ಫೆಬ್ರುವರಿ 2011 ರ ಕೇಂದ್ರ ಬಜೆಟ್ನಲ್ಲಿ ರೂಪಿಸಿದ ತೆರಿಗೆ ಖರೀದಿ ನೀತಿಯಿಂದಾಗಿ ಒಂದು ಕೆಜಿಗೆ 3,600 ರೂಗಳಿಗೆ ಮಾರಾಟವಾಗುತ್ತಿದ್ದ ಕಚ್ಚಾ ರೇಷ್ಮೆ ನೂಲಿನ ಬೆಲೆ ಕೇವಲ ಮೂರು ದಿನಗಳ ಅವಧಿಯಲ್ಲಿ 2,000 ದಿಂದ 2,500 ರೂಗಳಿಗೆ ಕುಸಿಯಿತು ಎಂದು ಸಿಲ್ಕ್ ಸೊಸೈಟಿ ಮಾಜಿ ನಿರ್ದೇಶಕ ಎ.ಆರ್.ಅಬ್ದುಲ್ ಅಜೀಜ್ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದೇಶದ 14 ರಿಂದ 15 ಮೆಟ್ರಿಕ್ ಟನ್ ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ಅರ್ಧದಷ್ಟು ಉತ್ತಮ ಗುಣಮಟ್ಟದ ರೇಷ್ಮೆ ರಾಜ್ಯದಿಂದಲೇ ತಯಾರಾಗುತ್ತಿದೆ. ರಾಜ್ಯದಲ್ಲಿ ಸುಮಾರು 10,000 ಇಲಾಖಾ ಪರವಾನಗಿ ಹೊಂದಿರುವ ರೇಷ್ಮೆ ನೂಲು ಬಿಚ್ಚಾಣಿಕೆದಾರರು, ಒಂದೂವರೆ ಲಕ್ಷಕ್ಕೂ ಅಧಿಕ ಅಸಂಘಟಿತ ಕಾರ್ಮಿಕರು ಈ ಉದ್ದಿಮೆಯನ್ನು ಅವಲಂಭಿಸಿದ್ದಾರೆ. ಶೇಕಡಾ 90 ರಷ್ಟು ರೇಷ್ಮೆ ನೂಲು ಉತ್ಪಾದಕರು ರೇಷ್ಮೆ ವ್ಯಾಪಾರದಲ್ಲಿ ಆಗುತ್ತಿರುವ ದರದ ಏರುಪೇರಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೇಷ್ಮೆ ವ್ಯಾಪಾರದಲ್ಲಿ ಸ್ಥಿರತೆ ಇಲ್ಲದಿರುವುದರಿಂದ ನಷ್ಟಕ್ಕೆ ಒಳಗಾಗಿ ದುಡಿಮೆ ಬಂಡವಾಳವನ್ನು ಕಳೆದುಕೊಳ್ಳುತ್ತಿದ್ದಾರೆ. ಅನೇಕರು ಕಸುಬನ್ನು ಬಿಡುವ ಹಂತಕ್ಕೆ ಬಂದಿದ್ದಾರೆ ಎಂದು ಹೇಳಿದರು.
ಸ್ಥಳೀಯ ನೂಲು ಬಿಚ್ಚಾಣಿಕೆದಾರರನ್ನು ಪ್ರೋತ್ಸಾಹಿಸದೆ, ಉದ್ಯಮದ ಅಭಿವೃದ್ಧಿಯನ್ನು ಗಂಭೀರವಾಗಿ ಪರಿಗಣಿಸದೆ, ಸ್ಥಳೀಯ ರೈತರಿಗೆ ನೆರವಾಗದೇ, ‘ಮೇಕ್ ಇನ್ ಇಂಡಿಯಾ’ ಎನ್ನುತ್ತಾ, ಚೀನಾದಿಂದ ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿರುವುದು ವಿಷಾಧನೀಯ.
ದಿನವೊಂದಕ್ಕೆ ಸುಮಾರು 8 ಕೋಟಿ ರೂಗಳಷ್ಟು ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಗೂಡು ಖರೀದಿಗಾಗಿ ರೀಲರುಗಳು ಪಾವತಿಸಬೇಕು. ವರ್ಷಕ್ಕೆ ಸುಮಾರು 10,000 ಕೋಟಿ ರೂಗಳಷ್ಟು ಹಣ ರೇಷ್ಮೆ ರೀಲಿಂಗ್ ಉದ್ದಿಮೆಯಿಂದ ವಹಿವಾಟು ನಡೆಯುತ್ತಿದೆ. ಕಚ್ಛಾ ರೇಷ್ಮೆ ಬೆಲೆ ಕುಸಿತದಿಂದಾಗಿ ಕಳೆದ ಮಾಹೆಯಲ್ಲಿ ರೀಲರುಗಳು ಸುಮಾರು 40 ಕೋಟಿ ರೂಗಳಷ್ಟು ನಷ್ಟ ಅನುಭವಿಸಿದ್ದಾರೆ.
1979 ರಲ್ಲಿ ರೀಲರುಗಳ ರಕ್ಷಣೆಗಾಗಿ, ಮಾರುಕಟ್ಟೆ ಬೆಲೆ ಏರುಪೇರನ್ನು ಸರಿದೂಗಿಸಲು ಕೆ.ಎಸ್.ಎಂ.ಬಿ ಸಂಸ್ಥೆಯು ಅಸ್ಥಿತ್ವಕ್ಕೆ ಬಂದಿತಾದರೂ, ಅವರು ರೇಷ್ಮೆ ನೂಲನ್ನು ಸರಿಯಾಗಿ ಖರೀದಿಸುತ್ತಿಲ್ಲ. ಕೆ.ಎಸ್.ಎಂ.ಬಿ ಅವರು ಅಲ್ಪ ಪ್ರಮಾಣದ ಬಡ್ಡಿ ಆಧಾರದ ಮೇಲೆ ರೇಷ್ಮೆ ನೂಲು ಅಡಮಾನ ಸೌಲಭ್ಯ ಒದಗಿಸಲಿ.
ರೈತರಿಗೆ ಪಹಣಿ ಆಧಾರದ ಮೇಲೆ ಚಿನ್ನದ ಸಾಲ ಸೌಲಭ್ಯ ನೀಡುವಂತೆ ಲೈಸೆನ್ಸ್ ಹೊಂದಿರುವ ರೀಲರುಗಳಿಗೆ ಚಿನ್ನದ ಸಾಲ ಸೌಲಭ್ಯ ನೀಡಲಿ.
ರೀಲರುಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ರಿಯಾಯಿತಿ ಧರದ ಬಡ್ಡಿಯಲ್ಲಿ ದುಡಿಮೆ ಬಂಡವಾಳ ಮಂಜೂರು ಮಾಡಲಿ. ಕಚ್ಛಾ ರೇಷ್ಮೆ ಹಾಗೂ ಸಿಲ್ಕ್ ವೇಸ್ಟ್ ಮೌಲ್ಯಗಳನ್ನು ಗುಣಮಟ್ಟದ ಆಧಾರದ ಮೇಲೆ ನಿಗದಿಪಡಿಸಲಿ. ಇತರ ಉದ್ದಿಮೆಗಳ ಅಸಂಘಟಿತ ಕೂಲಿ ಕಾರ್ಮಿಕರಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ರೇಷ್ಮೆ ಉತ್ಪಾದನಾ ಕಾರ್ಮಿಕ ವರ್ಗದವರಿಗೂ ವಿಸ್ತರಿಸಬೇಕು. ಕಾಟೇಜ್ ರೀಲರುಗಳಿಗೆ ನೀಡುವ ಬಡ್ಡಿ ರಿಯಾಯಿತಿ ಸೌಲಭ್ಯವನ್ನು ಫಿಲೇಚರ್ ನೂಲು ಬಿಚ್ಚಾಣಿಕೆದಾರರಿಗೂ ವಿಸ್ತರಿಸಲಿ. ರೈತರಿಗೆ ನೀಡುತ್ತಿರುವ ರೈತ ಸಂಜೀವಿನಿ ಕಾರ್ಡ್ ಅನುಕೂಲವನ್ನು ನೂಲು ಬಿಚ್ಚಾಣಿಕೆದಾರರಿಗೂ ನೀಡಲಿ.
ರೇಷ್ಮೆ ಉದ್ದಿಮೆಯಲ್ಲಿನ ಕಾರ್ಮಿಕರಿಗೆ ಮತ್ತು ರೀಲರುಗಳಿಗೆ ಆಸ್ತಮಾ, ಕ್ಷಯ, ಶ್ವಾಸಕೋಶಗಳ ಸಂಬಂಧಿ ಖಾಯಿಲೆ, ಚರ್ಮ ವ್ಯಾಧಿಗಳು ಹೆಚ್ಚಾಗಿ ಉಂಟಾಗುವುದರಿಂದ ಇ.ಎಸ್.ಐ ಆಸ್ಪತ್ರೆಯೊಂದನ್ನು ನಗರದಲ್ಲಿ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ ಸ್ಥಾಪಿಸಬೇಕು. ರಾಜ್ಯದ ರೇಷ್ಮೆ ನೂಲನ್ನು ವಿದೇಶಗಳಿಗೆ ರಫ್ತು ಮಾಡುವ ಬಗ್ಗೆ ಕ್ರಮ ಕೈಗೊಂಡು ಮಾರುಕಟ್ಟೆಯನ್ನು ವಿಸ್ತರಿಸುವ ಮೂಲಕ ಬೆಲೆ ಇಳಿಕೆಯನ್ನು ತಡೆಗಟ್ಟಬಹುದಾಗಿದೆ ಎಂದು ತಮ್ಮ ಬೇಡಿಕೆಗಳನ್ನು ವಿವರಿಸಿದರು.
ರೀಲರುಗಳಾದ ಸಿಕಂದರ್, ರೆಹಮಾನ್, ಮಹಮ್ಮದ್ ಅನ್ಸರ್, ಅನಂತಪದ್ಮನಾಭ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -