ದ್ಯಾವಪ್ಪನಗುಡಿಯ ದ್ಯಾವಪ್ಪ ತಾತ ಕೃಪಾಪೋಷಿತ ನಾಟಕ ಮಂಡಳಿ, ಶ್ರೀ ವೇಣುಗೋಪಾಲಸ್ವಾಮಿ ಡ್ರಾಮ ಸೀನರಿ ಅಮಿಟಗಾನಹಳ್ಳಿ ಅಶ್ವತ್ಥಪ್ಪ ಅವರ ರಂಗಸಜ್ಜಿಕೆಯಲ್ಲಿ ನಡೆದ ಪೌರಾಣಿಕ ನಾಟಕ “ಕುರುಕ್ಷೇತ್ರ”ವನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದೆಲ್ಲ ಜನರು ಆಗಮಿಸಿದ್ದರು. ರಾತ್ರಿ ೯ ಗಂಟೆಯಿಂದ ಬೆಳಗಿನ ಜಾವ ೨ ಗಂಟೆಯವರೆಗೂ ನಡೆದ ನಾಟಕವನ್ನು ಜನರು ನೋಡಿ ಆನಂದಿಸಿದರು.
ನಾಟಕಕ್ಕೆ ವಾದ್ಯಗೋಷ್ಠಿಯನ್ನು ದೊಡ್ಡತೇಕಹಳ್ಳಿ ಹಾರ್ಮೋನಿಯಮ್ ದ್ಯಾವಪ್ಪ, ವೆಂಕಟಗಿರಿಕೋಟೆ ಸೋಲ್ಯಾಕ್ ಸುಬ್ರಮಣ್ಯಾಚಾರ್, ತಬಲ ಚಂಡೂರು ಮಹೇಶ್, ಘಟಂ ಅಬ್ಲೂಡು ಚನ್ನಕೃಷ್ಣಪ್ಪ ನಡೆಸಿಕೊಟ್ಟರು.
ಕುಂತಿ ಮತ್ತು ದ್ರೌಪದಿ ಪಾತ್ರವನ್ನು ದ್ಯಾವಪ್ಪನಗುಡಿ ಜಯಮ್ಮ, ಉತ್ತರೆ ಪಾತ್ರಧಾರಿ ಜಯಂತಿಗ್ರಾಮದ ಮಂಜುಶ್ರೀ, ಸತ್ಯಭಾಮೆಯಾಗಿ ಜಯಂತಿಗ್ರಾಮದ ಕನಕದುರ್ಗ ತಮ್ಮ ನೃತ್ಯ ಹಾಗೂ ಗಾಯನದಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ನಾರದ, ಶ್ರೀಕೃಷ್ಣ, ಪಂಚಪಾಂಡವರು, ಭೀಷ್ಮ, ದುರ್ಯೋಧನ, ದುಶ್ಯಾಸನ, ಶಕುನಿ, ವಿಧುರ, ಅಶ್ವತ್ಥಾಮ, ಅಭಿಮನ್ಯು, ದ್ರೋಣಾಚಾರ್ಯ ಪಾತ್ರಗಳನ್ನು ಸ್ಥಳೀಯರೇ ಮಾಡಿದ್ದುದು ವಿಶೇಷವಾಗಿತ್ತು.
ದೊಡ್ಡತೇಕಹಳ್ಳಿ ಹಾರ್ಮೋನಿಯಮ್ ದ್ಯಾವಪ್ಪ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಪೌರಾಣಿಕ ನಾಟಕಕ್ಕೆ ಕಳೆದ ಆರು ತಿಂಗಳಿನಿಂದ ತಾಲೀಮು ನಡೆದಿತ್ತು. ಸ್ಥಳೀಯರೇ ಎಲ್ಲ ಪಾತ್ರಗಳ ಸಂಭಾಷಣೆ, ಹಾಡು, ಹಾವಭಾವಗಳನ್ನು ಅಭ್ಯಾಸ ಮಾಡಿ ಕರಗತ ಮಾಡಿಕೊಂಡು ಪರಿಣಿತ ಕಲಾವಿದರಂತೆ ನಟಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು.
ನಟರಿಗೆ ಬಣ್ಣ ಹಚ್ಚಿ ಪಾತ್ರಕ್ಕೆ ತಕ್ಕ ವೇಷಭೂಷಣಗಳೊಂದಿಗೆ ರಂಗದ ಮೇಲೆ ವಿಜೃಂಭಿಸಲು ಮೇಕಪ್ ನಾರಾಯಣಸ್ವಾಮಿ ಸಹಕರಿಸಿದರು. “ಕಳೆದ ೩೫ ವರ್ಷಗಳಿಂದಲೂ ನಟರಿಗೆ ಮೇಕಪ್ ಮಾಡುವುದೇ ನನ್ನ ಕೆಲಸವಾಗಿದೆ. ನನ್ನ ತಂದೆ ಮೇಕಪ್ ವೆಂಕಟೇಶಪ್ಪ ಅವರಿಂದ ಈ ವಿದ್ಯೆಯನ್ನು ಕಲಿತೆ. ಮೊದಲಾದರೆ ವಾರಕ್ಕೊಂದು ಅಥವಾ ಎರಡು ನಾಟಕ ನಡೆಯುತ್ತಿತ್ತು. ನಾವು ಸೀನರಿ ಬಾಡಿಗೆಗೆ ಕೊಡುತ್ತಿದ್ದೆವು. ಈಗ ನಾಟಕಗಳು ಬಲು ಅಪರೂಪ. ಈ ಕಲೆ ನಶಿಸುವ ಹಂತಕ್ಕೆ ಬರುತ್ತಿದೆ. ವರ್ಷಕ್ಕೆ ಒಂದು ಅಥವಾ ಎರಡು ನಾಟಕಗಳು ನಡೆದರೆ ಹೆಚ್ಚು ಎನ್ನುವಂತಾಗಿದೆ. ಪೌರಾಣಿಕ ನಾಟಕಗಳ ಮೂಲಕ ನಮ್ಮ ಸಂಸ್ಕೃತಿ, ಪುರಾಣ ಕಥೆಗಳು ಈಗಿನ ಪೀಳಿಗೆಗೆ ತಲುಪಬೇಕಿದೆ” ಎಂದು ಮೇಕಪ್ ನಾರಾಯಣಸ್ವಾಮಿ ತಿಳಿಸಿದರು.
- Advertisement -
- Advertisement -
- Advertisement -