ಮಹದಾಯಿ ತೀರ್ಪು ವಿರೋಧಿಸಿ, ನೀರಿಗಾಗಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಗೂಂಡಾಗಿರಿ ನಡೆಸಿದ್ದಲ್ಲದೆ, ರೈತರ ಮನೆಗಳಿಗೆ ನುಗ್ಗಿ ವೃದ್ದರು, ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿರುವ ಪೊಲೀಸರನ್ನು ವಜಾಗೊಳಿಸುವಂತೆ ಒತ್ತಾಯಿಸಿ ರೈತ ಸಂಘದ ಸದಸ್ಯರು ಸೋಮವಾರ ಪ್ರತಿಭಟಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ರೈತರು, ನೀರಾವರಿ ಹೋರಾಟದಲ್ಲಿ ನ್ಯಾಯವನ್ನು ಒದಗಿಸಲು ವಿಫಲವಾಗಿರುವ ಸರ್ಕಾರ, ಮಹದಾಯಿ ಯೋಜನೆಯಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಲು ವಿಳಂಬ ಮಾಡಿದೆ. ನ್ಯಾಯಯುತವಾಗಿ ಹೋರಾಟ ನಡೆಸಲು ಮುಂದಾಗಿರುವ ರೈತರನ್ನು ಹಿಗ್ಗಾಮುಗ್ಗಾ ಥಳಿಸಲು ಪೊಲೀಸರಿಗೆ ಬೆಂಬಲ ನೀಡುವ ಮೂಲಕ ರೈತರ ಮೇಲಿನ ನಿರ್ಲಕ್ಷ್ಯವನ್ನು ತೋರಿಸಿದೆ. ರಾಜ್ಯದ ಗೃಹ ಸಚಿವರು, ಕೇವಲ ಕ್ಷಮೆ ಯಾಚನೆ ಮಾಡುವುದರಿಂದ ರೈತರಿಗೆ ಆಗಿರುವ ಮಾನಸಿಕ ಆಘಾತವನ್ನು ಸರಿಪಡಿಸಲು ಸಾಧ್ಯವಿಲ್ಲ. ವೃದ್ದರು, ಮಕ್ಕಳು, ಮಹಿಳೆಯರಲ್ಲಿನ ಆತಂಕವನ್ನು ದೂರಮಾಡಲು ಸಾಧ್ಯವಿಲ್ಲ, ಅವರ ಮೇಲೆ ದೌರ್ಜನ್ಯವನ್ನು ಎಸಗಲು ಪ್ರಚೋದನೆ ನೀಡಿರುವ ಅಧಿಕಾರಿ ಹಾಗೂ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕು. ಅವರ ಮೇಲೆ ಗೂಂಡಾ ಕಾಯ್ದೆಯಲ್ಲಿನ ದೂರು ದಾಖಲಿಸಬೇಕು, ಗಾಯಗೊಂಡಿರುವ ರೈತರ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸಬೇಕು, ಎಂದು ಅವರು ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಎಸ್.ಎಂ.ನಾರಾಯಣಸ್ವಾಮಿ, ವೇಣುಗೋಪಾಲ್, ಮುನಿನಂಜಪ್ಪ, ಆಂಜನೇಯರೆಡ್ಡಿ, ಟಿ.ಕೃಷ್ಣಪ್ಪ, ಎಂ.ದೇವರಾಜು, ಎಸ್.ಆನಂದ, ಎನ್.ಶಂಕರ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -