ನವೆಂಬರ್ ತಿಂಗಳಿನಿಂದ ನೀರಿನ ಬಿಕ್ಕಟ್ಟು ಗಂಭೀರ ಸ್ವರೂಪ ಪಡೆಯಲಿದ್ದು, ಅಧಿಕಾರಿಗಳು ಈ ಬಗ್ಗೆ ಮುಂದಾಲೋಚನಾ ಕ್ರಮಗಳನ್ನು ಕೈಗೊಂಡು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಸಂಸದ ಕೆ.ಎಚ್.ಮುನಿಯಪ್ಪ ಸೂಚಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಾದ್ಯಂತ ಕೊರೆಸಿರುವ 72 ಕೊಳವೆಬಾವಿಗಳಲ್ಲಿ ನೀರು ಸಿಕ್ಕಿದ್ದು, ಸುಮಾರು ಒಂದು ವರ್ಷದಿಂದ ಮೋಟಾರ್ ಪಂಪು, ಪೈಪ್‌ಲೈನ್ ಹಾಗೂ ವಿದ್ಯುತ್ ಸಂಪರ್ಕ ಒದಗಿಸಿಲ್ಲ ಎಂದು ಶಾಸಕ ಎಂ.ರಾಜಣ್ಣ ದೂರಿದ ಹಿನ್ನೆಲೆಯಲ್ಲಿ, ಸಂಸದ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಕ್ಷಿಪ್ರ ಗತಿಯಲ್ಲಿ ತೊಂದರೆಗಳನ್ನು ಸರಿಪಡಿಸಿಕೊಂಡು ನೀರಿನ ಅಭಾವವನ್ನು ಪರಿಹರಿಸಲು ಸೂಚಿಸಿದರು.
ತಾಲ್ಲೂಕು ಪಂಚಾಯತಿ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ತಾಲ್ಲೂಕಿನ ಉತ್ತರ ಭಾಗದಲ್ಲಿ ಫ್ಲೋರೈಡ್ ಅಂಶ ಮಿತಿಮೀರಿದೆ. ಪ್ರತಿಯೊಂದು ಕೊಳವೆ ಬಾವಿಯ ನೀರನ್ನೂ ಶುದ್ಧೀಕರಿಸಲು ಘಟಕಗಳನ್ನು ನಿರ್ಮಿಸುವ ಅಗತ್ಯವನ್ನು ಪ್ರಸ್ತಾಪಿಸಿದಾಗ, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಅಧಿಕಾರಿಗಳು ಕುಡಿಯಲು ಬಳಸುವ 600 ಅಡಿಗೂ ಆಳದಿಂದ ನೀರೆತ್ತುವ ಎಲ್ಲಾ ಕೊಳವೆ ಬಾವಿಗೂ ಶುದ್ಧೀಕರಣ ಘಟಕ ಅಳವಡಿಸಬೇಕು ಎಂದರು.
ಖಾಸಗಿ ಕೊಳವೆ ಬಾವಿಗಳಿಗೆ ಒಂದು ಸಾವಿರ ಗ್ಯಾಲನ್ ನೀರಿಗೆ 10 ಸಾವಿರ ರೂಗಳನ್ನು ಸರ್ಕಾರ ನಿಗದಿಪಡಿಸಿರುವುದು ಸಾಲದು ಕನಿಷ್ಠ 2 ಲಕ್ಷ ರೂಗಳಾದರೂ ನೀಡಬೇಕು ಹಾಗೂ ಒತ್ತಾಯಪೂರ್ವಕವಾಗಿ ಅವರಿಂದ ನೀರು ಪಡೆಯುವುದನ್ನು ನಿಲ್ಲಿಸಬೇಕೆಂದು ಜಿಲ್ಲಾ ಪಂಚಾಯತಿ ಸದಸ್ಯೆಸ್.ಎಂ.ನಾರಾಯಣಸ್ವಾಮಿ ಮತ್ತು ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಒತ್ತಾಯಿಸಿದಾಗ, ಸರ್ಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸುವುದಾಗಿ ಸಂಸದ ಕೆ.ಎಚ್.ಮುನಿಯಪ್ಪ ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಬಯಲು ಸೀಮೆ ಪ್ರದೇಶದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಕೆರೆ ಒತ್ತುವರಿ, ಮರಳು ದಂಧೆ, ನೀಲಗಿರಿಗೆ ಅಧಿಕಾರಿಗಳು ಅವಕಾಶ ನೀಡಬಾರದು. ಕೆರೆಗಳಲ್ಲಿರುವ ಜಾಲಿಮರ ಹಾಗೂ ಬಿದಿರು ತೆಗೆಯಬೇಕು ಎಂದು ಸೂಚಿಸಿದರು.
ಸಾರ್ವಜನಿಕ ಆಸ್ಪತ್ರೆಯ ನೀರಿನ ಸಮಸ್ಯೆಯ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ಪ್ರಸ್ತಾಪಿಸಿದಾಗ, ಶಾಸಕ ಎಂ.ರಾಜಣ್ಣ ಕೊಳವೆ ಬಾವಿಯನ್ನು ಕೊರೆಸಲು ಜಿಲ್ಲಾ ಪಂಚಾಯತಿ ಎಂಜಿನಿಯರ್‌ಗೆ ಸೂಚಿಸಿದರು.
‘ಅಕ್ರಮವಾಗಿ ರಾತ್ರಿ ವೇಳೆ ಟ್ರಾಕ್ಟರ್ ಮತ್ತು ಲಾರಿಗಳಲ್ಲಿ ಮರಳು ಸಾಗಾಣಿಕೆ ತಾಲ್ಲೂಕಿನಲ್ಲಿ ನಡೆದಿದ್ದರೂ ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಹಾಗೂ ಕಂದಾಯ ಇಲಾಖೆ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ಇಲಾಖೆಯ ಅಧಿಕಾರಿಗಳು ಈ ದಂಧೆಯಲ್ಲಿ ಶಾಮೀಲಾಗಿರುವುದು ಸ್ಪಷ್ಟವಾಗಿದೆ. ರೈತರು ಕಟ್ಟುವ ಮನೆಗಳಿಗೆ ಹಾಗೂ ಸರ್ಕಾರದಿಂದ ಅನುದಾನ ಪಡೆದ ಫಲಾನುಭವಿಗಳು ಕಟ್ಟುವ ಮನೆಗಳಿಗೆ ಮರಳು ಸಿಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ ಮತ್ತು ನಂದನಂ ಶ್ರೀರಾಮರೆಡ್ಡಿ ಒತ್ತಾಯಿಸಿದರು. ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು.
ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಎಂ.ರಾಜಣ್ಣ, ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಪೊಲೀಸ್ ಎಸ್.ಪಿ ದಿವ್ಯಾ ಗೋಪಿನಾಥ್, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -