್ರಾಮಗಳಲ್ಲಿ ರೇಷ್ಮೆ ಕೃಷಿ ಕುಂಠಿತಗೊಂಡಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮದ ಮಹಿಳೆಯರು ಸ್ವಾವಲಂಭಿಗಳಾಗಲು ನೆರವಾಗುವಂತೆ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯತಿಯ ಸೊಣ್ಣೇನಹಳ್ಳಿಯಲ್ಲಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲಾಗುತ್ತಿದೆ.
ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಯ ವಯಸ್ಕರ ಶಿಕ್ಷಣ ಇಲಾಖೆ, ಶ್ರೀನಿಧಿ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯೊಂದಿಗೆ 75 ದಿನಗಳ ಹೊಲಿಗೆ ತರಬೇತಿ ಕಾರ್ಯಾಗಾರ ನಡೆಸುತ್ತಿದೆ. ಗ್ರಾಮದ 20 ಮಂದಿ ಮಹಿಳೆಯರು ತರಬೇತಿಯಲ್ಲಿ ಪಾಲ್ಗೊಂಡಿದ್ದು, ಮನೆಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡ ನಂತರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ತರಬೇತಿ ಪಡೆಯುತ್ತಿದ್ದಾರೆ. ಕೆಲವರು ತಮ್ಮ ಪುಟ್ಟ ಮಕ್ಕಳನ್ನೂ ಕರೆತಂದು ಜೊತೆಯಲ್ಲಿಟ್ಟುಕೊಂಡೇ ಉತ್ಸಾಹದಿಂದ ಕಲಿಯುತ್ತಿದ್ದಾರೆ.
‘ನಮಗೆ ನೀರು ಕಡಿಮೆಯಾದ ನಂತರ ರೇಷ್ಮೆ ಹುಳು ಸಾಕಾಣಿಕೆ ಕುಂಠಿತಗೊಂಡಿತು. ಕೇವಲ ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುವುದು ಕಷ್ಟಕರ. ಇಂಥ ಸಂದರ್ಭದಲ್ಲಿ ನಾವಿರುವ ಗ್ರಾಮದಲ್ಲೇ ಹೊಲಿಗೆ ತರಬೇತಿಯನ್ನು ಪ್ರಾರಂಭ ಮಾಡಿದರು. ಹೊಸ ವಿದ್ಯೆಯನ್ನು ನಾವಿರುವ ಸ್ಥಳದಲ್ಲೇ ಕಲಿಸುವುದರಿಂದ ಮನೆ ಕೆಲಸದೊಂದಿಗೆ ಕಲಿಯತೊಡಗಿದೆವು. ಸುಮಾರು 65 ದಿನಗಳ ನಂತರ ನಮ್ಮಲ್ಲಿ ಒಂದು ರೀತಿಯ ಆತ್ಮಸ್ಥೈರ್ಯ ಬಂದಿದೆ. ಇದರಿಂದ ನಮ್ಮಲ್ಲಿ ಹಲವಾರು ಮಂದಿ ಜೀವನ ನಡೆಸಲು ಸಾಧ್ಯವಿದೆ’ ಎಂದು ತರಬೇತಿಯಲ್ಲಿ ಪಾಲ್ಗೊಂಡ ಮಹಿಳೆ ಮಂಜುಳಮ್ಮ ತಿಳಿಸಿದರು.
‘ಮಹಿಳೆಯರು ಸ್ವಾವಲಂಭಿಗಳಾಗಬೇಕು ಎಂದು ಕೇವಲ ರಾಜಕೀಯ ಭಾಷಣವಾಕ್ಯವಲ್ಲದಂತೆ ನಮ್ಮ ಗ್ರಾಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯವರು ಹೊಲಿಗೆ ತರಬೇತಿ ಕಾರ್ಯಾಗಾರ ನಡೆಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಸ್ಥಾಪಿಸಿರುವ ಗಾರ್ಮೆಂಟ್ ಕೆಲಸಕ್ಕೂ ಇದರಿಂದ ಹಲವಾರು ಮಹಿಳೆಯರು ಹೋಗಿ ದುಡಿಯಬಹುದು. ನಮ್ಮ ಗ್ರಾಮದಲ್ಲಿ ಈ ತರಬೇತಿ ನಡೆಸಲು ಆಂಜಿನಪ್ಪ ಅವರು ಉಚಿತವಾಗಿ ಸ್ಥಳವನ್ನು ಕೊಟ್ಟಿದ್ದಾರೆ. ಮಹಿಳೆಯರಿಗೆ ತರಬೇತಿಯ ನಂತರ ಹೊಲಿಗೆ ಯಂತ್ರಗಳನ್ನು ಶೀಬಿರಾರ್ಥಿಗಳಿಗೆ ಉಚಿತವಾಗಿ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ತಿಳಿಸಿದರು.
‘ಮಹಿಳೆಯರು ಸೂಕ್ಷ್ಮಗ್ರಾಹಿಗಳು. ಹೊಸ ಕೆಲಸ ಅಥವಾ ವಿದ್ಯೆಯನ್ನು ಉತ್ಸಾಹದಿಂದ ಗ್ರಹಿಸಿ ಕಲಿಯುತ್ತಾರೆ. ಈ ಹೊಲಿಗೆ ತರಬೇತಿ ಕಾರ್ಯಾಗಾರಕ್ಕೆ ವಯಸ್ಸಾಗಲೀ ವಿದ್ಯಾರ್ಹತೆಯಾಗಲೀ ಅವಶ್ಯವಿಲ್ಲ. ಕಲಿಯುವ ಮನಸ್ಥಿತಿಯಿದ್ದರೆ ಸಾಕು. ಈ ವೃತ್ತಿ ಕೌಶಲ್ಯದಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಲ್ಲರು’ ಎನ್ನುತ್ತಾರೆ ತರಬೇತಿ ನೀಡುತ್ತಿರುವ ಶ್ರೀನಿಧಿ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯ ಸರಸ.
- Advertisement -
- Advertisement -
- Advertisement -
- Advertisement -