ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ಪ್ರೌಢಶಾಲೆ ಆವರಣದಲ್ಲಿ ಬಿ.ಎಂ.ವಿ ಎಜುಕೇಷನ್ ಟ್ರಸ್ಟ್, ಬೆಂಗಳೂರಿನ ಸಮಾಜವಾದಿ ಅಧ್ಯಯನ ಕೇಂದ್ರ ಮತ್ತು ರೋಟರಿ ಬೆಂಗಳೂರು ಹೈಗ್ರೌಂಡ್ಸ್ ಅವರ ಜಂಟಿ ಆಶ್ರಯದಲ್ಲಿ ರಾಷ್ಟ್ರ ಸೇವಾದಳದ 7 ದಿನಗಳ ವಸತಿ ಶಿಬಿರವನ್ನು ಆಯೋಜಿಸಲಾಗಿದೆ. ಏಪ್ರಿಲ್ 16 ರಿಂದ 22 ರವರೆಗೂ ನಡೆಯಲಿರುವ ಈ ತರಬೇತಿ ಶಿಬಿರದಲ್ಲಿ ಬಿ.ಎಂ.ವಿ ಪ್ರೌಢಶಾಲೆಯ 100 ಮಂದಿ ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಲ್.ಕಾಳಪ್ಪ ತಿಳಿಸಿದರು.
ನಗರದಲ್ಲಿ ಮಂಗಳವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಹಾನ್ ಸಮಾಜವಾದಿ ಮುಖಂಡರಾಗಿದ್ದ ಸಾಣೆ ಗುರೂಜಿ, ಎಸ್.ಎಂ.ಜೋಷಿ ಮತ್ತು ಎನ್.ಜಿ.ಗೋರೆ ಅವರಿಂದ ಪ್ರಾರಂಭಿಸಲ್ಪಟ್ಟ ರಾಷ್ಟ್ರ ಸೇವಾದಳವು ರಾಷ್ಟ್ರೀಯತೆ, ಪ್ರಜಾಪ್ರಭುತ್ವ, ಸಮಾಜವಾದ, ಸಮಾನತೆ, ಜಾತ್ಯಾತೀತ ಹಾಗೂ ಸೋದರಭಾವ ತತ್ವಗಳನ್ನು ಹೊಂದಿದೆ.
ಪ್ರೌಢಶಾಲಾ ಮಕ್ಕಳಿಗೆ ಕಿರಿಯ ವಯಸ್ಸಿನಲ್ಲೇ ಸಮಾಜವಾದದ ಮೂಲ ಪರಿಕಲ್ಪನೆಗಳಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರಭಾವಗಳ ಜೊತೆಗೆ ರಾಷ್ಟ್ರೀಯತೆ ಮತ್ತು ವೈಜ್ಞಾನಿಕ ಮನೋಭಾವಗಳನ್ನು ಬೆಳೆಸಿಕೊಳ್ಳಬೇಕೆನ್ನುವ ಅರಿವು ಮೂಡಿಸುವ ಪ್ರಮುಖ ಉದ್ದೇಶವನ್ನು ಈ ತರಬೇತಿ ಶಿಬಿರ ಹೊಂದಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಯೋಗ, ವ್ಯಾಯಾಮ, ಕವಾಯತು, ಹಾಡು, ನೃತ್ಯ, ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವಿಶ್ವಸಂಸ್ಥೆ ಪ್ರಶಸ್ತಿ ಪುರಸ್ಕೃತೆ ಹಾಗೂ ‘ಬೆಳಕು’ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿ ಅಶ್ವಿನಿ ಅಂಗಡಿ ಈ ತರಬೇತಿ ಶಿಬಿರವನ್ನು ಉದ್ಘಾಟಿಸುವರು. ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ, ಗಾಂಧೀಸ್ಮಾರಕ ಕೇಂದ್ರದ ಉಪಾಧ್ಯಕ್ಷ ಡಾ.ಜಿ.ಬಿ.ಶಿವರಾಜು, ಸಮಾಜವಾದಿ ಅಧ್ಯಯನ ಕೇಂದ್ರದ ಬಾಪು ಹೆದ್ದೂರಶೆಟ್ಟಿ, ಪ್ರೊ.ಹನುಮಂತ, ಜಿ.ವಿ.ಸುಂದರ್, ನಿವೃತ್ತ ಅಪರ ತೋಟಗಾರಿಕಾ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ, ಪ್ರಗತಿ ಕಾಲೇಜಿನ ಪ್ರಾಂಶುಪಾಲ ಎನ್.ನಾಗರಾಜ್, ಸ್ಮೈಲ್ ಫೌಂಡೇಷನ್ನ ಪ್ರದೀಪ್ ರಾಧಾಕೃಷ್ಣ, ಎಸ್.ನಾರಾಯಣಸ್ವಾಮಿ, ರೊಟೇರಿಯನ್ ವಿ.ರಾಮಚಂದ್ರ ಮುಂತಾದವರು ಶಿಬಿರದಲ್ಲಿ ಭಾಗವಹಿಸುವರು.
ಸಮಾರೋಪ ಭಾಷಣಕ್ಕಾಗಿ ರಾಷ್ಟ್ರ ಸೇವಾದಳದ ರಾಷ್ಟ್ರೀಯ ಅಧ್ಯಕ್ಷ ಸುರೇಶ್ ಖೈರ್ನಾರ್ ಮತ್ತು ರಾಷ್ಟ್ರ ಸೇವಾದಳದ ಮಾಜಿ ಅಧ್ಯಕ್ಷ ಭರತ ಲಾಟಕರ ಆಗಮಿಸಲಿದ್ದಾರೆ. ಪುಣೆಯ ರಾಷ್ಟ್ರ ಸೇವಾದಳದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾಬಾಸಾಹೇಬ್ ನದಾಫ್ ನೇತೃತ್ವದಲ್ಲಿ ನುರಿತ 4 ಜನರ ತಂಡ ಏಳು ದಿನಗಳ ತರಬೇತಿ ಶಿಬಿರವನ್ನು ನಡೆಸಿಕೊಡಲಿದ್ದಾರೆ ಎಂದು ಹೇಳಿದರು.
ಭಕ್ತರಹಳ್ಳಿ ಮೂಲದ ಹೆಸರಾಂತ ಅಡುಗೆ ಗುತ್ತಿಗೆದಾರರು ಶಿಬಿರಾರ್ಥಿಗಳಿಗೆ ಊಟ, ತಿಂಡಿಯ ಪ್ರಾಜೋಜನೆ ನೀಡಿ ಗ್ರಾಮದ ಮಕ್ಕಳಿಗೆ ನೆರವಾಗುತ್ತಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಂದ ಪ್ರತಿಭಾ ಪ್ರದರ್ಶನವಿರುತ್ತದೆ ಎಂದು ವಿವರಿಸಿದರು.
ಬಿ.ಎಂ.ವಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಬಿ.ವಿ.ಮುನೇಗೌಡ, ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ಎಸ್.ನಾರಾಯಣಸ್ವಾಮಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -