ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಹೃಯದ ಸಂಬಂಧಿ ಖಾಯಿಲೆಗಳನ್ನು ತಡೆಗಟ್ಟುವುದರ ಜೊತೆಗೆ ಶಾರೀರಿಕವಾಗಿಯೂ ಸದೃಢರಾಗಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಬಿ.ಕಾವೇರಿ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶುಕ್ರವಾರ ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ತಾಲ್ಲೂಕು ಆಡಳಿತ, ಹಾಗು ವಿವಿಧ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಉಚಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪುರುಷರು ಒಂದು ವರ್ಷದಲ್ಲಿ ನಾಲ್ಕು ಬಾರಿ ರಕ್ತದಾನವನ್ನು ಮಾಡಬಹುದಾಗಿದ್ದು, ಸ್ತ್ರೀಯರು ಮೂರು ಬಾರಿ ರಕ್ತದಾನ ಮಾಡಬಹುದಾಗಿರುತ್ತದೆ. ರಕ್ತದಾನವನ್ನು ಒಂದು ಪ್ರವೃತ್ತಿಯಾಗಿ ಬೆಳೆಸಿಕೊಳ್ಳಬೇಕು, ರಕ್ತದಾನದಿಂದ ಮತ್ತೊಬ್ಬರ ಜೀವವನ್ನು ಸಾವಿನಿಂದ ತಪ್ಪಿಸಿದಂತಾಗುತ್ತದೆ. ವೈಜ್ಞಾನಿಕವಾಗಿ ಹೆಚ್ಚು ಮುಂದುವರೆದಿದ್ದರೂ ಕೂಡಾ ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಅದು ಪ್ರಕೃತಿದತ್ತವಾಗಿಯೆ ಬರುವಂತಹ ಬೆಲೆ ಕಟ್ಟಲಾಗದಂತಹ ಸಂಪತ್ತಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಜನತೆಯ ಜೀವ ಉಳಿಸಿ ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ರಕ್ತದಾನದ ವಿಚಾರದಲ್ಲಿ ಬಹಳಷ್ಟು ಜನತೆಯಲ್ಲಿ ಮೂಢನಂಬಿಕೆಯಿದೆ. ರಕ್ತದಾನ ಮಾಡುವುದರಿಂದ ಜೀವಕ್ಕೆ ಹಾನಿಯಾಗುವುದಿಲ್ಲ, ಬದಲಿಗೆ ದೇಹದಲ್ಲಿ ಹೊಸ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತವೆ. ಬಹಳಷ್ಟು ಮಂದಿ ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ಬಹಳಷ್ಟು ಮಂದಿ ಸಾವಿಗೀಡಾಗುತ್ತಿದ್ದು, ರಕ್ತದ ಕೊರತೆಯಿಂದಾ ಸಾವನ್ನಪ್ಪುತ್ತಿರುವಂತಹ ಜನತೆಯನ್ನು ಉಳಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ರಕ್ತದಾನ ಮಾಡಲು ಯುವಜನತೆ ಮುಂದಾಗಬೇಕು. ಪ್ರಪಂಚದಾದ್ಯಂತ ರೆಡ್ಕ್ರಾಸ್ ಸಂಸ್ಥೆಯ ಶಾಖೆಗಳಿದ್ದು, ಯಾವ ಶಾಖೆಯಲ್ಲಿ ಬೇಕಾದರೂ ರಕ್ತವನ್ನು ಪಡೆಯುವಂತಹ ಅವಕಾಶವಿರುವುದರಿಂದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ ಡಾ.ರಂಗಸ್ವಾಮಿ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿದರು.
ಈ ಸಂದರ್ಭದಲ್ಲಿ ೪೦ ಬಾರಿ ರಕ್ತದಾನ ಮಾಡಿದ ಕಂದಾಯ ಇಲಾಖೆಯ ಕೋಲಾರ ಉಪತಹಶೀಲ್ದಾರ್ ಕೆ.ಎನ್.ಎಂ. ಮಂಜುನಾಥ್, ಮತ್ತು ೨೬ ಬಾರಿ ರಕ್ತದಾನ ಮಾಡಿದ ಆರೋಗ್ಯ ಇಲಾಖೆಯ ಟಿ.ಟಿ.ನರಸಿಂಹಪ್ಪ, ಅಕ್ಕಲರೆಡ್ಡಿ ಮುಂತಾದವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾಂಜಿನೇಯ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ.ಗುರುರಾಜ್, ವಿಜಯಮ್ಮ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಗೀಶ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -