‘ಭೂಮಿ ಕೊಡಿ, ಇಲ್ಲವೇ ವಿಷ ಕೊಡಿ’, ಆತಂಕ, ಭಯದಿಂದ ಸಾಗುವಳಿ ಚೀಟಿಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ವಿಳಂಬ ಮಾಡದೆ ಅತ್ಯಂತ ಶೀಘ್ರವಾಗಿ ಸಾಗುವಳಿ ಚೀಟಿ ವಿತರಿಸುವಂತೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ತಾಲ್ಲೂಕು ಸಂಯೋಜಕ ಹರಿಪ್ರಸಾದ್ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಎಲ್ಲಾ ಶಾಸಕರು ಭೂರಹಿತ ರೈತರ ಬಗ್ಗೆ ಕಾಳಜಿ ವಹಿಸಿ, ಬಗರ್ ಹುಕುಂ ಸಮಿತಿ ಸಭೆಗಳನ್ನು ನಡೆಸಿ ಭೂ ಮಂಜೂರಾತಿ ನೀಡಿರುವರು. ಆದರೆ ಆಯಾ ತಾಲ್ಲೂಕು ಕಚೇರಿಗಳಲ್ಲಿ ಭೂಮಿಯನ್ನು ಅಳತೆ ಮಾಡಿ, ನಕ್ಷೆಯನ್ನು ತಯಾರಿಸಲು ಸಿಬ್ಬಂದಿಯ ಕೊರತೆಯೆಂದು ದಾಖಲೆಗಳು ಸಿದ್ದಗೊಳ್ಳದೆ ಬಹಳಷ್ಟು ಅರ್ಜಿಗಳು ಬಾಕಿ ಉಳಿದಿವೆ.
ಚುನಾವಣೆಯು ಸಮೀಪಿಸುತ್ತಿರುವುದರಿಂದ ಚುನಾವಣೆ ನೀತಿಸಂಹಿತೆ ಜಾರಿಯಾಗುವ ಮುನ್ನ ಆದಷ್ಟು ಬೇಗ ಬಗರ್ ಹುಕುಂ ಸಮಿತಿ ಸಭೆಗಳನ್ನು ನಡೆಸಿ ಬಾಕಿ ಇರುವ ಅರ್ಜಿಗಳನ್ನು ಪರಿಶೀಲಿಸಿ ಅತಿ ಜರೂರಾಗಿ ಭೂ ಮಂಜೂರಾತಿ ನೀಡಿ ಸಾಗುವಳಿ ಚೀಟಿಗಳನ್ನು ವಿತರಿಸುವಂತೆ ಒತ್ತಾಯಿಸಿದರು.
ತಾಲ್ಲೂಕಿನಲ್ಲಿ ಒಟ್ಟು 9375 ಅರ್ಜಿಗಳು ಸಲ್ಲಿಕೆಯಾಗಿದ್ದು, 2319 ಅರ್ಜಿಗಳು ಸಕ್ರಮಗೊಂಡಿವೆ. 6875 ಅರ್ಜಿಗಳು ತಿರಸ್ಕೃತಗೊಂಡಿದ್ದು 381 ಅರ್ಜಿಗಳು ಬಾಕಿ ಇರುತ್ತವೆ.
ರೈತ ಪೂಲಕುಂಟ್ಲಹಳ್ಳಿ ಮಂಜುನಾಥರೆಡ್ಡಿ ಮಾತನಾಡಿ, ನಾನು ನಾಲ್ಕು ಎಕರೆ ಭೂಮಿಯನ್ನು 1985 ರಿಂದ ಉಳುಮೆಮಾಡುತ್ತಿದ್ದೇನೆ. 1989 ರಲ್ಲಿ ಸರ್ಜಿ ಸಲ್ಲಿಸಿದ್ದರೂ ಇದುವರೆಗೂ ಸಾಗುವಳಿ ಚೀಟಿ ನೀಡಿಲ್ಲ ಎಂದರು.
ರೈತ ಬೈರಗಾನಹಳ್ಳಿ ಜಿ.ಎಂ.ದ್ಯಾವಪ್ಪ ಮಾತನಾಡಿ, 20 ವರ್ಷಗಳಿಂದ ನಮಗೆ ಸಾಗುವಳಿ ಚೀಟಿ ಸಿಕ್ಕಿಲ್ಲವೆಂದು ದೂರಿದರು. ರೈತ ಬೈರಗಾನಹಳ್ಳಿ ಕೃಷ್ಣಪ್ಪ 1998 ರಲ್ಲಿ ಅರ್ಜಿ ಸಲ್ಲಿಸಿದ್ದರೂ ಇನ್ನೂ ಸಾಗುವಳಿ ಚೀಟಿ ಸಿಗದೆ ಭಯದಿಂದ ಬದುಕುವಂತಾಗಿದೆ ಎಂದು ತಿಳಿಸಿದರು.
- Advertisement -
- Advertisement -
- Advertisement -
- Advertisement -