ತಾಲ್ಲೂಕಿನ ಮುತ್ತೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಕ್ಕಿಗಳ ಚಿಲಿಪಿಲಿ ಸದ್ದಿನಂತೆ ಮಕ್ಕಳ ಒಡನಾಟ, ಮಾತುಕತೆ, ಭಾವನೆಗಳ ಹಂಚಿಕೊಳ್ಳುವಿಕೆ ನಡೆದಿತ್ತು. ಶಾಲೆಯು ಎಂದಿನಂತಿರದೆ ನೂರು ಮಂದಿ ಹೊಸ ವಿದ್ಯಾರ್ಥಿಗಳ ಆಗಮನದಿಂದಾಗಿ ಕಳೆಗಟ್ಟಿತ್ತು.
ವಿವಿಧ ದೇಶಗಳಿಂದ ಬೆಂಗಳೂರಿಗೆ ಬಂದು ವೃತ್ತಿ ನಿರತರಾಗಿರುವವರು ತಮ್ಮ ಮಕ್ಕಳನ್ನು ಓದಿಸುವ ಬೆಂಗಳೂರಿನ ದಿ ಇಂಟರ್ನ್ಯಾಷನಲ್ ಸ್ಕೂಲ್ ಬ್ಯಾಂಗಳೂರ್(ಟಿಐಎಸ್ಬಿ) ಶಾಲೆಯ ಒಂಭತ್ತನೇ ತರಗತಿಯ ನೂರು ಮಂದಿ ವಿದ್ಯಾರ್ಥಿಗಳು ಮುತ್ತೂರಿನ ಸರ್ಕಾರಿ ಪ್ರೌಢಶಾಲೆಗೆ ಬಂದಿದ್ದರು.
‘ನಮ್ಮ ಮುತ್ತೂರು’ ಸಂಸ್ಥೆ ಆಯೋಜಿಸಿದ್ದ ಈ ನಗರ ಮತ್ತು ಗ್ರಾಮೀಣ ಮಕ್ಕಳ ಪರಸ್ಪರ ಒಡನಾಟದ ಕಾರ್ಯಕ್ರಮಕ್ಕೆ ಮಕ್ಕಳು ಉತ್ತಮವಾಗಿ ಸ್ಪಂದಿಸಿದರು. ಶಾಲೆಯ ಕೋಣೆಯಲ್ಲಿ ಒಬ್ಬ ಟಿಐಎಸ್ಬಿ ವಿದ್ಯಾರ್ಥಿ ಪಕ್ಕ ಮುತ್ತೂರಿನ ಪ್ರೌಢಶಾಲೆಯ ಒಬ್ಬ ವಿದ್ಯಾರ್ಥಿಯಂತೆ ಕುಳಿತುಕೊಂಡ ಮಕ್ಕಳಲ್ಲಿ ಹೊಸ ಪರಿಚಯದೊಂದಿಗೆ ಗೆಳೆತನ ಮೂಡಿದವು. ಪರಸ್ಪರ ಅರಿಯಲು ಇಂಗ್ಲೀಷ್ ಮಾಧ್ಯಮವಾದರೂ ಭಾವನೆಗಳನ್ನು ಹಂಚಿಕೊಳ್ಳಲು ಭಾಷೆಯು ಅಡ್ಡಿಯಾಗಲಿಲ್ಲ. ತಮ್ಮ ಕುಟುಂಬದ ಬಗ್ಗೆ ವಿವರಗಳನ್ನು ಬರೆಯಲು ಪ್ರತಿಯೊಬ್ಬರಿಗೂ ಕಾರ್ಡುಗಳನ್ನು ವಿತರಿಸಿ ಆ ಮೂಲಕ ಪರಸ್ಪರ ಅರಿಯಲು ನೆರವನ್ನು ನೀಡಲಾಯಿತು.
ಮುತ್ತೂರಿಗೆ ಆಗಮಿಸಿದ್ದ ಟಿಐಎಸ್ಬಿ ಶಾಲೆಯ ಮಕ್ಕಳು ಮುತ್ತೂರು ಗ್ರಾಮದಲ್ಲಿ ಹೈನುಗಾರಿಕೆ, ರೇಷ್ಮೆ ಗೂಡಿನ ಹಂತಗಳು, ದ್ರಾಕ್ಷಿ ಬೆಳೆ, ತರಕಾರಿ ಮುಂತಾದವುಗಳನ್ನು ಕಂಡು ಗ್ರಾಮೀಣ ಪರಿಸರವನ್ನು ಆಸ್ವಾದಿಸಿದರು. ಟ್ರಾಕ್ಟರಿನಲ್ಲಿ ಕುಳಿತು ಪಯಣಿಸಿದರು. ತಾವೂ ಮಣ್ಣಿನ ಮಕ್ಕಳಂತೆ ಮುತ್ತೂರು ಗ್ರಾಮದ ಸ್ಮಶಾನದ ಬಳಿ ನೂರು ಗಿಡಗಳನ್ನು ನೆಟ್ಟರು. ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿನ ಔಷಧಿ ವನದಲ್ಲಿ ತಾವೂ ಒಂದಷ್ಟು ಸಸಿಗಳನ್ನು ನೆಟ್ಟರು.
ಮುತ್ತೂರಿನ ಮಕ್ಕಳು ಚೀನಾ, ಬ್ರಿಟನ್ ಮುಂತಾದ ದೇಶಗಳ ಮೂಲದ ಹಾಗೂ ಉತ್ತರ ಭಾರತ ಮೂಲದ ಮಕ್ಕಳೊಂದಿಗೆ ಅವರ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದರು. ಸರಾಗವಾಗಿ ಇಂಗ್ಲೀಷ್ನಲ್ಲಿ ಮಾತು ಬರದಿದ್ದರೂ ಸಂವಹನ ಸಾಧಿಸಿ ಹೊಸ ಹೊಸ ಗೆಳೆಯರನ್ನು ಸಂಪಾದಿಸಿದರು. ಪರಸ್ಪರ ಬರವಣಿಗೆಯ ರೀತಿಯನ್ನು ಹೋಲಿಕೆ ಮಾಡಿಕೊಂಡರು.
ಗ್ರಾಮೀಣ ಕ್ರೀಡೆಗಳಾದ ಗಿಲ್ಲಿದಾಂಡು, ಬುಗುರಿ, ಲಗೋರಿ, ಗಾಳಿಪಟ, ಅಳಗುಳಿಮನೆ ಮುಂತಾದವುಗಳನ್ನು ಎಲ್ಲಾ ಮಕ್ಕಳೂ ಒಂದಾಗಿ ಆಡಿ ನಲಿದರು. ಎರಡೂ ಮಕ್ಕಳ ಬಾಂಧವ್ಯ ಬೆಸೆಯಲು ಕ್ವಿಜ್ ಮುಂತಾದ ಚಟುವಟಿಕೆಗಳನ್ನು ಎರಡೂ ಶಾಲೆಯ ಶಿಕ್ಷಕರು ನಡೆಸಿದರು.
ಬೆಂಗಳೂರಿನಿಂದ ಆಗಮಿಸಿದ್ದ ಮಕ್ಕಳು ಮುತ್ತೂರು ಶಾಲೆಯ ತಮ್ಮ ಹೊಸ ಸ್ನೇಹಿತರಿಗಾಗಿ ಪುಟ್ಟ ಪುಟ್ಟ ಉಡುಗೊರೆಗಳನ್ನು ತಂದಿದ್ದರು. ಉಡುಗೊರೆಗಳನ್ನು ತಮ್ಮ ಹೊಸ ಸ್ನೇಹಿತರಿಂದ ಪಡೆದ ಮುತ್ತೂರಿನ ಮಕ್ಕಳು ಶಾಲಾ ಅವಧಿ ಮುಗಿಯುತ್ತಿದ್ದಂತೆ ತಮ್ಮ ಮನೆ, ತೋಟ, ದೇವಸ್ಥಾನ ಮುಂತಾದ ಗ್ರಾಮದ ವಿವಿಧ ತಾಣಗಳನ್ನು ಸುತ್ತಾಡಿಸಿದರು. ತಮ್ಮ ಕುಟುಂಬದವರಿಗೆಲ್ಲಾ ಪರಿಚಯಿಸಿದರು.
‘ಮಕ್ಕಳ ಮನಸ್ಸು ಮುಗ್ಧವಾದುದು. ಕಲ್ಮಶವಿರುವುದಿಲ್ಲ. ಸಂಪರ್ಕ ಕ್ರಾಂತಿಯಿಂದಾಗಿ ಇಡೀ ಪ್ರಪಂಚವೇ ಒಂದು ಗ್ರಾಮದಂತಾದರೂ, ಎಷ್ಟೋ ಮಕ್ಕಳಿಗೆ ಹಳ್ಳಿಯ ಪರಿಕಲ್ಪನೆ ಇರುವುದಿಲ್ಲ. ತಾವು ಕುಡಿಯುವ ಹಾಲಿನ ಹಿಂದಿನ ಶ್ರಮದ ಅರಿವಿರುವುದಿಲ್ಲ. ಗ್ರಾಮೀಣ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಮತ್ತು ನಗರ ಮಕ್ಕಳಿಗೆ ಗ್ರಾಮವನ್ನು ತೋರಿಸಲು ಹೊಸ ಪ್ರಯತ್ನವನ್ನು ನಡೆಸಿದ್ದೇವೆ. ಇದಕ್ಕೆ ಶಾಲೆಯ ಶಿಕ್ಷಕರು, ಗ್ರಾಮಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ನಮ್ಮ ಮುತ್ತೂರು ಸಂಸ್ಥೆಯ ಉಷಾಶೆಟ್ಟಿ ತಿಳಿಸಿದರು.
- Advertisement -
- Advertisement -
- Advertisement -
- Advertisement -