ಕೊಟ್ಪಾ ಕಾಯಿದೆ ಜಾರಿಯಾದ ನಂತರ ತಾಲ್ಲೂಕಿನಾದ್ಯಂತ ಧೂಮಪಾನ, ಗುಟ್ಕಾ ಮತ್ತು ತಂಬಾಕು ಪದಾರ್ಥಗಳ ನಿಷೇಧ ವನ್ನು ಸಮರ್ಪಕವಾಗಿ ಜಾರಿಗೆ ತರುವ ಉದ್ದೇಶದಿಂದ ಜನಜಾಗೃತಿ ಸಭೆಗಳ ಮೂಲಕ ಅರಿವು ಮೂಡಿಸ ಲಾಗುತ್ತಿದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ಸಿಗರೇಟ್ ಅಥವಾ ತಂಬಾಕು ಪದಾರ್ಥಗಳ ನಿಷೇಧದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಸ್ ನಿಲ್ದಾಣ, ರಸ್ತೆಗಳು, ಹೋಟೆಲ್, ಉದ್ಯಾನವನ, ಶಾಲಾ ಕಾಲೇಜುಗಳು ಮತ್ತಿತರ ಪ್ರದೇಶಗಳಲ್ಲಿ ಬೀಡಿ, ಸಿಗ ರೇಟ್, ತಂಬಾಕು ಪದಾರ್ಥಗಳ ಬಳಕೆ ಕಡಿಮೆಯಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಾಯಿದೆ ಇನ್ನೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ತಂಬಾಕು ಉತ್ಪನ್ನಗಳ ಮಾರಾಟಗಾರರು ಗೋದಾಮುಗಳಲ್ಲಿ ಬಾಕಿ ಇರುವ ಉತ್ಪನ್ನಗಳನ್ನು ಮಾರಾಟ ಮಾಡಲು ಗ್ರಾಮೀಣ ಪ್ರದೇಶದ ಅಂಗಡಿಗಳನ್ನು ಆಶ್ರಯಿಸಿದ್ದಾರೆ. ಹಿಂದೆ ಗುಟ್ಕಾ, ತಂಬಾಕು ಉತ್ಪನ್ನಗಳು, ಸಿಗರೇಟುಗಳನ್ನು ಪೂರೈಕೆ ಮಾಡುತ್ತಿದ್ದ ಬ್ಯಾಗ್ಗಳ ಒಳಮೈ ಯನ್ನು ಹೊರಗೆ ಮಾಡಿಕೊಂಡು ಉತ್ಪನ್ನಗಳ ಹೆಸರು ಹೊರಗೆ ಕಾಣಿಸದಂತೆ ಅವುಗಳಲ್ಲೇ ಉತ್ಪನ್ನಗಳನ್ನು ಸಾಗಿಸುತ್ತಿದ್ದಾರೆ. ಮಾರಾಟಗಾರರು ಈ ಉತ್ಪನ್ನಗಳನ್ನು ಮಾರಬಾರದು. ಸಿಕ್ಕಿಬಿದ್ದಲ್ಲಿ ದಂಡ ತೆರಬೇಕಾಗುತ್ತದೆ ಎಂಬ ಎಚ್ಚರವಿರಲಿ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಡಾ. ಚಂದ್ರಶೇಖರ್ ಮಾತನಾಡಿ, ತಂಬಾಕು ಉತ್ಪನ್ನಗಳ ಸೇವನೆ ದುಶ್ಚಟವಾಗಿದೆ. ಆರೋಗ್ಯಕ್ಕೂ ಹಾನಿಕಾರಕ. ಸಾರ್ವಜನಿಕ ಸ್ಥಳಗಳಲ್ಲಿ ಸೇವನೆ ಮಾಡುವುದರಿಂದ ಅಕ್ಕಪಕ್ಕದವರ ಆರೋಗ್ಯಕ್ಕೂ ಹಾನಿಯಾಗುತ್ತದೆ. ದೇಶದಲ್ಲಿ 10 ಲಕ್ಷ, ರಾಜ್ಯದಲ್ಲಿ 60 ಸಾವಿರ ಜನ ತಂಬಾಕು ಉತ್ಪನ್ನಗಳ ಚಟದಿಂದಲೇ ವರ್ಷಕ್ಕೆ ಮರಣ ಹೊಂದುತ್ತಾರೆ. ಮಕ್ಕಳು, ಗರ್ಭಿಣಿಯರ ಮೇಲೆ ತಂಬಾಕು ಉತ್ಪನ್ನಗಳ ದುಷ್ಪರಿಣಾಮ ಹೆಚ್ಚು. ಸಾರ್ವಜನಿಕರ ಹಿತರಕ್ಷಣೆಗಾಗಿಯೇ ಕೊಟ್ಪಾ ಕಾಯಿದೆ ಜಾರಿಗೆ ಬಂದಿದೆ ಎಂದು ನುಡಿದರು.
ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಸಬ್ಇನ್ಸ್ಪೆಕ್ಟರುಗಳಾದ ಪುರುಷೋತ್ತಮ್, ರಾಘವೇಂದ್ರ, ಸಿ.ಡಿ.ಪಿ.ಒ ಅಧಿಕಾರಿ ಲಕ್ಷ್ಮೀದೇವಮ್ಮ, ಕೃಷಿ ಇಲಾಖೆಯ ಅಧಿಕಾರಿ ದೇವೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -