ಯೋಗಿ ದ್ಯಾವಪ್ಪ ತಾತನವರ ಆರಾಧನಾ ಮಹೋತ್ಸವವನ್ನು ದ್ಯಾವಪ್ಪನಗುಡಿ(ಜಯಂತಿ ಗ್ರಾಮ)ಯಲ್ಲಿ ಬಹಳ ವಿಜೃಂಭಣೆಯಿಂದ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಕಳೆದ ಏಳು ದಿನಗಳಿಂದಲೂ ಆರಾಧನಾ ಮಹೋತ್ಸವ ಅಂಗವಾಗಿ ದ್ಯಾವಪ್ಪನ ಗುಡಿಯಲ್ಲಿ ನಾನಾ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕೈವಾರ ಹೊರತುಪಡಿಸಿದರೆ ಸಾಮಾನ್ಯ ವ್ಯಕ್ತಿಯೊಬ್ಬರ ಸಮಾಧಿಗೆ ದಿನ ನಿತ್ಯವೂ ಪೂಜೆ ನಡೆಯುವ, ವರ್ಷದ ೩೬೫ದಿನವೂ ದೀಪ ಬೆಳಗುವ ಚಿಕ್ಕಬಳ್ಳಾಪುರ- ಕೋಲಾರ ಜಿಲ್ಲೆಯ ಏಕೈಕ ಸ್ಥಳವಾದ ದ್ಯಾವಪ್ಪನಗುಡಿಯಲ್ಲಿನ ದ್ಯಾವಪ್ಪ ತಾತನ ಸಮಾಧಿ ಬಳಿ ವಾರದಿಂದಲೂ ಭಕ್ತಿಯ ಝೇಂಕಾರ ಮೊಳಗುತ್ತಿದೆ.
ಪ್ರತಿ ವರ್ಷವೂ ಯುಗಾದಿ ಬಂದಾದ ಮೇಲೆ ಆರಂಭವಾಗುವ ದ್ಯಾವಪ್ಪತಾತನ ಆರಾಧನಾ ಮಹೋತ್ಸವವು ಈ ವರ್ಷವೂ ಆರಂಭವಾಗಿದ್ದು ಜಿಲ್ಲೆಯ ನಾನಾ ಕಡೆಯಿಂದ ಆಗಮಿಸಿದ ಭಕ್ತರು ದ್ಯಾವಪ್ಪ ತಾತನ ಸಮಾಧಿಗೆ ಹಾಲು ತುಪ್ಪದ ನೈವೇದ್ಯ ಅರ್ಪಿಸಿದರು.
ಚಿಕ್ಕಂದಿನಿಂದಲೂ ದನಕರುಗಳನ್ನು ಮೇಯಿಸುತ್ತಲೆ ಅವುಗಳೊಂದಿಗೆ ಅವಿನಾಭವ ಸಂಬಂಧ ಬೆಳೆಸಿಕೊಂಡ ಕೋಟಹಳ್ಳಿಯ ಚಿಕ್ಕದ್ಯಾವಪ್ಪ ಯಾವುದೆ ಪಶು ವೈದ್ಯರಿಗಿಂತಲೂ ಕಡಿಮೆ ಇಲ್ಲದಂತೆ ಪಶು ಚಿಕಿತ್ಸಕರಾಗಿ ಬೆಳೆದರು. ಅವರು ಯಾವುದೆ ರಾಸುವಿನ ಬೆನ್ನ ಮೇಲೆ ಕೈ ಸವರಿದರೂ ಸಾಕು ಆ ರಾಸುವಿನ ರೋಗ ವಾಸಿಯಾಗುತ್ತಿತ್ತು ಎಂಬ ಮಾತಿದೆ. ಕೇವಲ ನಾಲ್ಕಾಣೆ ಮಾತ್ರವೇ ಹಣ ಪಡೆದು ರೋಗಗಳನ್ನು ವಾಸಿ ಮಾಡುತ್ತಿದ್ದ ದ್ಯಾವಪ್ಪ ತನ್ನ ಗೋಸೇವೆಯಿಂದಲೆ ಗೋಪಾಲಕ ದ್ಯಾವಪ್ಪ ತಾತನಾಗಿ ಜನರ ಮನದಲ್ಲಿ ಉಳಿದಿದ್ದಾರೆ.
ನಾಲ್ಕಾಣೆಯಂತೆ ಸಂಗ್ರಹಿಸಿದ ಹಣವನ್ನು ಒಟ್ಟುಗೋಡಿಸಿ ಗೋವುಗಳಿಗೆ ಗೋಕುಂಟೆಯನ್ನು ಸಹ ನಿರ್ಮಿಸಿದ್ದರು. ಅವರ ಆಸೆಯಂತೆ ಅವರ ನಿಧನಾ ನಂತರ ಅವರ ಸಮಾಧಿಯನ್ನು ನಿರ್ಮಿಸಿ ಅಲ್ಲಿ ಪೂಜಿಸಿ ಮಂತ್ರಿಸಿದ ಉಪ್ಪನ್ನು ರಾಸುಗಳಿಗೆ ನೀರಿನ ಮೂಲಕ ತಿನ್ನಿಸುತ್ತಾರೆ. ಅಲ್ಲಿ ಸಿಗುವ ಕಪ್ಪು ಕಮ್ಮಳಿ ದಾರವನ್ನು ಕಟ್ಟಿದರೂ ಸಾಕು ಎಂತಹ ರೋಗವಾದರೂ ವಾಸಿಯಾಗುತ್ತದೆ ಎಂಬ ನಂಬಿಕೆ ಬೇರೂರಿದೆ.
ತಾತನವರ ಆರಾಧನಾ ಮಹೋತ್ಸವ ಸಮಯದಲ್ಲಂತೂ ವಾರದ ಕಾಲ ನಾನಾ ಪೂಜೆ, ತಂಬಿಟ್ಟು ದೀಪೋತ್ಸವ, ನಾನಾ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಮುತ್ತಿನ ಪಲ್ಲಕ್ಕಿ, ಕ್ಷೀರ, ಮನರಂಜನಾ ಉಟ್ಲು ಮಹೋತ್ಸವೂ ನಡೆಯಲಿದೆ.
ಪ್ರತಿ ನಿತ್ಯವೂ ದಾನವಾಗಿ ಬಂದ ಅಕ್ಕಿ, ಬೇಳೆ, ದವಸ, ದಾನ್ಯ, ತರಕಾರಿಗಳಿಂದಲೆ ತಯಾರು ಮಾಡಿದ ಮುದ್ದೆ ಸಾಂಬಾರು ಊಟವನ್ನಂತೂ ಆರಾಧನಾ ಮಹೋತ್ಸವ ನಡೆಯುವ ವಾರದ ಕಾಲವೂ ನಿತ್ಯ ಮದ್ಯಾಹ್ನ ಸಾವಿರಾರು ಮಂದಿಗೆ ಉಣಬಡಿಸಲಾಗುತ್ತದೆ.
- Advertisement -
- Advertisement -
- Advertisement -
- Advertisement -