ಹೈನುಗಾರಿಕೆಯಲ್ಲಿ ಆಧುನಿಕ ಪದ್ದತಿಗಳನ್ನು ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಹಾಗೂ ಹೆಚ್ಚು ಲಾಭಗಳಿಸಬಹುದೆಂದು ಚಿಕ್ಕಬಳ್ಳಾಪುರದ ಪಾಲಿಕ್ಲಿನಿಕ್ನ ಪಶು ವೈದ್ಯಾಧಿಕಾರಿ ಡಾ.ಜೆ.ಎನ್.ದೀಪಕ್ ತಿಳಿಸಿದರು.
ಮಳಮಾಚನಹಳ್ಳಿ ಗ್ರಾಮ ಪಂಚಾಯತಿ, ಹಾಲು ಉತ್ಪಾದಕರ ಸಹಕಾರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ರೇಷ್ಮೆ ಬೆಳೆಗಾರರ ಸಹಕಾರ ಸಂಘ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಹಾಗೂ ರೈತರ ಸೇವಾ ಕೇಂದ್ರದ ಆಶ್ರಯದಲ್ಲಿ ಮಳಮಾಚನಹಳ್ಳಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಾಭದಾಯಕ ಹೈನುಗಾರಿಕೆಗೆ ಇರುವ ಅವಕಾಶಗಳು ಕುರಿತು ವಿಚಾರ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದ ಅವರು, ಜಿಲ್ಲೆಯಲ್ಲಿ ಹೈನುಗಾರಿಕೆಗೆ ಸೂಕ್ತವಾದ ವಾತಾವರಣ, ಪರಿಸರ, ಮಾರುಕಟ್ಟೆ ವ್ಯವಸ್ಥೆ, ನೀತಿ ನಿಯಮಗಳು ಅನುಕೂಲಕರವಾಗಿದೆ ಎಂದು ಅಭಿಪ್ರಾಯಪಟ್ಟರು.
ಉತ್ತಮ ತಳಿಯ ರಾಸುಗಳು, ಕೊಟ್ಟಿಗೆ ನಿರ್ಮಾಣ, ಪೌಷ್ಠಿಕ ಆಹಾರ, ಸೂಕ್ತ ಕಾಲಕ್ಕೆ ಬೆದೆ ಕಟ್ಟುವುದು, ಕಾಲ ಕಾಲಕ್ಕೆ ಲಸಿಕೆಗಳನ್ನು ಹಾಕಿಸುವುದು ಉತ್ತಮ ಹೈನುಗಾರಿಕೆಯನ್ನು ನಡೆಸುವಲ್ಲಿ ಪಾತ್ರವಹಿಸುತ್ತವೆ ಎಂದು ವಿವರಿಸಿದರು.
ವಿದೇಶಿ ತಳಿಗಳಾದ ಜೆರ್ಸಿ, ಎಚ್ಎಫ್ ಹಾಗೂ ಸ್ಥಳೀಯ ತಳಿಗಳಾದ ಹಳ್ಳಿಕಾರ್, ಖಿಲಾರಿ ಇನ್ನಿತರೆ ತಳಿಗಳು ನಮ್ಮಲ್ಲಿವೆ. ವಿದೇಶಿ ತಳಿಗಳೊಂದಿಗೆ ಸ್ಥಳೀಯ ತಳಿಗಳ ರಾಸುಗಳನ್ನು ಕ್ರಾಸ್ ಮಾಡುವುದರಿಂದ ಹುಟ್ಟುವ ರಾಸುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯಲ್ಲದೆ ಹಾಲು ನೀಡುವ ಪ್ರಮಾಣವೂ ಸಹ ಹೆಚ್ಚು ಎಂದು ಹೇಳಿದರು.
ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಸೀಮೆ ಹಸುವಿಗೆ ಹುಲ್ಲು ತಿನ್ನಿಸುವ ಮೂಲಕ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿಯಲ್ಲಿ ನೂತನ ತಾಂತ್ರಿಕತೆ ಬಳಸಿಕೊಳ್ಳದೆ ರೈತರಿಗೆ ಉಳಿಗಾಲವಿಲ್ಲ. ಕಾಲ ಬದಲಾದಂತೆ ಕೃಷಿಕರೂ ಸಹ ಕೃಷಿ ಪದ್ದತಿಯಲ್ಲಿ ಬದಲಾವಣೆ ತಂದುಕೊಳ್ಳಬೇಕಿದೆ ಎಂದರು.
ಯಾರೂ ಕೂಡ ಆತ್ಮಹತ್ಯೆಯಂತ ಕೃತ್ಯಕ್ಕೆ ಮುಂದಾಗಬಾರದು, ಸರ್ಕಾರ, ತಾಲ್ಲೂಕು ಆಡಳಿತ ರೈತ ಪರ ಇದ್ದು ಯಾವುದೆ ಕಾರಣಕ್ಕೂ ಹೆದರಿ ಜೀವನವನ್ನೆ ಕೊನೆಯನ್ನಾಗಿ ಮಾಡಿಕೊಳ್ಳಬಾರದು. ಬದುಕಿದ್ದು ಎದುರಾಗುವ ಎಲ್ಲ ಸಂಕಷ್ಟಗಳನ್ನು ಎದುರಿಸುವಂತೆ ರೈತರಲ್ಲಿ ಧೈರ್ಯ ತುಂಬಿದರು.
ರೇಷ್ಮೆ ಕೃಷಿಯಲ್ಲಿ ನೂತನ ತಾಂತ್ರಿಕತೆ ವಿಷಯ ಕುರಿತು ತಲಘಟ್ಟಪುರದ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿ ಡಾ.ಸಿ.ಎಚ್.ಗುರುರಾಜ್ ಅವರು ವಿಷಯ ಮಂಡನೆ ಮಾಡಿದರು.
ಎರೆ ಹುಳು ತಯಾರಿಕೆ, ಎರೆ ಹಳು ಗೊಬ್ಬರದಿಂದಾಗುವ ಪ್ರಯೋಜನಗಳು, ವಿವಿಧ ಮಾದರಿಯ ಟಿಲ್ಲರ್, ಸೋಲಾರ್ ಪದ್ದತಿ, ಡೆಂಗ್ಯೂ ಜ್ವರ ಕುರಿತು, ಔಷಧಿಗಳು ಸೇರಿದಂತೆ ಕೃಷಿ, ಹೈನುಗಾರಿಕೆ, ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ನಾನಾ ಪ್ರಾತ್ಯಕ್ಷಿತೆಗಳನ್ನು ನಡೆಸಲಾಯಿತು. ಮಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಎಂ.ರಾಮಾಂಜಿನಪ್ಪ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೆಶಕ ಆನಂದ ಸುವರ್ಣ, ತಾಲ್ಲೂಕು ಯೋಜನಾಧಿಕಾರಿ ಯೋಗಿಶ್ ಕಿನ್ಯಾಡಿ, ರೇಷ್ಮೆ ಇಲಾಖೆಯ ಉಪ ನಿರ್ದೆಶಕ ಬಿ.ಆರ್.ನಾಗಗಭೂಷಣ್, ಸಹಾಯಕ ನಿರ್ದೆಶಕ ಎಂ.ಸಿ.ಚಂದ್ರಪ್ಪ, ಕೃಷಿ ನಿರ್ದೆಶಕ ಬಿ.ಸಿ.ದೇವೇಗೌಡ, ಜಂಗಮಕೋಟೆ ಹೋಬಳಿ ಕೃಷಿ ಅಧಿಕಾರಿ ಡಿ.ಟಿ.ಗೋಪಾಲರಾವ್, ಪಶು ವೈದ್ಯಾಧಿಕಾರಿ ಡಾ.ಮುನಿನಾರಾಯಣರೆಡ್ಡಿ, ತೋಟಗಾರಿಕೆಯ ಆನಂದ್, ಆರೋಗ್ಯ ಇಲಾಖೆಯ ವಿಂದ್ಯ, ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಕರವೇ ಅಧ್ಯಕ್ಷ ಸಂತೋಷ್, ಗೋವರ್ಧನ್, ಹರೀಶ್, ಮಂಜುನಾಥ್, ಕೃಷ್ಣಯ್ಯ, ಜಗಶ್, ಬ್ಯಾಟರಾಯಶೆಟ್ಟ, ದೇವರಾಜ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -