ಶಿಡ್ಲಘಟ್ಟ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಹಿಪ್ಪುನೇರಳೆ ಸೊಪ್ಪಿಗೆ ಈಚೆಗೆ ಧಾಳಿಯಿಡುತ್ತಿರುವ ಹೊಸ ಬಕಾಸುರ ಕೀಟಗಳ ಬಗ್ಗೆ ಪರಿಶೀಲಿಸಲು ವಿಜ್ಞಾನಿಗಳು ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳು ತಾಲ್ಲೂಕಿನ ಬೂದಾಳ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದರು. ತಾಲ್ಲೂಕಿನ ಬೂದಾಳದ ಕೆರೆಯಂಚಿನ ಹಿಪ್ಪುನೇರಳೆ ಸೊಪ್ಪಿನ ತೋಟಗಳಿಗೆ ಕಳೆದ ಮೂರು ರಾತ್ರಿಗಳಿಂದ ಹೊಸ ರೀತಿಯ ಜೀರುಂಡೆಗಳು ಧಾಳಿಯಿಡುತ್ತಿದ್ದು, ಜೇನು ನೊಣಗಳಂತೆ ನೂರಾರು ಜೀರುಂಡೆಗಳು ರಾತ್ರಿಯಾಗುತ್ತಿದ್ದಂತೆಯೇ ಆಗಮಿಸಿ ಹಿಪ್ಪುನೇರಳೆ ಸೊಪ್ಪಿನ ಸುಳಿಗಳಿಗೆ ಜೋತು ಬೀಳುತ್ತಿವೆ. ಅವುಗಳು ಸೊಪ್ಪನ್ನು ತಿನ್ನುವ ವೇಗವಂತೂ ಗಾಬರಿಗೊಳ್ಳುವಂತಿದೆ ಎಂದು ರೈತರು ಅಧಿಕಾರಿಗಳಿಗೆ ತಿಳಿಸಿದ್ದ ಹಿನ್ನೆಲೆಯಲ್ಲಿ ವಿಜ್ಞಾನಿಗಳೊಂದಿಗೆ ಆಗಮಿಸಿದ್ದ ಅಧಿಕಾರಿಗಳು ರೈತರು ಹಿಡಿದಿಟ್ಟಿದ್ದ ಜೀರುಂಡೆಗಳನ್ನು ಪರಿಶೀಲಿಸಿದರು.
ತಾಲ್ಲೂಕಿನ ಬೂದಾಳದ ರೈತರಾದ ರಾಮಾಂಜಿನಪ್ಪ, ಸದಾಶಿವರೆಡ್ಡಿ, ಮುನಿಶಾಮಿರೆಡ್ಡಿ, ಶಂಕರ್, ವೆಂಕಟಪ್ಪ ತಮ್ಮ ಹಿಪ್ಪುನೇರಳೆ ತೋಟಕ್ಕೆ ಬಂದು ಸೊಪ್ಪು ತಿನ್ನುವ ಕೀಟಗಳ ಕುರಿತಂತೆ ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
‘ಈ ಜೀರುಂಡೆಗಳು ನೂರಾರು ಸಂಖ್ಯೆಯಲ್ಲಿ ರಾತ್ರಿ ವೇಳೆ ಹಿಪ್ಪುನೇರಳೆ ತೋಟಗಳಿಗೆ ಬಂದು ಎಲೆಗಳಿಗೆ ಕುಚ್ಚುಕುಚ್ಚಾಗಿ ಜೋತು ಬಿದ್ದು ಒಂದು ಕಡೆಯಿಂದಾ ತಿನ್ನುತ್ತಾ ಬರುತ್ತಿವೆ. ಇವು ರಾತ್ರಿ ವೇಳೆಯಲ್ಲಿ ಮಾತ್ರ ಬರುತ್ತಿವೆ. ಎಲ್ಲಿಂದ ಬರುತ್ತಿವೆಯೋ, ಎಲ್ಲಿಗೆ ಹೋಗುತ್ತವೆಯೋ ತಿಳಿಯದು. ಇವುಗಳ ಸಂಖ್ಯೆಯನ್ನು ನೋಡಿದರೆ ರೈತರ ಪಾಲಿನ ಬಕಾಸುರರಂತೆ ಕಾಣುತ್ತಿವೆ’ ಎಂದು ರೈತರು ತಿಳಿಸಿದರು.
‘ಈ ಕೀಟಗಳನ್ನು ಮೇ ಜೂನ್ ಬೀಟಲ್ ಎನ್ನುತ್ತಾರೆ. ಇದರ ವೈಜ್ಞಾನಿಕ ಹೆಸರು ಹೊಲೊಟ್ರೈಕಿಯಾ ಸೆರ್ರಾಟ ಎಂದಿದೆ. ಇದರ ಜೀವನ ಚಕ್ರ ಒಂದು ವರ್ಷ ಕಾಲವಿದ್ದು ಎಲ್ಲಾ ನೆಲದೊಳಗೇ ನಡೆಯುತ್ತದೆ. ಮೊದಲ ಮಳೆ ಬಿದ್ದೊಡನೆಯೇ ನೆಲದಿಂದ ಹೊರ ಬರುವ ಈ ಕೀಟಗಳು ಸಾಮಾನ್ಯವಾಗಿ ಗುಲಾಬಿ, ಜಾಲಿ, ಬೇವು, ಕಬ್ಬು ಮುಂತಾದವುಗಳ ಎಲೆಗಳನ್ನು ತಿನ್ನುತ್ತವೆ. ಅಚ್ಚರಿಯಾಗುವಂತೆ ಹಿಪ್ಪುನೇರಳೆ ಸೊಪ್ಪಿಗೂ ಆಕರ್ಷಿತವಾಗಿವೆ. ಒಂದು ತಿಂಗಳು ಮಾತ್ರ ಇವುಗಳು ನೆಲದಿಂದ ಹೊರವಿರುತ್ತವೆಯಷ್ಟೆ. ಒಂದು ಬಾರಿ ಸುಮಾರು ಎಂಟು ನೂರು ಮೊಟ್ಟೆಗಳನ್ನಿಡುವ ಇವುಗಳ ಸಂಖ್ಯೆಯೂ ದೊಡ್ಡದೇ. ಕಟಾವಿಗೆ ಬಂದಿರುವ ಸೊಪ್ಪಿಗೆ ಔಷಧಿಯನ್ನು ಸಿಂಪಡಿಸಲಾಗದು. ಆದ್ದರಿಂದ ತೋಟದಲ್ಲಿ ಅಲ್ಲಲ್ಲಿ ಬೇವಿನ ಸೊಪ್ಪನ್ನು ಕಟ್ಟಿ ಹುಳುಗಳನ್ನು ಆಕರ್ಷಿಸಿ ಹಿಡಿದು ಸೀಮೆಎಣ್ಣೆ ಮಿಶ್ರಿತ ನೀರಲ್ಲಿ ಹಾಕಿ ಸಾಯಿಸಬೇಕು. ಅಲ್ಲಲ್ಲಿ ಪ್ರಕರವಾದ ಬೆಳಕು ಹಾಯಿಸಿ ಈ ಹುಳುಗಳನ್ನು ಆಕರ್ಷಿಸಿ ಸಾಯಿಸಬಹುದು ಅಥವಾ ಸುಡಬಹುದು. ಈ ರೀತಿ ಸಾಯಿಸುವುದರಿಂದ ಇವುಗಳ ಸಂತತಿಗೆ ಕಡಿವಾಣ ಬಿದ್ದು ಮುಂದಿನ ಬಾರಿ ಇವು ಬರದಂತಾಗುತ್ತದೆ’ ಎಂದು ವಿಜ್ಞಾನಿ ಡಾ.ಎಚ್.ಎಸ್.ಫಣಿರಾಜ್ ತಿಳಿಸಿದರು.
ರೇಷ್ಮೆ ಇಲಾಖೆ ಉಪನಿರ್ದೇಶಕ ನಾಗಭೂಷಣ್, ಸಹಾಯಕ ನಿರ್ದೇಶಕ ಚಂದ್ರಪ್ಪ, ಅಧಿಕಾರಿಗಳಾದ ಕೃಷ್ಣಪ್ಪ, ತಿಮ್ಮಪ್ಪ, ರೈತರಾದ ಜೆ.ವಿ.ವೆಂಕಟಸ್ವಾಮಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು
- Advertisement -
- Advertisement -
- Advertisement -
- Advertisement -