ಜೋಟ್ (ಸಿಲ್ಕ್ವೇಸ್ಟ್) ಖರೀಸುವವರ ವಿರುದ್ಧ ನಮಗೆ ಯಾವುದೆ ರೀತಿಯ ವೈಯಕ್ತಿಕ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿರುವ ರೇಷ್ಮೆನೂಲು ಬಿಚ್ಚಾಣಿಕೆದಾರರ ಸಂಘದ ಮುಖಂಡರು ಮಾರುಕಟ್ಟೆಯ ಧರದಲ್ಲಿ ಜೋಟನ್ನು ಖರೀದಿಸಲಿ ಎಂಬುದಷ್ಟೆ ನಮ್ಮ ಆಶಯ ಎಂದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೀಲರ್ ಸಂಘದ ಮುಖಂಡ ಡಿ.ಎಂ.ಜಗದೀಶ್ವರ್, ನಗರದಲ್ಲಿ ನಾಲ್ಕು ಮಂದಿಯಷ್ಟೆ ಜೋಟ್ ವ್ಯಾಪಾರಿಗಳಿದ್ದು ಅವರು ನಿಗದಿಪಡಿಸಿದ ಬೆಲೆಗೆ ಎಲ್ಲ ರೀಲರುಗಳು ಸಹ ಜೋಟನ್ನು ನೀಡುವ ಪರಿಸ್ಥಿತಿ ಇದೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿರುವ ರೀಲರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಶಿಡ್ಲಘಟ್ಟ ನಗರದಲ್ಲಿ ೩೫೦೦ಕ್ಕೂ ಹೆಚ್ಚು ಮಂದಿ ರೀಲರುಗಳಲ್ಲಿ ಶೇ. ೯೦ರಷ್ಟು ಮಂದಿ ರೀಲರುಗಳು ದಪ್ಪ ರೇಷ್ಮೆಯನ್ನು ತೆಗೆಯಲಿದ್ದು ಪ್ರತಿ ೪-೫ ಕೆಜಿಯಷ್ಟು ರೇಷ್ಮೆ ನೂಲನ್ನು ಬಿಚ್ಚಾಣಿಕೆ ಮಾಡಿದರೆ ೧ ಕೆಜಿಯಷ್ಟು ಜೋಟ್ ಉತ್ಪತ್ತಿಯಾಗುತ್ತೆ. ಬಹುತೇಕ ಎಲ್ಲ ಕುಟುಂಬಗಳೂ ಈ ಜೋಟ್ನಿಂದ ಬರುವ ಆದಾಯದ ಮೇಲೆ ಅವಲಂಬಿಸಿದ್ದಾರೆ. ಆದರೆ ನಗರದಲ್ಲಿ ಬೇರೆಲ್ಲಾ ಕಡೆಗಳಿಗಳಿಗಿಂತಲೂ ಸುಮಾರು ೧೦೦-–೧೫೦ರೂಪಾಯಿ ಕಡಿಮೆ ಬೆಲೆಗೆ ಜೊಟ್ಟನ್ನು ಖರೀದಿಸುತ್ತಿದ್ದಾರೆ. ಆದರೆ ಪಕ್ಕದ ವಿಜಯಪುರ, ಕೋಲಾರ ಇನ್ನಿತರೆ ಕಡೆ ಅಲ್ಲಿನ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಜೋಟನ್ನು ಖರೀದಿಸುತ್ತಿದ್ದಾರೆ ಎಂದರು.
ರಾಜ್ಯದ ಎಲ್ಲ ಕಡೆಯೂ ಜೋಟ್ಗೆ ಸ್ವಲ್ಪ ಹೆಚ್ಚು ಕಡಿಮೆ ಒಂದೆ ಬೆಲೆ ಇರುವಾಗ ಇಲ್ಲಿ ಮಾತ್ರ ಇಷ್ಟು ವ್ಯತ್ಯಾಸ ಏಕೆ ? ಎಂದು ಪ್ರಶ್ನಿಸಿರುವ ನಾವು ಬೇರೆ ಕಡೆ ಮಾರುಕಟ್ಟೆಯಲ್ಲಿ ಏನು ಬೆಲೆ ಇದೆಯೋ ಆ ಬೆಲೆಗೆ ಇಲ್ಲಿಯೂ ಜೋಟನ್ನು ಖರೀದಿಸಿ ಎಂಬುದಷ್ಟೆ ನಮ್ಮ ಕೋರಿಕೆ.
ಅದನ್ನು ನಾವು ಪ್ರಶ್ನಿಸಿದ್ದೇವೆಯೆ ಹೊರತು ಜೊಟ್ ಖರೀದಿದಾರರ ವಿರುದ್ಧ ನಮಗೆ ಯಾವ ವೈಯಕ್ತಿಕ ದ್ವೇಷವೂ ಇಲ್ಲ. ಜತೆಗೆ ಬೇರೆ ಎಲ್ಲಿಂದಲಾದರೂ ಜೋಟ್ ಖರೀದಿಸಲು ಇಲ್ಲಿಗೆ ವ್ಯಾಪಾರಿಗಳು ಬಂದರೆ ಅವರಿಗೆ ಇಲ್ಲಿ ವ್ಯಾಪಾರ ಮಾಡಲು ಮುಕ್ತ ಅವಕಾಶ ನೀಡಬೇಕು ಎಂಬುದಷ್ಟೆ ನಮ್ಮ ಒತ್ತಾಯ ಎಂದು ಸ್ಪಷ್ಟಪಡಿಸಿದರು.
ಕಳೆದ ವಾರ ವಿಜಯಪುರದ ಜೋಟ್ ವ್ಯಾಪಾರಿ ಮುನ್ಸೂರ್ ಇಲ್ಲಿ ಜೊಟನ್ನು ಖರೀದಿಸಿದಾಗ ಆದ ಗೊಂದಲಗಳ ನಂತರ ವಾರದ ಅಂತರದಲ್ಲಿ ಜೊಟ್ ಬೆಲೆಯಲ್ಲಿ ೫೦-–೧೦೦ರೂಪಾಯಿ ಏರಿಕೆಯಾಗಿದೆ. ಆದರೆ ಈ ಮೊದಲು ಆ ಬೆಲೆಯನ್ನು ಏಕೆ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಜತೆಗೆ ಪ್ರಜಾಪ್ರಭುತ್ವ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಜೋಟನ್ನು ಖರೀದಿಸಬಹುದಿದ್ದು ಅದರಂತೆ ಯಾರೇ ಬಂದು ಇಲ್ಲಿ ಜೋಟನ್ನು ಖರೀದಿಸಿದರೂ ಅವರೆಲ್ಲರಿಗೂ ಸ್ವಾಗತವಿದೆ ಎಂದು ತಿಳಿಸಿದರು.
ಜೊಟ್ಗೆ ಉತ್ತಮ ಬೆಲೆ ಸಿಕ್ಕರೆ ಆರ್ಥಿಕವಾಗಿ ಚೇತರಿಸಿಕೊಳ್ಳುವ ರೀಲರ್ ತಾನು ಖರೀದಿಸುವ ರೇಷ್ಮೆಗೂಡಿಗೂ ೨೦-–೩೦ ರೂಪಾಯಿಯಷ್ಟು ಹೆಚ್ಚಿನ ಬೆಲೆ ನೀಡಲಿದ್ದು ಇದರಿಂದ ರೈತ ಹಾಗೂ ರೀಲರುಗಳಿಬ್ಬರೂ ಉಳಿದು ಬೆಳೆಯಲು ಸಹಕಾರಿಯಾಗುತ್ತದೆ ಎಂದು ವಿವರಿಸಿದರು.
ಮುಖಂಡರಾದ ಎಸ್.ಎಂ.ರಮೇಶ್, ಜಿ.ರೆಹಮಾನ್, ಸಲೀಂ, ಶಮೀವುಲ್ಲಾ, ಸಯ್ಯದ್ ದಸ್ತಗಿರ್, ಅನ್ಸರ್ಖಾನ್, ಖಾಜಿ ಅನ್ವರ್ಸಾಬ್, ಮಹ್ಮದ್, ಅಜೀಜ್, ದ್ಯಾವಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -