ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಹೊಂದಲು ಜನಪ್ರತಿನಿಧಿಗಳು ಕಾಳಜಿ ತೋರುತ್ತಿಲ್ಲ. ಅವರಿಗೆ ಮೀಸಲಿಟ್ಟ ಅನುದಾನಗಳ ದುರ್ಬಳಕೆ, ಕುಂದುಕೊರತೆಗಳ ಸಭೆ ಕರೆಯದೆ ಶೋಷಿತರನ್ನು ನಿರ್ಲಕ್ಷಿಸಲಾಗಿದೆ ಎಂದು ಆರಂಭಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಸೋಮಶೇಖರ್ ತಿಳಿಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆ ಹಾಗೂ ತಾಲ್ಲೂಕು ಕಚೇರಿಯ ಮುಂದೆ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕು ಸಾಕಷ್ಟು ಹಿಂದುಳಿದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ತಾಲ್ಲೂಕಿನಲ್ಲಿ ಶೇ ೩೩ ರಷ್ಟು ಇದ್ದಾರೆ. ಅವರಲ್ಲಿ ಶೇ ೮೦ ರಷ್ಟು ಮಂದಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಬಹುತೇಕ ಮಂದಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ನೀರಿನ ಸೌಕರ್ಯವಿಲ್ಲದೇ, ಮಳೆ ಬೆಳೆ ಸಕಾಲದಲ್ಲಿ ಆಗದೇ ಬಹು ಮಂದಿ ವಲಸೆ ಹೋಗಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಓಟು ಪಡೆದು ಗೆಲ್ಲುವ ಜನಪ್ರತಿನಿಧಿಗಳಿಗೆ ಹಿಂದುಳಿದ ತಾಲ್ಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಮತ್ತು ಹಿಂದುಳಿದವರನ್ನು ಮೇಲೆತ್ತುವ ಇಚ್ಚಾಶಕ್ತಿಯಿಲ್ಲ. ಮೀಸಲಿಟ್ಟ ಅನುದಾನವು ಸಮರ್ಪಕವಾಗಿ ಬಳಕೆಯಾಗಿದ್ದಿದ್ದರೆ ತಾಲ್ಲೂಕು ಅಭಿವೃದ್ಧಿಯಾಗಿರುತ್ತಿತ್ತು. ಕಾಲಕಾಲಕ್ಕೆ ಕುಂದುಕೊರತೆಗಳ ಸಭೆಯನ್ನೂ ಸಹ ನಡೆಸದೆ ಶೋಷಿತರ ಬದುಕು ಕೇಳುವವರಿಲ್ಲದಂತಾಗಿದೆ ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿ, ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಿದ್ದು, ನಮ್ಮ ತಾಲ್ಲೂಕಿನಲ್ಲಿ ಮಾತ್ರ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸ್ಥಳವೇ ಮಂಜೂರಾಗಿಲ್ಲ. ಸ್ಥಳ ಮಂಜೂರು ಮಾಡಬೇಕಾದ ತಾಲ್ಲೂಕು ದಂಡಾಧಿಕಾರಿಗಳು ದಲಿತ ವಿರೋಧ ನೀತಿಯನ್ನು ಅನುಸರಿಸುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್ ಭವನಕ್ಕೆ ಸ್ಥಳ ಮಂಜೂರು ಮಾಡಿ ನಿರ್ಮಾಣ ಮಾಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸ್ಥಾಪಿಸಬೇಕು. ಹಳ್ಳಿಗಳಲ್ಲಿ ಅದರಲ್ಲೂ ದಲಿತ ಕಾಲೋನಿಗಳಲ್ಲಿ ಮದ್ಯ ನಿಷೇಧಿಸಬೇಕು. ತಾಲ್ಲೂಕಿನಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸ್ಮಶಾನ ಜಾಗಗಳನ್ನು ಮಂಜೂರು ಮಾಡಿಬೇಕು. ಸಮಯಕ್ಕೆ ಸರಿಯಾಗಿ ದಲಿತರ ಕುಂದುಕೊರತೆ ಸಭೆಗಳನ್ನು ನಡೆಸಬೇಕು. ಪಿ ನಂಬರ್ ಜಮೀನುಗಳನ್ನು ಪೋಡಿ ಮಾಡಿ ಕೊಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಶೇ ೨೫.೫ ಅನುದಾನದ ಹಣ ದುರುಪಯೋಗ ಆಗಿರುವ ಬಗ್ಗೆ ತನಿಖೆ ನಡೆಸಬೇಕು. ಸರ್ಕಾರಿ ಜಾಗಗಳನ್ನು ಗುರುತಿಸಿ ದಲಿತ ಬಡವರಿಗೆ ನಿವೇಶನ ಹಂಚಬೇಕು ಎಂದು ಒತ್ತಾಯಿಸಿದರು.
ಪ್ರತಿ ತಿಂಗಳು ಪೊಲೀಸ್ ಇಲಾಖೆಯಿಂದ ಹಾಗೂ ತಹಿಶೀಲ್ದಾರ್ ಅವರು ಪ್ರತಿ ತಿಂಗಳು ದಲಿತರ ಕುಂದುಕೊರತೆ ಸಭೆ ಕರೆದು ಅವರ ಕುಂದು ಕೊರತೆಗಳನ್ನು ನಿವಾರಿಸಬೇಕೆಂದು ಸರ್ಕಾರದಿಂದ ನಿಯಮ ಇದ್ದರೂ ಸಹ ಸುಮಾರು ೧ ವರ್ಷದಿಂದ ಯಾವುದೇ ದಲಿತರ ಕುಂದುಕೊರತೆ ಸಭೆ ಕರೆದಿಲ್ಲ. ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಂಖ್ಯೆ ಶೇ ೩೩% ಇದ್ದು, ಸರ್ಕಾರದಿಂದ ಪ್ರತಿ ಇಲಾಖೆಯಿಂದ ಶೇ ೨೫% ಅನುದಾನ ಮೀಸಲಿಟ್ಟ ಅನುದಾನ ದುರ್ಭಳಕೆ ಆಗುತ್ತಿದ್ದರೂ ಸಹ ಕೇಳುವವರೇ ಇಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ನಗರದ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿಯಿಂದ ತಾಲ್ಲೂಕು ಕಚೇರಿಯವರೆಗೆ ಕದಸಂಸ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತಾಲ್ಲೂಕು ಕಚೇರಿಯ ಮುಂದೆ ಧರಣಿಯನ್ನು ನಡೆಸಿ ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಕಳಿಸುವಂತೆ ಕೋರಿ ಉಪವಿಬಾಗಾಧಿಕಾರಿ ಪಿ.ಶಿವಸ್ವಾಮಿ ಅವರಿಗೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್, ತಾಲ್ಲೂಕು ಸಂಚಾಲಕ ಎಚ್.ಎಂ.ಮುನಿಆಂಜಿನಪ್ಪ, ಬೈರಸಂದ್ರ ದೇವರಾಜು. ಯಣ್ಣಂಗೂರು ಸುಬ್ರಮಣಿ, ಅತ್ತಿಗಾನಹಳ್ಳಿ ನಾಗೇಶ್, ದಿಬ್ಬೂರಹಳ್ಳಿ ಮಂಜುನಾಥ್, ಭಾಗ್ಯಮ್ಮ, ದ್ಯಾವಮ್ಮ ಹಾಜರಿದ್ದರು.
- Advertisement -
- Advertisement -
- Advertisement -
- Advertisement -