ರಜಾ ಸಮಯದಲ್ಲಿ ಬೇಸಿಗೆ ಶಿಬಿರಗಳನ್ನು ಸರ್ಕಾರಿ ಶಾಲೆಗಳಲ್ಲಿ ಆಯೋಜಿಸುವುದು ಅಭಿನಂದನಾರ್ಹ. ಈ ಶಿಬಿರಗಳಿಂದ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ವ್ಯಕ್ತಿತ್ವ ವಿಕಾಸವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ರಘುನಾಥರೆಡ್ಡಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಇಂಡಿಯನ್ ಫೌಂಡೇಷನ್ ಫಾರ್ ಆರ್ಟ್ಸ್ ಸಂಸ್ಥೆಯ ಕಲಿಕಲಿಸು ಯೋಜನೆಯ ಅನ್ವಯ ಹಾಗೂ ಗ್ರಾಮದ ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಹಕಾರದಿಂದ ಹಮ್ಮಿಕೊಂಡ ನಾಲ್ಕನೇ ವರ್ಷದ ಸಹಜ ಬೇಸಿಗೆ ಶಿಬಿರವನ್ನು ಚಿತ್ರ ಬಿಡಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಜಾ ಸಮಯದಲ್ಲಿ ಏನೂ ಸಾಧನೆ ಮಾಡಲಾಗದೇ, ಸಮಯ ಕಳೆಯದಂತೆ ಇಂತಹ ಜೀವನ ಶಿಕ್ಷಣ ಶಿಬಿರ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಈ ಶಿಬಿರ ನೆರವಾಗಲಿ ಎಂದರು.
ಮಕ್ಕಳಿಗೆ ಶಿಬಿರಕ್ಕೆ ಅಗತ್ಯವಾದ ಲೇಖನ ಸಾಮಾಗ್ರಿಗಳನ್ನು ಈ ಸಂದರ್ಭದಲ್ಲಿ ಉಚಿತವಾಗಿ ವಿತರಿಸಲಾಯಿತು. ಎನ್ಎಮ್ಎಮ್ಎಸ್ ಪರೀಕ್ಷೆಯಲ್ಲಿ ಶಾಲೆಯಿಂದ ಆಯ್ಕೆಯಾದ ಆರ್. ವರ್ಷಾ ಎಂಬ ವಿದ್ಯಾರ್ಥಿನಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಶಾಲೆಯ ಮಕ್ಕಳು ಬರೆದ ಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಈ ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆ, ಕ್ರಾಫ್ಟ್, ಪೇಪರ್ಕಟಿಂಗ್, ಹಾಡು, ಕೊಲಾಜ್. ಕ್ಲೇ ಮಾಡಲಿಂಗ್, ಲೇಖನಗಳ ಬರವಣಿಗೆ, ಕಥೆ ಹಾಗೂ ಕವನ ಇತ್ಯಾದಿಗಳ ಕುರಿತು ಒಂಭತ್ತು ದಿನಗಳ ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳ ಮೂಲಕ ತರಬೇತಿ ನೀಡಲಾಗುವುದು ಎಂದು ಸಹಶಿಕ್ಷಕ ಎಸ್. ಕಲಾಧರ ತಿಳಿಸಿದರು.
ಮುಖ್ಯಶಿಕ್ಷಕ ಎಚ್. ಮುನಿಯಪ್ಪ, ಸ್ನೇಹ ಯುವಕರ ಸಂಘದ ವಾಸುದೇವ್, ನರಸಿಂಹಯ್ಯ, ಶಿಕ್ಷಕ ಜೆ. ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -